
ವಿಜಯಪುರ: ಮಹಾ ಶಿವರಾತ್ರಿ ಹಬ್ಬದ ಅಂಗವಾಗಿ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಭಾನುವಾರ ಭಕ್ತರು ಜಾಗರಣೆ, ಉಪವಾಸ, ಭಜನೆ, ಶಿವನಾಮ ಸ್ಮರಣೆಯೊಂದಿಗೆ ಸಂಭ್ರಮದಿಂದ ಆಚರಿಸಿದರು. ಮನೆ, ಮನೆಗಳಲ್ಲೂ ಶಿವರಾತ್ರಿ ಹಬ್ಬದ ಸಂಭ್ರಮ ಮನೆ ಮಾಡಿತ್ತು.
ವಿಜಯಪುರ ನಗರದ 770 ಲಿಂಗದ ಗುಡಿ, ಐತಿಹಾಸಿಕ ಸುಂದರೇಶ್ವರ ದೇವಾಲಯ, ಶಿವಗಿರಿ, ಸಿದ್ದೇಶ್ವರ ದೇವಸ್ಥಾನ, ಅಡವಿ ಶಂಕರಲಿಂಗ ದೇವಸ್ಥಾನ, ಚಿದಂಬರೇಶ್ವರ ದೇವಾಲಯ, ಮಲ್ಲಿಕಾರ್ಜುನ ದೇವಸ್ಥಾನ, ಬಸವನ ಬಾಗೇವಾಡಿಯ ಮೂಲ ನಂದೀಶ್ವರ ದೇವಸ್ಥಾನ ಸೇರಿದಂತೆ ಜಿಲ್ಲೆಯ ಪ್ರಮುಖ ಶಿವಾಲಯಗಳಲ್ಲಿ ಆಹೋರಾತ್ರಿ ಶಿವನಾಮ ಸ್ಮರಣೆ, ಅಖಂಡ ಭಜನೆ ನಡೆಯಿತು.
ವಿಶೇಷ ಪೂಜೆ, ರುದ್ರಾಭಿಷೇಕ, ಸಹಸ್ರ ನಾಮಾರ್ಚನೆ, ಬಿಲ್ವಾರ್ಚನೆ ನಡೆದವು. ದೇವಾಲಯಗಳನ್ನು ತೋರಣದಿಂದ ಸಿಂಗರಿಸಿ ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು.
ದೇವಸ್ಥಾನಗಳ ಎದುರು ಭಕ್ತರ ಸರದಿಯಲ್ಲಿ ನಿಂತು ಶಿವನ ದರ್ಶನ ಪಡೆದು ಪುನೀತರಾದರು. ಬಿಸಿಲಿನ ಝಳ ಅಧಿಕವಿದ್ದ ಕಾರಣ ಬಹುತೇಕ ಶಿವಾಲಯಗಳ ಎದುರು ಪೆಂಡಾಲ್ ಹಾಕಿ ನೆರಳಿನ ವ್ಯವಸ್ಥೆ ಕಲ್ಪಿಸಲಾಗಿತ್ತು.
ನಗರದ ಹೊರವಲಯದಲ್ಲಿರುವ ಪ್ರಸಿದ್ಧ ಪ್ರವಾಸಿ ತಾಣ ಶಿವಗಿರಿಗೆ ಭಕ್ತ ಸಾಗರವೇ ಹರಿದು ಬಂದಿತು. ದೇವಾಲಯದ ಆವರಣದಲ್ಲಿ ಜಾತ್ರೆಯ ವಾತಾವರಣ ಕಂಡುಬಂದಿತು. ಪ್ರಜಾಪಿತ ಈಶ್ವರೀಯ ವಿದ್ಯಾಲಯದಲ್ಲೂ ಶಿವನ ಆರಾಧನೆ ನಡೆಯಿತು. ವಿಜಯಪುರ ತಾಲ್ಲೂಕಿನ ಉಕ್ಕಲಿಯ ಕಲ್ಮೇಶ್ವರ ದೇವಸ್ಥಾನದಲ್ಲೂ ಶಿವರಾತ್ರಿ ಭಕ್ತಿ ಭಾವದಿಂದ ಆಚರಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.