ADVERTISEMENT

ಇಂದಿರಾ ಕ್ಯಾಂಟಿನ್ ವ್ಯವಸ್ಥಿತವಾಗಿ ನಡೆಯಲಿ: ಶಾಸಕ ಅಶೋಕ ಮನಗೂಳಿ ಸೂಚನೆ

​ಪ್ರಜಾವಾಣಿ ವಾರ್ತೆ
Published 3 ಜೂನ್ 2025, 13:21 IST
Last Updated 3 ಜೂನ್ 2025, 13:21 IST
ಸಿಂದಗಿ ಪಟ್ಟಣದ ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿ ಶಾಸಕ ಅಶೋಕ ಮನಗೂಳಿ ಅವರು ಮಂಗಳವಾರ ಇಂದಿರಾ ಕ್ಯಾಂಟಿನ್ ಉದ್ಘಾಟಿಸಿದರು
ಸಿಂದಗಿ ಪಟ್ಟಣದ ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿ ಶಾಸಕ ಅಶೋಕ ಮನಗೂಳಿ ಅವರು ಮಂಗಳವಾರ ಇಂದಿರಾ ಕ್ಯಾಂಟಿನ್ ಉದ್ಘಾಟಿಸಿದರು   

ಸಿಂದಗಿ: ‘2013-2018ರ ಅವಧಿಯಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಕೊಟ್ಟ 158 ಭರವಸೆಗಳಲ್ಲಿ ‘ಇಂದಿರಾ ಕ್ಯಾಂಟಿನ್’ ಕೂಡ ಒಂದಾಗಿತ್ತು. ಇದು ಅವರ ಕನಸಿನ ಯೋಜನೆಯಾಗಿದೆ. ಇಂದು ಆರಂಭಗೊಂಡಿರುವ ಕ್ಯಾಂಟಿನ್‌ ನಿರಂತರವಾಗಿ ನಡೆಯಲಿ’ ಎಂದು ಶಾಸಕ ಅಶೋಕ ಮನಗೂಳಿ ಪುರಸಭೆ ಆಡಳಿತಕ್ಕೆ ಸೂಚನೆ ನೀಡಿದರು.

ಪಟ್ಟಣದ ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿ ಮಂಗಳವಾರ ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರ ಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಇಂದಿರಾ ಕ್ಯಾಂಟಿನ್ ಉದ್ಘಾಟಿಸಿ ಮಾತನಾಡಿದರು.

‘ಸಾರ್ವಜನಿಕರು ಇಲ್ಲಿ ಕಡಿಮೆ ದರದಲ್ಲಿ ನೀಡಲಾಗುವ ಉಪಾಹಾರ, ಊಟದ ಸದುಪಯೋಗ  ಪಡೆದುಕೊಳ್ಳಬೇಕು. ಪುರಸಭೆ ಆಡಳಿತದ ಸದಸ್ಯರು, ಕಾರ್ಯಾಲಯದ ಸಿಬ್ಬಂದಿ ಕ್ಯಾಂಟಿನ್ ವ್ಯವಸ್ಥಿತವಾಗಿ ನಡೆಯುವಂತೆ ಎಚ್ಚರಿಕೆ ವಹಿಸಬೇಕು’ ಎಂದು ಸೂಚಿಸಿದರು.

ADVERTISEMENT

‘ಸರ್ಕಾರ ಪ್ರತಿ ಗ್ರಾಮ ಪಂಚಾಯಿತಿಗಳಲ್ಲಿ ಪಬ್ಲಿಕ್ ಸ್ಕೂಲ್ ಪ್ರಾರಂಭಿಸುವ ಉತ್ತಮ ಕಾರ್ಯ ಕೈಗೆತ್ತಿಕೊಂಡಿದೆ. ಗ್ರಾಮೀಣ ಭಾಗದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರಕಿಸಿಕೊಡಲಾಗುವುದು’ ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಪುರಸಭೆ ಅಧ್ಯಕ್ಷ ಡಾ.ಶಾಂತವೀರ ಮನಗೂಳಿ ಮಾತನಾಡಿ, ‘ಇಂದಿರಾ ಕ್ಯಾಂಟಿನ್ ಅನ್ನು ಸ್ವಚ್ಛತೆಯಿಂದ ಇಟ್ಟುಕೊಳ್ಳಬೇಕು. ಪುರಸಭೆ ಅಧಿಕಾರಿ ವರ್ಗ ನಿತ್ಯ ಕ್ಯಾಂಟಿನ್‌ಗೆ ಭೇಟಿ ನೀಡಿ ಗುಣಮಟ್ಟ ಕಾಪಾಡಿಕೊಳ್ಳಬೇಕು’ ಎಂದು ಸೂಚನೆ ನೀಡಿದರು.

ಜಿಲ್ಲಾ ನಗರಾಭಿವೃದ್ಧಿಕೋಶ ಯೋಜನಾ ನಿರ್ದೇಶಕ ಬದ್ರುದ್ದೀನ ಸೌದಾಗರ ಪ್ರಾಸ್ತಾವಿಕವಾಗಿ ಮಾತನಾಡಿ, ₹87 ಲಕ್ಷ ವೆಚ್ಚದಲ್ಲಿ ಇಂದಿರಾ ಕ್ಯಾಂಟಿನ್ ನಿರ್ಮಾಣಗೊಂಡಿದೆ’ ಎಂದು ತಿಳಿಸಿದರು.

ಶಾಸಕರು, ಪುರಸಭೆ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಹಾಗೂ ಸಾರ್ವಜನಿಕರೊಂದಿಗೆ ಚೌಚೌ ಬಾತ್ ಉಪಾಹಾರ ಸೇವಿಸಿದರು.

ಪುರಸಭೆ ಉಪಾಧ್ಯಕ್ಷ ಸಂದೀಪ ಚೌರ, ಮುಖ್ಯಾಧಿಕಾರಿ ರಾಜಶೇಖರ ಎಸ್. ಪುರಸಭೆ ಸದಸ್ಯರು ಹಾಗೂ ಜನಪ್ರತಿನಿಧಿಗಳು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.