ADVERTISEMENT

ಬಹುತ್ವ ಭಾರತಕ್ಕಾಗಿ ಶ್ರಮಿಸೋಣ: ಪೂಜಾರಿ

ಅಂಬೇಡ್ಕರ್ ಹಬ್ಬಕ್ಕೆ ಅದ್ಧೂರಿ ಚಾಲನೆ

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2025, 15:51 IST
Last Updated 11 ಏಪ್ರಿಲ್ 2025, 15:51 IST
ವಿಜಯಪುರ ನಗರದಲ್ಲಿ ಶುಕ್ರವಾರ  ಅಂಬೇಡ್ಕರ್ ಹಬ್ಬದ ಅಂಗವಾಗಿ ನಡೆದ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಮಹಿಳೆಯರು 
ವಿಜಯಪುರ ನಗರದಲ್ಲಿ ಶುಕ್ರವಾರ  ಅಂಬೇಡ್ಕರ್ ಹಬ್ಬದ ಅಂಗವಾಗಿ ನಡೆದ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಮಹಿಳೆಯರು    

ಪ್ರಜಾವಾಣಿ ವಾರ್ತೆ

ವಿಜಯಪುರ: ಬಹುತ್ವ ಭಾರತಕ್ಕಾಗಿ ನಾವೆಲ್ಲರೂ ಶ್ರಮ ವಹಿಸಬೇಕಾಗಿದೆ, ಅಂಬೇಡ್ಕರ್ ಚಿಂತನೆ ಉಳಿಸಿ, ಬೆಳೆಸಿಕೊಳ್ಳಲು ಇಂತಹ ಹಬ್ಬಗಳು ಸ್ಪೂರ್ತಿಯಾಗಿವೆ ಎಂದು ದಲಿತ ವಿದ್ಯಾರ್ಥಿ ಪರಿಷತ್ತಿನ ಸಂಸ್ಥಾಪಕ ಶ್ರೀನಾಥ್ ಪೂಜಾರಿ ಹೇಳಿದರು.

ದಲಿತ ವಿದ್ಯಾರ್ಥಿ ಪರಿಷತ್, ಜಾಗೃತ ಕರ್ನಾಟಕ ಹಾಗೂ ಅನೌಪಚಾರಿಕ ಶಿಕ್ಷಣ ಸಂಸ್ಥೆಯ ಸಹಯೋಗದಲ್ಲಿ ಆಯೋಜಿಸಲಾಗಿರುವ ಅಂಬೇಡ್ಕರ್ ಹಬ್ಬದ ಉದ್ಘಾಟನಾ ಸಮಾರಂಭದಲ್ಲಿ ಶುಕ್ರವಾರ ಪ್ರಾಸ್ತಾವಿಕವಾಗಿ ಮಾತನಾಡಿದರು.

ADVERTISEMENT

ವಿಜಯಪುರ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೋಮುವಾದ ಹೆಚ್ಚಾಗುತ್ತಿದೆ. ಇದರ ವಿರುದ್ಧ ಬಲಿಷ್ಠ ಜನಾಂದೋಲನ ಬೆಳೆಸುವುದು ಅನಿವಾರ್ಯವಾಗಿದೆ ಎಂದರು.

ಬರಹಗಾರ್ತಿ ದು. ಸರಸ್ವತಿ ಮಾತನಾಡಿ, ಜ್ಯೋತಿ ಬಾಫುಲೆ ಅವರು ಮೌಢ್ಯ, ಕಂದಾಚಾರಗಳ ಪ್ರತಿಪಾದಕರ ಕಿರುಕುಳದ ವಿರುದ್ಧ ಸತತ ಹೋರಾಟ ನಡೆಸಿದರು. ಅವರ ಚಿಂತನೆಗಳು ಇಂದಿನ ಎಲ್ಲಾ ಸಮುದಾಯಗಳಿಗೆ ಪ್ರಸ್ತುತವಾಗಿವೆ ಎಂದರು.

ವಿಜಯಪುರ ಜೆಜ್ವಿಟ್ ಸಂಸ್ಥೆಗಳ ಮುಖ್ಯಸ್ಥ ಫಾದರ್‌ ಫ್ರಾನ್ಸಿಸ್‌ ಮಿನೇಜಸ್, ಶಿಕ್ಷಣದಿಂದಾಗಿ ಮಹಿಳೆಯರು ಇಂದು ಎಲ್ಲಾ ಕ್ಷೇತ್ರದಲ್ಲಿ ಸ್ವಾವಲಂಬಿಯಾಗಿ ಬದುಕು ಸಾಗಿಸುತ್ತಿದ್ದಾರೆ ಎಂದು ಹೇಳಿದರು.

ಮೆರವಣಿಗೆ:

ಅಂಬೇಡ್ಕರ್‌ ಹಬ್ಬದ ಅಂಗವಾಗಿ ನಗರದ ಸಿದ್ದೇಶ್ವರ ದೇವಸ್ಥಾನದಿಂದ ನೂರಾರು ಮಹಿಳೆಯರು ವಿವಿಧ ವೇಷಭೂಷಣದೊಂದಿಗೆ ಬೃಹತ್ ಯಾತ್ರೆಯೊಂದಿಗೆ ಸಮಾರಂಭಕ್ಕೆ ಆಗಮಿಸಿದರು. ಕಲಾ ತಂಡಗಳು ಹಾಗೂ ಬಂಜಾರಾ ನೃತ್ಯ ಮೆರವಣಿಗೆಗೆ ಮೆರಗು ನೀಡಿತು.

ಹಬ್ಬದ ವಿಶೇಷತೆ:

ಕಾರ್ಯಕ್ರಮ ನಡೆಯುವ ಆವರಣದಲ್ಲಿ 30 ಕ್ಕೂ ಅಧಿಕ ಮಳಿಗೆಗಳನ್ನು ತೆರೆಯಲಾಗಿದೆ. ವಿವಿಧ ರೀತಿಯ ಬಹುತ್ವದ ಭೋಜನದೊಂದಿಗೆ, ಒಡಲದನಿ ಮಹಿಳಾ ಒಕ್ಕೂಟದ ಶೇಂಗಾ ಹೋಳಿಗೆ, ರೊಟ್ಟಿ ಮಾರಾಟ ಹಾಗೂ  ಪುಸ್ತಕ ಮಾರಾಟಕ್ಕೆ ವ್ಯವಸ್ಥೆ ಮಾಡಲಾಗಿದೆ.  ಸೆಲ್ಪಿ ಸ್ಟ್ಯಾಂಡ್‌ ಹಾಗೂ ಪುಸ್ತಕ ಮಳಿಗೆಗಳಲ್ಲಿ ಜನಜಂಗುಳಿ ಕಂಡುಬಂತು.

ಕಂದಾಯ ಇಲಾಖೆ ಆಯುಕ್ತ ಪಿ. ಸುನೀಲ್‌ ಕುಮಾರ್‌ ಮಳಿಗೆಗೆ ಭೇಟಿ ನೀಡಿ ವೀಕ್ಷಿಸಿದರು.

ಅನೌಪಚಾರಿಕ ಶಿಕ್ಷಣ ಸಂಸ್ಥೆಯ ನಿರ್ದೇಶಕ ಫಾದರ್ ಟಿಯೋಲ್ ಮಾಚಾದೊ, ಜಾಗೃತಿ ಕರ್ನಾಟಕದ ರಾಜ್ಯ ವ್ಯವಸ್ಥಾಪಕರಾದ ಮಲ್ಲಿಗೆ ಸಿರಿಮನೆ, ಪತ್ರಕರ್ತ ಅನಿಲ್‌ ಹೊಸಮನಿ, ಚೆನ್ನು ಕಟ್ಟಿಮನಿ, ಮಹೇಶ್ವರಿ ಮಠಪತಿ, ಪ್ರಭುಗೌಡ ಪಾಟೀಲ, ಹಸಿರು ಸೇನೆ  ಜಿಲ್ಲಾ ಘಟಕದ ಅಧ್ಯಕ್ಷ ಸಂಗಮೇಶ ಸಗರ, ಅಕ್ಷಯ ಅಜಮನಿ, ಮಾದೇಶ ಚಲವಾದಿ, ಪ್ರಧಾನಿ ಮೂಲಿಮನಿ, ಮಹಾಂತೇಶ ದೊಡ್ಡಮನಿ, ವೆಂಕಟೇಶ ವಗ್ಯನವರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.