ADVERTISEMENT

ಮನೆಗೊಂದು ಗ್ರಂಥಾಲಯ ಸ್ಥಾಪನೆಯಾಗಲಿ

ಕಡಣಿ ಬೆರಗು ಪ್ರಕಾಶನ ಸಂಸ್ಥೆಯ 25 ಪುಸ್ತಕಗಳು ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2026, 7:58 IST
Last Updated 27 ಫೆಬ್ರುವರಿ 2026, 7:58 IST
ಸಿಂದಗಿ ಪಟ್ಟಣದ ತಾಲ್ಲೂಕು ಶಿಕ್ಷಣ ಪ್ರಸಾರಕ ಮಂಡಳಿಯ ಎಚ್.ಜಿ.ಪಿಯು ಕಾಲೇಜು ಸಭಾಭವನದಲ್ಲಿ ಗುರುವಾರ ಕಡಣಿ ಬೆರಗು ಪ್ರಕಾಶನ ಸಂಸ್ಥೆ ಹಮ್ಮಿಕೊಂಡಿದ್ದ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಮಾನಸ ಅವರು ನಾಡಿನ ವಿವಿಧ ಭಾಗಗಳ ಲೇಖಕರ 25 ಪುಸ್ತಕಗಳನ್ನು ಬಿಡುಗಡೆಗೊಳಿಸಿದರು
ಸಿಂದಗಿ ಪಟ್ಟಣದ ತಾಲ್ಲೂಕು ಶಿಕ್ಷಣ ಪ್ರಸಾರಕ ಮಂಡಳಿಯ ಎಚ್.ಜಿ.ಪಿಯು ಕಾಲೇಜು ಸಭಾಭವನದಲ್ಲಿ ಗುರುವಾರ ಕಡಣಿ ಬೆರಗು ಪ್ರಕಾಶನ ಸಂಸ್ಥೆ ಹಮ್ಮಿಕೊಂಡಿದ್ದ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಮಾನಸ ಅವರು ನಾಡಿನ ವಿವಿಧ ಭಾಗಗಳ ಲೇಖಕರ 25 ಪುಸ್ತಕಗಳನ್ನು ಬಿಡುಗಡೆಗೊಳಿಸಿದರು   

ಸಿಂದಗಿ: ‘ಮನೆಗೊಂದು ಪೂಜಾ ಮನೆ ಇದ್ದಂತೆ ಮನೆಗೊಂದು ಗ್ರಂಥಾಲಯ ಬೇಕಿದೆ. ಅಂತೆಯೇ ಕನ್ನಡ ಪುಸ್ತಕ ಪ್ರಾಧಿಕಾರವು ಲಕ್ಷ ಮನೆಗಳಲ್ಲಿ ಮನೆಗೊಂದು ಗ್ರಂಥಾಲಯ ಮಾಡುವ ಆಶಯ ಹೊಂದಿ ಈಗಾಗಲೇ ಪ್ರತಿಯೊಂದು ಜಿಲ್ಲೆಗೆ ಸುತ್ತುವ ಕಾರ್ಯ ಮುಂದುವರರಿದಿದೆ’ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಮಾನಸ ಹೇಳಿದರು

ನಗರದ ತಾಲ್ಲೂಕು ಶಿಕ್ಷಣ ಪ್ರಸಾರಕ ಮಂಡಳಿಯ ಎಚ್.ಜಿ.ಪಿಯು ಕಾಲೇಜು ಸಭಾಭವನದಲ್ಲಿ ಗುರುವಾರ ಕಡಣಿ ಬೆರಗು ಪ್ರಕಾಶನ ಸಂಸ್ಥೆ ವಿಜಯಪುರ ಜ್ಞಾನಯೋಗಾಶ್ರಮದ ಸಿದ್ಧೇಶ್ವರಶ್ರೀಗಳ ಸಂಸ್ಮರಣಾರ್ಥ 25 ಪುಸ್ತಕಗಳ ಬಿಡುಗಡೆ ಹಾಗೂ ಬೆರಗು ರಾಜ್ಯಮಟ್ಟದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಪ್ರಕಾಶನ ಸಂಸ್ಥೆಗಳು ಅನಿಶ್ಚಿತತೆ, ಕಳವಳಕಾರಿ ಸ್ಥಿತಿಯಲ್ಲಿವೆ. ಕೊಂಡು ಓದುವವರ ಸಂಖ್ಯೆ ತೀರ ಇಳಿಮುಖವಾಗುತ್ತಿದೆ. ಸರ್ಕಾರದಿಂದ ಗ್ರಂಥಾಲಯಗಳಿಗೆ ಪುಸ್ತಕಗಳನ್ನು ಖರೀದಿಸುವುದು ಸ್ಥಗಿತಗೊಂಡಿದೆ. ಪುಸ್ತಕ ಪ್ರಕಾಶಕರಿಗೆ ತೃಪ್ತಿ ಇಲ್ಲ. ಲಾಭ ಬೇಡ ಬಂಡವಾಳವೂ ಬಾರದ ದಃಸ್ಥಿತಿ ಇದೆ’ ಎಂದು ಅವರು ವಿಷಾದಿಸಿದರು.

ADVERTISEMENT

ಕನ್ನಡ ಪುಸ್ತಕ ಪ್ರಾಧಿಕಾರದಿಂದ ಗ್ರಂಥಾಲಯ ಎಂಬ ಬೀಜ ಬಿತ್ತುತ್ತಿದ್ದೇವೆ. ಓದುಗರು ಕೈಜೋಡಿಸಬೇಕು ಎಂದು ಕೇಳಿಕೊಂಡರು.

ಪ್ರಶಸ್ತಿ ಪುರಸ್ಕೃತರಾದ ಬೆಂಗಳೂರು ಅಂಕಿತ ಪುಸ್ತಕ ಪ್ರಕಾಶನದ ಮಾಲೀಕ ಪ್ರಕಾಶ ಕಂಬತ್ತಳ್ಳಿ ಮಾತನಾಡಿ, ‘ಏಕಕಾಲದಲ್ಲಿ 25 ಪುಸ್ತಕಗಳನ್ನು ಪ್ರಕಾಶನಗೊಳಿಸುವುದು ಸುಲಭ ಕಾರ್ಯವಲ್ಲ. ಈ ಕಾರ್ಯ ಬೆರಗು ಪ್ರಕಾಶನ ಸಂಸ್ಥೆ ಮಾಡಿರುವುದು ಅಭಿನಂದನಾರ್ಹ. ಲೇಖಕರಿಗೆ 350 ಕ್ಕೂ ಅಧಿಕ ಪ್ರಶಸ್ತಿಗಳಿವೆ. ಆದರೆ ಪ್ರಕಾಶನ ಸಂಸ್ಥೆಗಳಿಗೆ ರಾಜ್ಯದಲ್ಲಿ ಇರುವುದು ಮೂರು ಪ್ರಶಸ್ತಿಗಳು ಮಾತ್ರ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪುಸ್ತಕಗಳೆಲ್ಲ ಸಾಹಿತ್ಯವಲ್ಲ. ಸಮಾಜಮುಖಿ ಚಿಂತನೆ ಹೊಂದಿ ಯುವಪೀಳಿಗೆಗೆ ಮಾರ್ಗದರ್ಶನ ನೀಡುವುದು ಸಾಹಿತ್ಯ. ಸಾಹಿತ್ಯ ಮುಂದಿನ ಪೀಳಿಗೆಗೆ ದಾರಿದೀಪವಾಗಬೇಕು ಎಂದು ಪ್ರೊ.ಅರವಿಂದ ಮನಗೂಳಿ ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ಗುಲಬರ್ಗಾ ವಿಶ್ವವಿದ್ಯಾಲಯ ಕನ್ನಡ ಅಧ್ಯಯನ ಸಂಸ್ಥೆ ನಿರ್ದೇಶಕ ಪ್ರೊ.ಎಚ್.ಟಿ.ಪೋತೆ ಮಾತನಾಡಿ, ‘ಮಕ್ಕಳ ಕೈಗೆ ಝಂಡಾ, ತ್ರಿಶೂಲ ಕೊಡಬೇಡಿ. ಪುಸ್ತಕ ಕೊಡಿ ಪುಸ್ತಕ ಸಂಸ್ಕೃತಿ ಹೆಚ್ಚಿಸಬೇಕಾದುದು ಅನಿವಾರ್ಯ’ ಎಂದು ಸಲಹೆ ನೀಡಿದರು.

ಲೇಖಕರಾದ ಭಾರತಿ ವಸ್ತ್ರದ, ದೇವೂ ಮಾಕೊಂಡ, ಸುಜಾತಾ ಚಲವಾದಿ ಹಾಗೂ ಪ್ರಶಸ್ತಿ ಪುರಸ್ಕೃತರಾದ ಸಾಹಿತಿ ಶ್ರೀಶೈಲ ನಾಗರಾಳ ಮಾತನಾಡಿದರು.

ಸಾಹಿತಿ ಶಂಕರ ಬೈಚಬಾಳ ಬಿಡುಗಡೆಗೊಂಡ ಕೃತಿಗಳ ವಿಸ್ತಾರ ಹೇಳುತ್ತ ಬೆರಗು ಪ್ರಕಾಶನ ಸಂಸ್ಥೆ ಕಡಣಿಯಂತಹ ಗ್ರಾಮೀಣ ಪ್ರದೇಶದಲ್ಲಿದ್ದುಕೊಂಡು ಕೇವಲ ಒಂಬತ್ತು ವರ್ಷಗಳ ಅವಧಿಯಲ್ಲಿ 182 ಪುಸ್ತಕಗಳನ್ನು ಪ್ರಕಾಶನಗೊಳಿಸಿದೆ ಎಂದು ಹೇಳಿದರು.

ಬೆರಗು ಪ್ರಕಾಶನ ಸಂಸ್ಥೆಯ ರಮೇಶ ಕತ್ತಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪ್ರಕಾಶನದ ಅಧ್ಯಕ್ಷೆ ವಿಜಯಲಕ್ಷ್ಮೀ ಕತ್ತಿ, ಪ್ರಾಚಾರ್ಯ ಎ.ಆರ್.ಹೆಗ್ಗನದೊಡ್ಡಿ ವೇದಿಕೆಯಲ್ಲಿದ್ದರು.
ಸಿದ್ಧಲಿಂಗ ಕಿಣಗಿ, ಅವಧೂತ ಬಂಡಗಾರ ಕಾರ್ಯಕ್ರಮ ನಿರ್ವಹಿಸಿದರು.

ಅಕಾಡೆಮಿ ಪ್ರಶಸ್ತಿಗಳೆಲ್ಲ ಬೆಂಗಳೂರಿಗೆ ಸೀಮಿತವಾಗದಿರಲಿ

ಸರ್ಕಾರದ ಅಕಾಡೆಮಿ ಪ್ರಶಸ್ತಿಗಳು ಬೆಂಗಳೂರುಮಯವಾಗಿವೆ. ಕನ್ನಡ-ಕರ್ನಾಟಕ ಎಂದರೆ ಬೆಂಗಳೂರು ಮಾತ್ರ ಅಲ್ಲ. ಕಿತ್ತೂರ ಕರ್ನಾಟಕ ಕಲ್ಯಾಣಕರ್ನಾಟಕಗಳಿಗೂ ಪ್ರಶಸ್ತಿಗಳು ದೊರಕಬೇಕು. ಈ ಕುರಿತು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರು ಗಮನಹರಿಸಬೇಕು ಎಂದು ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆ ನಿರ್ದೇಶಕ ಪ್ರೊ.ಎಚ್.ಟಿ. ಪೋತೆ ಸಲಹೆ ನೀಡಿದರು.

ಬೆರಗು ರಾಜ್ಯಮಟ್ಟದ ಪ್ರಶಸ್ತಿ ಪ್ರದಾನ

* ಅತ್ಯುತ್ತಮ ಪ್ರಕಾಶನ ಪ್ರಶಸ್ತಿ(ದಿವಂಗತ ಎಂ.ಸಿ.ಮನಗೂಳಿ ಸ್ಮರಣಾರ್ಥ ದತ್ತಿ): ಬೆಂಗಳೂರು ಅಂಕಿತ ಪುಸ್ತಕ ಪ್ರಕಾಶನ. ಪ್ರಶಸ್ತಿ ನಗದು 25 ಸಾವಿರ ಪ್ರಶಸ್ತಿ ಫಲಕ.

* ಬೆರಗು ಸಮಗ್ರ ಸಾಹಿತ್ಯ ಪ್ರಶಸ್ತಿ-ಕಲಬುರಗಿಯ ಶ್ರೀಶೈಲ ನಾಗರಾಳ. ನಗದು 10 ಸಾವಿರ ರೂಪಾಯಿ ಪ್ರಶಸ್ತಿ ಫಲಕ.

* ಪ್ರೊ.ಎಚ್.ಟಿ.ಪೋತೆ ಹಸ್ತಪ್ರತಿ ಪುರಸ್ಕಾರ ಪ್ರಶಸ್ತಿ-ದೇವೂ ಮಾಕೊಂಡ(ಅನುವಾದಿತ ಕೃತಿ-ಯುದ್ಧ ಮೃದಂಗ). ನಗದು 10 ಸಾವಿರ ರೂಪಾಯಿ ಪ್ರಶಸ್ತಿ ಫಲಕ.

* ಪ್ರೊ.ಎಚ್.ಟಿ.ಪೋತೆ ಸೃಜನಶೀಲ ಸಾಹಿತ್ಯ ಪ್ರಶಸ್ತಿ-ಸುಜಾತಾ ಚಲವಾದಿ(ಲಚಮವ್ವ ಮತ್ತು ಇತರೆ ಕತೆಗಳು). ನಗದು 5 ಸಾವಿರ ರೂಪಾಯಿ ಪ್ರಶಸ್ತಿ ಫಲಕ.

ಅಜ್ಜಿ ಮಗಳು ಮೊಮ್ಮಗಳ ಪುಸ್ತಕಗಳು ಬಿಡುಗಡೆ

ಅಜ್ಜಿ ಬೀದರ್‌ನ ಭಾರತಿ ವಸ್ತ್ರದ ಅವರ ‘ಚೇತನ ಭಾರತಿ’ ಮಗಳು ಬೆಂಗಳೂರಿನ ರಶ್ಮಿ ಎಸ್. ಅವರ ‘ಮಿದು ಮಾತು’ ಪುಸ್ತಕ ಹಾಗೂ ಮೊಮ್ಮಗಳು ಅರ್ನಿ ಇವಳ ‘ಎಕೋಸ್ ಫ್ರಮ್‌ ಮೈ ಜಾರ್’ ಪುಸ್ತಕ ಬೆರಗು ಪ್ರಕಾಶನದಿಂದ ಬಿಡುಗಡೆಗೊಂಡಿರುವುದು ವಿಶೇಷವಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.