ADVERTISEMENT

ದೇವರಹಿಪ್ಪರಗಿ: ಮಲ್ಲಯ್ಯ ದೇಗುಲಕ್ಕೆ 1500 ವರ್ಷದ ಇತಿಹಾಸ

ಅಮರನಾಥ ಹಿರೇಮಠ
Published 7 ಅಕ್ಟೋಬರ್ 2025, 4:27 IST
Last Updated 7 ಅಕ್ಟೋಬರ್ 2025, 4:27 IST
ದೇವರಹಿಪ್ಪರಗಿಯಲ್ಲಿರುವ ಐತಿಹಾಸಿಕ ಮಲ್ಲಯ್ಯ ದೇವಸ್ಥಾನ ಹಾಗೂ ಮುಂಭಾಗದಲ್ಲಿರುವ ಪಾರಂಪರಿಕ ಮರ.
ದೇವರಹಿಪ್ಪರಗಿಯಲ್ಲಿರುವ ಐತಿಹಾಸಿಕ ಮಲ್ಲಯ್ಯ ದೇವಸ್ಥಾನ ಹಾಗೂ ಮುಂಭಾಗದಲ್ಲಿರುವ ಪಾರಂಪರಿಕ ಮರ.   

ದೇವರಹಿಪ್ಪರಗಿ: ಪಟ್ಟಣದ ಐತಿಹಾಸಿಕ ಮಲ್ಲಯ್ಯ ದೇವಸ್ಥಾನ ಪ್ರತಿನಿತ್ಯ ನೂರಾರು ಪ್ರಯಾಣಿಕರಿಗೆ ಪ್ರಯಾಣದ ಮಧ್ಯೆ ನೀರು, ನೆರಳು ನೀಡುವ ಜೊತೆಗೆ ವಿಶ್ರಾಂತಿಯ ನೆಮ್ಮದಿಯ ತಾಣವಾಗಿ ಗಮನ ಸೆಳೆಯುತ್ತಿದೆ.

ಪಟ್ಟಣದ ಮೂಲಕ ಹಾದು ಹೋಗಿರುವ ವಿಜಯಪುರ-ಕಲಬುರ್ಗಿ ಮಧ್ಯದ ರಾಷ್ಟ್ರೀಯ ಹೆದ್ದಾರಿ 50 ರ ಪಕ್ಕದಲ್ಲಿ 1500 ವರ್ಷಗಳ ಇತಿಹಾಸ ಹೊಂದಿರುವ ಈ ದೇವಾಲಯವು ಪ್ರವಾಸಿಗರು, ಭಕ್ತರನ್ನು ಆಕರ್ಷಿಸುತ್ತಿದೆ.

ಪ್ರತಿನಿತ್ಯ ನೂರಾರು ಪ್ರವಾಸಿಗರು ತಾವು ತಂದ ಊಟ, ತಿಂಡಿ ಸವಿಯಲು ಸಹಕಾರಿಯಾಗುವಂತೆ ತಣ್ಣನೆಯ ನೀರು, ನೆರಳು ನೀಡಿ ಪ್ರಯಾಸ ನೀಗಿಸುವ ಜೊತೆಗೆ ಶಿವಲಿಂಗ ರೂಪದ ಮಲ್ಲಯ್ಯನ ದರ್ಶನಕ್ಕೆ ಅವಕಾಶ ಕಲ್ಪಿಸುತ್ತದೆ.

ADVERTISEMENT

ದೇವಾಲಯಕ್ಕೆ ಸಾಮಾನ್ಯವಾಗಿ ಪ್ರತಿದಿನ ಬರುವ ಭಕ್ತರಿಗೆ ದೇವಾಲಯ, ಮಹಲಗಂಭ ಹಾಗೂ ಹುಣಸೆ ಮರ ವಿಶೇಷ ಆಕರ್ಷಣೆಯಾಗಿವೆ. ಪ್ರಯಾಣದ ಮಧ್ಯೆ ಊಟ ಅಥವಾ ಉಪಹಾರಕ್ಕಾಗಿ ಬರುವ ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ ಸೇರಿದಂತೆ ರಾಜ್ಯದ ಬೆಳಗಾವಿ, ಬಾಗಲಕೋಟೆ, ಬೀದರ್‌, ಕಲಬುರಗಿ, ಯಾದಗಿರಿ ಜಿಲ್ಲೆಗಳ ಪ್ರವಾಸಿಗರಿಗೆ ತಂಪಾದ ದೇವಾಲಯದ ವಿಶಾಲ ಪ್ರಾಂಗಣ ಮಹಲಗಂಭ ಆಸಕ್ತಿ ಮೂಡಿಸುತ್ತವೆ. ಅದರಲ್ಲೂ ಐದು ಅಂತಸ್ತುಗಳ ಎತ್ತರದ ಮಹಲಗಂಭದ ಇತಿಹಾಸ ಹಾಗೂ ಮುಂದಿರುವ ಹುಣಸೆ ಮರ 900 ವರ್ಷಗಳಷ್ಟು ಹಳೆಯದಾಗಿದ್ದು, ಇದು ಪಾರಂಪರಿಕ ಮರಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ಮರ ಎಂದು ತಿಳಿದಾಗ ಅವರಲ್ಲಿ ಆಸಕ್ತಿ ಇಮ್ಮಡಿ ಆಗುವುದಂತು ಸತ್ಯ.

ದೇವಾಲಯ ಆವರಣದಲ್ಲಿ ನಿತ್ಯ ವಿಶ್ರಾಂತಿ ಪಡೆದು ಪ್ರಯಾಣ ಮುಂದುವರೆಸುವ ಪ್ರವಾಸಿಗರು ಒಂದೆಡೆಯಾದರೆ, ರಾತ್ರಿ ಇಲ್ಲಿಯೇ ವಾಸ್ತವ್ಯ ಮಾಡಿ ಬೆಳಿಗ್ಗೆ ಸ್ನಾನ ಮಾಡಿ ತೆರಳುವ ಪ್ರವಾಸಿಗರ ಸಂಖ್ಯೆಯೇನೂ ಕಡಿಮೆ ಇಲ್ಲ. ಅದಕ್ಕಾಗಿ ರಾತ್ರಿ ದೇವಾಲಯದ ಆವರಣದಲ್ಲಿ ಬೆಳಕಿನ ವ್ಯವಸ್ಥೆ ಮಾಡಲಾಗಿದೆ. ಸ್ನಾನಕ್ಕಾಗಿ ದೇವಾಲಯದ ಹಿಂದೆಯೇ ಬಾವಿಯಿದ್ದು, ಇಲ್ಲಿಯ ನೀರು ಸದಾ ಕಾಲ ತಂಪಾಗಿರುವುದು ವಿಶೇಷ. ಆದರೆ, ಈ ನೀರನ್ನು ಈಗ ಕುಡಿಯಲು ಬಳಕೆ ಮಾಡುತ್ತಿಲ್ಲ.

ದೇವಾಲಯಕ್ಕೆ ಆಗಮಿಸುವ ಅಸಂಖ್ಯಾತ ಭಕ್ತರು ಹಾಗೂ ಪ್ರವಾಸಿಗರಿಗಾಗಿ ನೀರು ಪೂರೈಸಲು ದೇವಾಲಯದ ಆವರಣದಲ್ಲಿ ಕೊಳವೆಭಾವಿ ಇದೆ. ಇದರಿಂದ ಪೈಪ್‌ಲೈನ್‌ ಮೂಲಕ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ಜೊತೆಗೆ ಭಕ್ತರ ಮಹಾಪ್ರಸಾದಕ್ಕಾಗಿ ಸುಮಾರು ₹13 ಲಕ್ಷ ವೆಚ್ಚದಲ್ಲಿ ಅನ್ನ ಪ್ರಸಾದ ನಿಲಯ ಹಾಗೂ ಮಹಲಗಂಭಕ್ಕೆ ತೆರಳಲು ಸಹಕಾರಿಯಾಗುವಂತೆ ₹1.50 ಲಕ್ಷ ವೆಚ್ಚದಲ್ಲಿ ದೇವಸ್ಥಾನ ಪಕ್ಕದಲ್ಲಿ ಮೆಟ್ಟಿಲುಗಳ ನಿರ್ಮಾಣ ಮಾಡಲಾಗಿದೆ.

ದೇವಸ್ಥಾನದ ಅಭಿವೃದ್ಧಿ ಹಾಗೂ ಭಕ್ತಮಂಡಳಿಗೆ ಮೂಲ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಇದೇ ವರ್ಷ ಸುಮಾರು ₹30 ಲಕ್ಷವನ್ನು ವಿನಿಯೋಗಿಸಲಾಗಿದೆ. ಇದರಿಂದ ವರ್ಷದುದ್ದಕ್ಕೂ ನಡೆಯುವ ಮದುವೆ, ಮುಂಜಿವೆ ಸೇರಿದಂತೆ ವಿವಿಧ ಕಾರಣಗಳಿಗೆ ಅನುಕೂಲವಾಗಲಿದೆ ಎನ್ನುತ್ತಾರೆ ದೇವಾಲಯ ಟ್ರಸ್ಟ್ ಅಧ್ಯಕ್ಷ ವಿನೋದಗೌಡ ಪಾಟೀಲ.

ಮಲ್ಲಯ್ಯನ ದೇವಸ್ಥಾನ ನಮಗೆ ಅತ್ಯಂತ ಪ್ರೀತಿಯ ಸ್ಥಳ. ನಾವು ಪ್ರತಿವರ್ಷ ಬೇಸಿಗೆಯಲ್ಲಿ ಕುಟುಂಬ ಸಮೇತ ಶ್ರೀಶೈಲಕ್ಕೆ ತೆರಳುವಾಗ ಇಲ್ಲಿರುವ ಮಲ್ಲಯ್ಯನ ದರ್ಶನ ಪಡೆದು, ಪಾರಂಪರಿಕ ಮರದಡಿ ಕುಳಿತು ಊಟ ಮಾಡಿಯೇ ತೆರಳುತ್ತೇವೆ. ಇಲ್ಲಿಯ ಪ್ರಶಾಂತ ವಾತಾವರಣ, ದೇವಾಲಯದ ಪಕ್ಕದಲ್ಲಿರುವ ಮರಗಳ ಗುಂಪು, ತಣ್ಣನೆಯ ಕುಡಿಯುವ ನೀರು ಹಿತಕರವಾಗಿದ್ದು 10-15 ವರ್ಷಗಳಿಂದ ಪ್ರಯಾಣಿಕ ಹಾಗು ಭಕ್ತನಾಗಿ ಇಲ್ಲಿಯ ಸವಿಯನ್ನು ಸವಿದಿದ್ಧೇನೆ. ಈಗೀಗ ದೇವಸ್ಥಾನ ವರ್ಷದಿಂದ ವರ್ಷಕ್ಕೆ ಅಭಿವೃದ್ಧಿ ಕಾಣುತ್ತೀದೆ ಎಂದು ಸಾರವಾಡ ಗ್ರಾಮದ ಭೀಮನಗೌಡ ರಾಚನಗೌಡ ಬಿರಾದಾರ ಕುಟುಂಬದವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.

ಮಲ್ಲಯ್ಯನ ದೇವಸ್ಥಾನಕ್ಕೆ ಹೊಂದಿಕೊಂಡಿರುವ ಐದು ಅಂತಸ್ತುಗಳ ಮಹಲಗಂಭ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.