ಬಸವನಬಾಗೇವಾಡಿ: ತಾಲ್ಲೂಕಿನ ಮನಗೂಳಿ ಪಟ್ಟಣ ಪಂಚಾಯಿತಿಯಲ್ಲಿ ಬಿಜೆಪಿ ಪಕ್ಷದಿಂದ ಚುನಾಯಿತರಾಗಿದ್ದ ಪ.ಪಂ ಹಾಲಿ ಅಧ್ಯಕ್ಷ ಡಾ.ಮಳಸಿದ್ದಪ್ಪ ಮೇತ್ರಿ ಹಾಗೂ ಸದಸ್ಯರಾದ ಪ್ರಕಾಶ ಮನಗೂಳಿ, ರಮೇಶ ಪಿರಗಾ ಮಂಗಳವಾರ ಸಂಜೆ ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಅಪ್ಪುಗೌಡ ಪಾಟೀಲ ಮನಗೂಳಿ ಅವರ ಸಮ್ಮುಖದಲ್ಲಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾದರು.
ಮನಗೂಳಿ ಪ.ಪಂ ಅಧ್ಯಕ್ಷ ಡಾ.ಮಳಸಿದ್ದಪ್ಪ ಡಿ.ಮೇತ್ರಿ ವಿರುದ್ಧ ಆಡಳಿತ ಪಕ್ಷದ 9 ಸದಸ್ಯರು ಆ.26 ರಂದು ಅವಿಶ್ವಾಸ ಗೊತ್ತುವಳಿ ಅರ್ಜಿ ಸಲ್ಲಿಸಿದ್ದರು. ಸೆ.10 ರಂದು ಪ.ಪಂ ಅಧ್ಯಕ್ಷ ಸ್ಥಾನದ ಅವಿಶ್ವಾಸ ನಿರ್ಣಯ ಗೊತ್ತುವಳಿಗಾಗಿ ವಿಶೇಷ ಸಾಮಾನ್ಯ ಸಭೆ ನಿಗದಿಯಾಗಿರುವ ಹಿನ್ನೆಲೆ ನಡೆದ ದಿಢೀರ್ ರಾಜಕೀಯ ಬೆಳವಣಿಗೆಯಲ್ಲಿ ಮೂವರು ಸದಸ್ಯರು ಜೆಡಿಎಸ್‌ಗೆ ಸೇರ್ಪಡೆಗೊಂಡಿದ್ದಾರೆ.
ಸೇರ್ಪಡೆ ಬಳಿಕ ಪ.ಪಂ ಅಧ್ಯಕ್ಷ ಡಾ. ಮಳಸಿದ್ದಪ್ಪ ಮೇತ್ರಿ ಮಾತನಾಡಿ, ‘ಪಟ್ಟಣದ ಅಭಿವೃದ್ಧಿ ವಿಚಾರವಿಟ್ಟುಕೊಂಡು ಸಚಿವ ಶಿವಾನಂದ ಪಾಟೀಲ ಅವರಿಗೆ ಬೆಂಬಲ ವ್ಯಕ್ತಪಡಿಸಿ, ಪಟ್ಟಣದ ಅಭಿವೃದ್ಧಿಗೆ ಶ್ರಮಿಸಿದ್ದೇವೆ. ಆದರೆ ಇತ್ತಿಚೀನ ರಾಜಕೀಯ ಬೆಳವಣಿಗೆಗಳಿಂದ ಮನನೊಂದು ಜೆಡಿಎಸ್ ಪಕ್ಷ ಸೇರ್ಪಡೆಗೊಂಡಿದ್ದು, ಪಟ್ಟಣದ ಅಭಿವೃದ್ಧಿ ಕಾರ್ಯಗಳನ್ನು ಮುಂದುವರೆಸಿಕೊಂಡು ಹೋಗುತ್ತೇವೆ. ಹಿಂದೆಯಾದ ಕಹಿ ಘಟನೆಗೆ ಮನಗೂಳಿ ಪಟ್ಟಣದ ಜನತೆಯ ಕ್ಷಮೆ ಕೇಳುತ್ತೇನೆ. ಮುಂದೆ ಇಂತಹ ಯಾವುದೇ ರಾಜಕೀಯ ಬೆಳವಣಿಗೆಗಳಾದರೂ ಮರಳಿ ಹಿಂದಿನ ತಪ್ಪುಗಳನ್ನು ಮಾಡುವುದಿಲ್ಲ’ ಎಂದು ಹೇಳಿ ಜೆಡಿಎಸ್‌ನ ಮುಖಂಡರು ಹಾಗೂ ಸದಸ್ಯರ ಬೆಂಬಲ ಕೋರಿದರು.
ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಅಪ್ಪುಗೌಡ ಪಾಟೀಲ ಮಾತನಾಡಿ, ಹಿಂದಿನ ರಾಜಕೀಯದ ಕೆಟ್ಟ ಘಟನೆಗಳನ್ನು ಮರೆತು, ಮನಗೂಳಿ ಪಟ್ಟಣದ ಎಲ್ಲ ಜನತೆಯ ವಿಶ್ವಾಸಗಳಿಸಿಕೊಂಡು ಉಳಿದ ಅವಧಿಯಲ್ಲಿ ಪಟ್ಟಣದ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುವಂತೆ ಸಲಹೆ ನೀಡಿದರು.
ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಜಗದೀಶ ಕೊಟ್ರಶೆಟ್ಟಿ, ಮುಖಂಡರಾದ ರವಿ ಪಟ್ಟಣಶೆಟ್ಟಿ, ಸಂಗಯ್ಯ ಕಂದಗಲ್, ಚನ್ನ ಗೌಡ ಪಾಟೀಲ, ಸುಭಾಸಗೌಡ ಪಾಟೀಲ, ಮಲ್ಲಿಕಾರ್ಜುನ ಅವಟಿ, ಅಣ್ಣುಗೌಡ ಗುಜಗೊಂಡ, ಪಿ.ಎಂ ಬನ್ನಟ್ಟಿ, ನಿಸ್ಸಾರ ಅಹಮ್ಮದ ಮಕಾಂದಾರ, ಸುರೇಶ ಚಿಂಚೋಳಿ, ನಾಗಪ್ಪ ಬನ್ನಟ್ಟಿ, ಗುರಪ್ಪ ಪದಮಗೊಂಡ, ಪಿಕೆಪಿಎಸ್ ಅಧ್ಯಕ್ಷ ಗೊಲ್ಲಾಳಪ್ಪಗೌಡ ಗುಜಗೊಂಡ, ಬಾಬು ಗುಜಗೊಂಡ, ಸೇರಿ ಅನೇಕರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.