ವಿಜಯಪುರ: ಯೋಗ ಸಾಧಕರಾಗಿದ್ದ ಗುರುಪಾದೇಶ್ವರ ಶಿವಯೋಗಿಗಳು ಬೇಡಿ ಬಂದ ಭಕ್ತರ ಇಷ್ಟಾರ್ಥ ಪೂರೈಸುವ ಕರುಣಾಮಯಿಯಾಗಿದ್ದರು ಎಂದು ವೀರಶೈವ ಪಂಚಮಸಾಲಿ ಮಹದೇವ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಬಬಲೇಶ್ವರ ಪಟ್ಟಣದಲ್ಲಿ ಇತ್ತಿಚ್ಚಿಗೆ ನಡೆದ ಮಹಾತಪಸ್ವಿ ಗುರುಪಾದೇಶ್ವರ ಶಿವಯೋಗಿಗಳವರ 182ನೇ ಮಹಾ ಗಣಾರಾಧನೆ, ನೂತನ ಮಹಾದ್ವಾರದ ಉದ್ಘಾಟನೆ, ಲಕ್ಷ ಬಿಲ್ವಾರ್ಚನೆ ಹಾಗೂ ಪುರಾಣ ಮಂಗಲೋತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಗುರುಪಾದೇಶ್ವರ ಶಿವಯೋಗಿಗಳು ಮಹಾ ತಪಸ್ವಿಗಳು, ಸಾಮಾಜಿಕ ಕಳಕಳಿ ಹಾಗೂ ಭಕ್ತರ ಉದ್ಧಾರಕ್ಕಾಗಿ ತಮ್ಮ ಜೀವನ ಸವೆಸಿದ್ದಾರೆ. ಕಷ್ಟ ಕಾಲದಲ್ಲಿದ್ದ ಭಕ್ತರಿಗೆ ನೆರವಾಗಿ ಅವರ ಕಣ್ಣೀರು ವರೆಸುವ ಕೆಲಸ ಮಾಡಿದ್ದಾರೆ. ನಿರಂತರವಾಗಿ ಧರ್ಮದ ಕಾರ್ಯಗಳನ್ನು ಮಾಡುತ್ತಾ ಜನರ ಮನಸ್ಸಿನಲ್ಲಿ ದಾನ-ಧರ್ಮ, ಆಚಾರ-ವಿಚಾರಗಳ ಬಗ್ಗೆ ಅರಿವು ಮೂಡಿಸಿ ಈ ಭಾಗದ ಭಕ್ತರ ಮನೆ ಮಾತಾಗಿದ್ದಾರೆ ಎಂದು ಹೇಳಿದರು.
ಮಹಿಶ್ಯಾಳದ ಚಕ್ರವರ್ತಿ ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಗುರುಪಾದೇಶ್ವರ ಶಿವಯೋಗಿಗಳು ಶಾಂತವೀರ ಶಿವಯೋಗಿಗಳ ತಪಶಕ್ತಿಯಿಂದ ಈ ನೆಲವನ್ನು ಪಾವನ ಮಾಡಿ ಎಲ್ಲ ಭಕ್ತರ ಹೃದಯದಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ. ಸರ್ವರಿಗೂ ಧರ್ಮದ ದಾರಿಯನ್ನು ತೋರಿದ್ದಾರೆ ಎಂದರು.
ಚಿಪ್ಪಲಕಟ್ಟಿದ ಅಭಿನವ ಸಿದ್ಧಲಿಂಗ ಸ್ವಾಮೀಜಿ ಮಾತನಾಡಿ, ಹರಳೇಶ್ವರ ಕ್ಷೇತ್ರದಲ್ಲಿ ಶಾಂತವೀರ ಶಿವಾಚಾರ್ಯರು ತಪವನ್ನು ಗೈದು ತಪೋವನ ವನ್ನಾಗಿ ಮಾಡಿದರು. ವಿದ್ಯಾರ್ಥಿಗಳ ಶಿಕ್ಷಣಕ್ಕೆ ಸಂಸ್ಥೆಯನ್ನು ಸ್ಥಾಪಿಸಿ ಬಡಮಕ್ಕಳ ವಿದ್ಯಾಭ್ಯಾಸಕ್ಕೆ ನೆರವಾದರು ಎಂದು ಹೇಳಿದರು.
ಬಸವ ಕಲ್ಯಾಣದ ಮಹಾಂತ ಸ್ವಾಮಿಗಳು ಮಂಠಾಳಮಠ, ಇಟಗಿ ಶ್ರೀಗಳು, ರೇವಪ್ಪ ಜಂಗಮಶೆಟ್ಟಿ, ಗುರುಪಾದ ಜಂಗಮಶೆಟ್ಟಿ, ಅಶೋಕ ಜಂಗಮಶೆಟ್ಟಿ, ಸಿದ್ದಪ್ಪ ಸಣ್ಣಕ್ಕಿ, ಉಮೇಶ ಕೊಳಕೂರ, ದೇವಾನಂದ ಅಲಗೊಂಡ, ರುದ್ರಗೌಡ ಬಿರಾದಾರ, ಶ್ರೀಶೈಲಗೌಡ ಬಿರಾದಾರ, ಮಲ್ಲನಗೌಡ ಬಿರಾದಾರ, ಮಹಾದೇವ ಗೋಡಿಕಟ್ಟಿ, ಬಸವರಾಜ ಸಿದ್ದಾಪೂರ, ಮುತ್ತಯ್ಯ ಬರಗಿಮಠ, ಬಿ.ಆಯ್.ಬಿರಾದಾರ, ಗಿರೀಶ ಹಿರೇಮಠ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.