
ಸೋಲಾಪುರ: ಮಹಾರಾಷ್ಟ್ರ ರಾಜ್ಯ ಪ್ರೌಢ ಹಾಗೂ ಉನ್ನತ ಪ್ರೌಢ ಶಿಕ್ಷಣ ಮಂಡಳಿ, ಪುಣೆ ವತಿಯಿಂದ ನಡೆಸಲಾಗುತ್ತಿರುವ ಫೆಭ್ರುವರಿ/ ಮಾರ್ಚ್ 2026ರ 10ನೇ ತರಗತಿ ವಾರ್ಷಿಕ ಪರೀಕ್ಷೆಗೆ ಗುರುವಾರದಿಂದ ಪ್ರಾರಂಭವಾಗಿದ್ದು, ಮೊದಲ ದಿನ ಪ್ರಥಮ ಭಾಷೆ ಮರಾಠಿ ವಿಷಯದ ಪರೀಕ್ಷೆ ನಡೆಯಿತು.
ಜಿಲ್ಲೆಯ ಒಟ್ಟು 15 ಪರೀಕ್ಷಾ ಕೇಂದ್ರಗಳಲ್ಲಿ 61,965 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದು, 60,716 ವಿದ್ಯಾರ್ಥಿಗಳು ಹಾಜರಾಗಿದ್ದಾರೆ. 1,249 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದರು.
ಅತ್ಯಧಿಕ ಹಾಜರಾತಿ ಅಕ್ಕಲಕೋಟ ತಾಲ್ಲೂಕಿನ ಸಿದ್ಧೇಶ್ವರ ಮಾನೆ ವಿದ್ಯಾಲಯ ಕೇಂದ್ರದಲ್ಲಿ ದಾಖಲಾಗಿದ್ದು, ಇಲ್ಲಿ 5,916 ವಿದ್ಯಾರ್ಥಿಗಳು ಹಾಜರಾಗಿದ್ದಾರೆ. 123 ವಿದ್ಯಾರ್ಥಿಗಳು ಗೈರುಹಾಜರಾಗಿದ್ದಾರೆ. ಬಾರ್ಶಿ, ಮಾಢಾ, ಪಂಢರಪುರ, ಮಾಳಶಿರಸ್, ಮೋಹೋಳ ಸೇರಿದಂತೆ ಇತರೆ ತಾಲೂಕುಗಳ ಕೇಂದ್ರಗಳಲ್ಲೂ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ.
ಸೊಲಾಪುರ ನಗರದಲ್ಲಿನ ಗಣಪತಿ ಘಾಟ್, ವಿಜಯಪುರ ರಸ್ತೆ, ಹೈಸ್ಕೂಲ್ ಪ್ರದೇಶ, ನ್ಯೂ ಇಂಗ್ಲಿಷ್ ಶಾಲೆ, ಛತ್ರಪತಿ ಶಿವಾಜಿ ಹೈಸ್ಕೂಲ್, ಭಾರತಿ ವಿದ್ಯಾಪೀಠ ಮುಂತಾದ ಕೇಂದ್ರಗಳಲ್ಲಿ ಪರೀಕ್ಷೆಯನ್ನು ಸುಗಮವಾಗಿ ನಡೆಸಲಾಯಿತು. ಬಹುತೇಕ ಕೇಂದ್ರಗಳಲ್ಲಿ ಗೈರುಹಾಜರಾತಿ ಪ್ರಮಾಣ ಕಡಿಮೆ ಇರುವುದಾಗಿ ತಿಳಿದುಬಂದಿದೆ.
ಮರಾಠಿ ವಿಷಯದ ಪ್ರಶ್ನೆಪತ್ರಿಕೆಯು ಪಠ್ಯಕ್ರಮಕ್ಕೆ ಅನುಗುಣವಾಗಿದ್ದು, ನಿರೀಕ್ಷಿತ ಪ್ರಶ್ನೆಗಳು ಬಂದಿದ್ದವು ಎಂದು ಹಲವಾರು ವಿದ್ಯಾರ್ಥಿಗಳು ಪ್ರತಿಕ್ರಿಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.