ADVERTISEMENT

ವ್ಯಾಪಾರಿಗಳಿಗೆ ನ್ಯಾಯ ಕೊಡಿಸಲು ಬದ್ಧ: ಶಾಸಕ ಎಂ.ಬಿ.ಪಾಟೀಲ

ಧರಣಿನಿರತರ ಭೇಟಿ; ಶಾಸಕ ಎಂ.ಬಿ.ಪಾಟೀಲ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2019, 10:19 IST
Last Updated 28 ನವೆಂಬರ್ 2019, 10:19 IST
ವಿಜಯಪುರದ ನೆಹರೂ ಮಾರುಕಟ್ಟೆಗೆ ಗುರುವಾರ ಭೇಟಿ ನೀಡಿದ ಶಾಸಕ ಎಂ.ಬಿ.ಪಾಟೀಲ ಧರಣಿ ನಿರತರ ಅಹವಾಲು ಆಲಿಸಿದರು
ವಿಜಯಪುರದ ನೆಹರೂ ಮಾರುಕಟ್ಟೆಗೆ ಗುರುವಾರ ಭೇಟಿ ನೀಡಿದ ಶಾಸಕ ಎಂ.ಬಿ.ಪಾಟೀಲ ಧರಣಿ ನಿರತರ ಅಹವಾಲು ಆಲಿಸಿದರು   

ವಿಜಯಪುರ: ‘ರಸ್ತೆ ಅಗಲೀಕರಣ ಸೇರಿದಂತೆ ಅಭಿವೃದ್ಧಿ ಕಾರ್ಯಗಳನ್ನು ನಾನು ವಿರೋಧಿಸುವುದಿಲ್ಲ. ತರಕಾರಿ, ಹಣ್ಣು ವ್ಯಾಪಾರಿಗಳಿಗೆ ನ್ಯಾಯ ಒದಗಿಸಲು ಬದ್ಧನಾಗಿದ್ದೇನೆ’ ಎಂದು ಶಾಸಕ ಎಂ.ಬಿ.ಪಾಟೀಲ ಹೇಳಿದರು.

ಇಲ್ಲಿಯ ನೆಹರೂ ಮಾರುಕಟ್ಟೆಯಲ್ಲಿ ತರಕಾರಿ ವ್ಯಾಪಾರಸ್ಥರು ನಡೆಸುತ್ತಿರುವ ಧರಣಿ ಸ್ಥಳಕ್ಕೆ ಗುರುವಾರ ಭೇಟಿ ನೀಡಿ, ನೈತಿಕ ಬೆಂಬಲ ವ್ಯಕ್ತಪಡಿಸಿ ಅವರು ಮಾತನಾಡಿದರು.

‘ಪರ್ಯಾಯ ಸ್ಥಳ ಗುರುತಿಸಿದ ಬಳಿಕ ವ್ಯಾಪಾರಿಗಳನ್ನು ಸ್ಥಳಾಂತರಿಸಬೇಕಿತ್ತು. ಆದರೆ, ತರಾತುರಿಯಲ್ಲಿ ಸ್ಥಳಾಂತರಿಸಿರುವುದು ಸರಿಯಲ್ಲ. ಬಡ ವ್ಯಾಪಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಸೂಕ್ತ ಜಾಗ ಕಲ್ಪಿಸಿ ಅವರನ್ನು ತೆರವುಗೊಳಿಸಬೇಕಾಗಿತ್ತು. ಏಕಾಏಕಿ ತೆರವುಗೊಳಿಸಿದ್ದರಿಂದ ಬಡಜನರು ತೊಂದರೆ ಅನುಭವಿಸುವಂತಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

ADVERTISEMENT

‘ಒಂದು ವಾರದಿಂದ ತರಕಾರಿ ವ್ಯಾಪಾರಿಗಳು ವ್ಯಾಪಾರ ಮಾಡಿಲ್ಲ. ಹೀಗಾಗಿ ಅವರಿಗೆ ನಷ್ಟವಾಗಿದೆ’ ಎಂದು ಹೇಳಿದಾಗ ಅಲ್ಲಿ ನೆರೆದಿದ್ದ ಅನೇಕ ಮಹಿಳೆಯರು, ‘ನಮಗೂ ತೊಂದರೆಯಾಗಿದೆ, ನಾವು ಉಪವಾಸ ಬೀಳುವಂತಾಗಿದೆ’ ಎಂದು ಅಳಲು ತೋಡಿಕೊಂಡರು.

ಇದಕ್ಕೆ ಸ್ಪಂದಿಸಿದ ಶಾಸಕರು, ‘ಬಡ ವ್ಯಾಪಾರಿಗಳಿಗೆ ಪ್ರತಿಯೊಬ್ಬರು ಧನಸಹಾಯ ಮಾಡೋಣ. ನಾನೂ ಸಹ ಈ ಕಾರ್ಯಕ್ಕೆ ಕೈಜೋಡಿಸುತ್ತೇನೆ’ ಎಂದರು.

‘ವ್ಯಾಪಾರಿಗಳು ಯಾವುದೇ ರೀತಿಯಿಂದ ಭಯ ಪಡಬೇಕಾಗಿಲ್ಲ. ಪರ್ಯಾಯ ಮತ್ತು ಶಾಶ್ವತ ವ್ಯವಸ್ಥೆ ಕಲ್ಪಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ. ಪರ್ಯಾಯ ವ್ಯವಸ್ಥೆ ಆಗುವವರೆಗೆ ಇದ್ದ ಸ್ಥಳದಲ್ಲಿಯೇ ವ್ಯಾಪಾರ ನಡೆಸಲು ಅನುಮತಿ ಕೊಡಿಸುವ ಸಂಬಂಧ ಅಧಿಕಾರಿಗಳೊಂದಿಗೆ ಚರ್ಚಿಸುತ್ತೇನೆ’ ಎಂದು ಭರವಸೆ ನೀಡಿದರು.

ಮುಖಂಡರಾದ ಅಬ್ದುಲ್‌ ಹಮೀದ್ ಮುಶ್ರೀಫ್, ಪ್ರೊ.ವಾಜೀದ ಪೀರಾ, ವಕೀಲ ಸೈಯ್ಯದ್‍ ಆಸೀಫುಲ್ಲಾ ಖಾದ್ರಿ, ಅಬ್ದುಲ್ ರಜಾಕ್ ಹೊರ್ತಿ, ಅಬೂಬಕರ್ ಬಾಗವಾನ, ಸಲೀಂ ಮುಂಡೇವಾಡಿ, ಮೈನುದ್ದೀನ್ ಬೀಳಗಿ, ಅಡಿವೆಪ್ಪ ಸಾಲಗಲ್ಲ, ಅಜೀಮ್ ಇನಾಮದಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.