ADVERTISEMENT

ಲೋಕಸಭೆ ಟಿಕೆಟ್ ಹೆಗಡೆಗೆ ಕೊಡುವುದು ಬೇಡ: ಛಲವಾದಿ ನಾರಾಯಣಸ್ವಾಮಿ ಒತ್ತಾಯ

ವಿಧಾನ ಪರಿಷತ್‌ ಬಿಜೆಪಿ ಸದಸ್ಯ ಛಲವಾದಿ ನಾರಾಯಣಸ್ವಾಮಿ ಒತ್ತಾಯ

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2024, 16:30 IST
Last Updated 16 ಮಾರ್ಚ್ 2024, 16:30 IST
ಚಲವಾದಿ ನಾರಾಯಣಸ್ವಾಮಿ
ಚಲವಾದಿ ನಾರಾಯಣಸ್ವಾಮಿ   

ವಿಜಯಪುರ: ‘ಸಂವಿಧಾನ ತಿದ್ದುಪಡಿ ಹೇಳಿಕೆ ನೀಡಿರುವ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಸಂಸದ ಅನಂತಕುಮಾರ ಹೆಗಡೆಗೆ ಯಾವುದೇ ಕಾರಣಕ್ಕೂ ಬಿಜೆಪಿ ಟಿಕೆಟ್ ಕೊಡಬಾರದು’ ಎಂದು ವಿಧಾನ ಪರಿಷತ್ ಸದಸ್ಯ ಚಲವಾದಿ ನಾರಾಯಣಸ್ವಾಮಿ ಅವರು ಪಕ್ಷದ ವರಿಷ್ಠರಿಗೆ ಒತ್ತಾಯಿಸಿದರು.

ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಂವಿಧಾನ ಬದಲಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಹೇಳಿಕೆ ನೀಡುತ್ತಿರುವ ಹೆಗಡೆ ಅವರ ನಡೆಯನ್ನು ಪಕ್ಷ ಸಮರ್ಥಿಸಿಕೊಳ್ಳಲು ಆಗುವುದಿಲ್ಲ. ಅವರ ಹೇಳಿಕೆ ಖಂಡನೀಯ’ ಎಂದರು.

‘ಅನಂತಕುಮಾರ ಹೆಗಡೆ ಈ ಹಿಂದೆಯೂ ಸಂವಿಧಾನ ಬದಲಾವಣೆ ಮಾಡುವುದಾಗಿ ಹೇಳಿದ್ದರು. ಆಗ ಪ್ರಧಾನಿ ನರೇಂದ್ರ ಮೋದಿ ಅವರು ಹೆಗಡೆಯವರನ್ನು ಕರೆಯಿಸಿ ಕ್ಷಮೆ ಕೇಳಿಸಿದ್ದರು. ಸಚಿವ ಸ್ಥಾನದಿಂದಲೂ ತೆಗೆದುಹಾಕಿದ್ದರು. ಅದಾದ ಬಳಿಕ ಅವರು ಸಾರ್ವಜನಿಕವಾಗಿ ಎಲ್ಲಿಯೂ ಕಾಣಸಿಕೊಂಡಿರಲಿಲ್ಲ. ಇದೀಗ ಚುನಾವಣೆ ಹತ್ತಿರ ಬಂದಾಗ ಬಂದಿದ್ದಾರೆ. ಬಹುಶಃ ಅವರ ತಲೆ ಕೆಟ್ಟಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

‘ಯಾರೇ ಆಗಲಿ ಸಂವಿಧಾನ ವಿರೋಧಿ ಹೇಳಿಕೆ ನೀಡಿದರೆ ನಾನು ವಿರೋಧಿಸುತ್ತೇನೆ’ ಎಂದರು.

‘ಸಂವಿಧಾನ ತಿದ್ದುಪಡಿ ಮಾಡಲು 400ಕ್ಕೂ ಅಧಿಕ ಸ್ಥಾನ ಬೇಕು’ ಎಂದು ಹೆಗಡೆ ಹೇಳುತ್ತಾರೆ. ಸದ್ಯ ಇರುವ ಸ್ಥಾನಗಳೇ ತಿದ್ದುಪಡಿ ಮಾಡಲು ಸಾಕು. ಸಂವಿಧಾನ ಈಗಾಗಲೇ ಸಾಕಷ್ಟು ಬಾರಿ ತಿದ್ದುಪಡಿಯಾಗಿದೆ. ಕಾಂಗ್ರೆಸ್ 95ಕ್ಕೂ ಅಧಿಕ ಬಾರಿ ಸಂವಿಧಾನ ತಿದ್ದುಪಡಿ ಮಾಡಿದೆ. ಆಗೆಲ್ಲ ಕಾಂಗ್ರೆಸ್‌ನವರು ಏಕೆ ಸುಮ್ಮನಿದ್ದರು’ ಎಂದು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.