ADVERTISEMENT

ನನೆಗುದಿಗೆ ಹಲವು; ಅನುಷ್ಠಾನದಲ್ಲಿ ಕೆಲವು..!

ವಿಜಯಪುರ: ಈ ಹಿಂದಿನ ರಾಜ್ಯ ಬಜೆಟ್‌ಗಳ ಸಿಂಹಾವಲೋಕನ

ಡಿ.ಬಿ, ನಾಗರಾಜ
Published 6 ಫೆಬ್ರುವರಿ 2019, 19:45 IST
Last Updated 6 ಫೆಬ್ರುವರಿ 2019, 19:45 IST
ದೇವರಹಿಪ್ಪರಗಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ಮಡಿವಾಳ ಮಾಚಿದೇವರ ದೇಗುಲಪ್ರಜಾವಾಣಿ ಚಿತ್ರ: ಅಮರನಾಥ ಹಿರೇಮಠ
ದೇವರಹಿಪ್ಪರಗಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ಮಡಿವಾಳ ಮಾಚಿದೇವರ ದೇಗುಲಪ್ರಜಾವಾಣಿ ಚಿತ್ರ: ಅಮರನಾಥ ಹಿರೇಮಠ   

ವಿಜಯಪುರ:ಹಣಕಾಸು ಸಚಿವರು ಆಗಿರುವ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಪ್ರಸಕ್ತ ಸಾಲಿನ (2019–20) ರಾಜ್ಯ ಬಜೆಟ್‌ನ್ನು ಫೆ. 8ರ ಶುಕ್ರವಾರ ವಿಧಾನಸೌಧದಲ್ಲಿ ಮಂಡಿಸಲಿದ್ದಾರೆ.

ಈ ಸಂದರ್ಭ 2015–16, 16–17, 17–18ನೇ ಸಾಲಿನಲ್ಲಿ ಈ ಹಿಂದಿನ ಸರ್ಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ ಮೂರು ಬಜೆಟ್‌ಗಳಲ್ಲಿ ಜಿಲ್ಲೆಗೆ ನೀಡಿದ ಕೊಡುಗೆ, ಘೋಷಿಸಿದ ಘೋಷಣೆಗಳು ಹಾಗೂ ನೂತನ ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ, ಎಚ್‌ಡಿಕೆ 2018ರ ಜುಲೈ 5ರಂದು ಮಂಡಿಸಿದ್ದ 2018–19ನೇ ಸಾಲಿನ ಬಜೆಟ್‌ನ ಘೋಷಣೆ, ಯೋಜನೆ ಯಾವ ಪ್ರಮಾಣದಲ್ಲಿ ಅನುಷ್ಠಾನಗೊಂಡಿವೆ ಎಂಬುದರ ಸಿಂಹಾವಲೋಕನವನ್ನು ‘ಪ್ರಜಾವಾಣಿ’ ನಡೆಸಿದೆ.

ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಜಿಲ್ಲೆಯ ವಿವಿಧ ನೀರಾವರಿ ಯೋಜನೆಗಳ ಕಾಮಗಾರಿ ಶರವೇಗದಲ್ಲಿ ನಡೆಯುವ ಜತೆಗೆ, ನೂತನ ಏಳು ತಾಲ್ಲೂಕು ಹೊಸದಾಗಿ ರಚನೆಗೊಂಡು, ಮೂಲ ಸೌಕರ್ಯಗಳ ಕೊರತೆ ನಡುವೆಯೂ ಕಾರ್ಯಾಚರಿಸುತ್ತಿರುವುದು ವಿಶೇಷ.

ADVERTISEMENT

2018–19ನೇ ಸಾಲಿನ ಬಜೆಟ್‌ನಲ್ಲಿ ಕುಮಾರಸ್ವಾಮಿ ಘೋಷಿಸಿದ ಜನಪ್ರಿಯ ರೈತರ ಸಾಲಮನ್ನಾ ಯೋಜನೆ ಜಿಲ್ಲೆಯಲ್ಲೂ ನಡೆದಿದೆ. ವಿಜಯಪುರ ಜಿಲ್ಲಾ ಆಸ್ಪತ್ರೆಯಲ್ಲಿ ಕಾರ್ಡಿಯಾಲಾಜಿ, ಆಂಕಾಲಜಿ ಆರೋಗ್ಯ ಸೇವೆಯ ಘಟಕ ಹಾಗೂ ಟ್ರಾಮಾ ಘಟಕದ ಸ್ಥಾಪನೆಗಾಗಿ ಕಟ್ಟಡ ಕಾಮಗಾರಿ ಶುರುವಾಗಿದೆ.

ವಿಜಯಪುರ ಪ್ರವಾಸೋದ್ಯಮದ ಸಮಗ್ರ ಅಭಿವೃದ್ಧಿಗೆ ಸಂಕಲ್ಪ ಪರಿಣಾಮಕಾರಿಯಾಗಿ ಅನುಷ್ಠಾನಗೊಂಡಿಲ್ಲ. ಇನ್ನೂ ಕೃಷ್ಣಾ ಮೇಲ್ದಂಡೆ ಯೋಜನೆಯ ಮೂರನೇ ಹಂತದ ಪುನರ್ವಸತಿ ಮತ್ತು ಪುನರ್ ನಿರ್ಮಾಣ ಕಾರ್ಯ ತ್ವರಿತಗೊಂಡಿಲ್ಲ. ಈ ಹಿಂದಿನ ವೇಗವನ್ನು ಕಳೆದುಕೊಂಡಿದೆ ಎಂಬ ಮಾತು ಕೇಳಿ ಬಂದಿದೆ.

2017–18ನೇ ಸಾಲಿನ ಬಜೆಟ್‌ನಲ್ಲಿ ಘೋಷಿಸಿದಂತೆ ನಾಗರಬೆಟ್ಟ ಏತ ನೀರಾವರಿ ಯೋಜನೆ, ಚಡಚಣ ಏತ ನೀರಾವರಿ ಯೋಜನೆ, ಬೂದಿಹಾಳ–ಪೀರಾಪುರ ಏತ ನೀರಾವರಿ ಯೋಜನೆಗಳ ಟೆಂಡರ್‌ ಪ್ರಕ್ರಿಯೆ ಪೂರ್ಣಗೊಳಿಸಿ, ಶಂಕುಸ್ಥಾಪನೆ ನೆರವೇರಿದೆ. ಆದರೆ ಕಾಮಗಾರಿ ನಿರೀಕ್ಷಿತ ಮಟ್ಟದಲ್ಲಿಲ್ಲ.

ಕೊಲ್ಹಾರ, ನಿಡಗುಂದಿ, ಬಬಲೇಶ್ವರ, ತಿಕೋಟಾ, ತಾಳಿಕೋಟೆ, ಚಡಚಣ, ದೇವರಹಿಪ್ಪರಗಿ ಪಟ್ಟಣ ತಾಲ್ಲೂಕು ಕೇಂದ್ರ ಸ್ಥಾನಗಳಾಗಿ ಕಾರ್ಯ ನಿರ್ವಹಿಸುತ್ತಿದ್ದು, ಮೂಲ ಸೌಕರ್ಯಗಳ ನಿರೀಕ್ಷೆಯಲ್ಲಿವೆ. ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ, ರಕ್ತ ವಿದಳನ ಘಟಕ, ಪ್ರವಾಸೋದ್ಯಮಕ್ಕೆ ಸಂಬಂಧಿಸಿದ ‘ಬೆಳ್ಳಿ ಶೃಂಗ’ ಇನ್ನೂ ಕಾರ್ಯಾರಂಭಿಸಬೇಕಿದೆ.

2016–17ನೇ ಸಾಲಿನಲ್ಲಿ ಇಂಡಿ ತಾಲ್ಲೂಕಿನ ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲು ಘೋಷಿಸಲಾಗಿದ್ದ ಸಂಖ, ಭುಯ್ಯಾರ ಪ್ಯಾಕೇಜ್‌ನಡಿ ಕೆರೆ ತುಂಬುವ ಯೋಜನೆ ಕಾರ್ಯಗತಗೊಂಡಿವೆ. ಇದರ ಪರಿಣಾಮ ನೀರಿನ ಹಾಹಾಕಾರ ಕೊಂಚ ತಗ್ಗಿದೆ. ಮುಳವಾಡ, ಚಿಮ್ಮಲಗಿ, ಇಂಡಿ ಏತ ನೀರಾವರಿ ಯೋಜನೆಯಡಿ ಕಾಮಗಾರಿ ಪ್ರಗತಿ ಸಾಧಿಸಿವೆ. ಕೆಲವು ಮುಗಿದಿದ್ದರೆ, ಹಲವು ಅಂತಿಮ ಹಂತದಲ್ಲಿವೆ.

ವಿಜಯಪುರದ ಐತಿಹಾಸಿಕ ನೀರು ಸರಬರಾಜು ವ್ಯವಸ್ಥೆ ಪುನರುಜ್ಜೀವನಗೊಳಿಸುವ ಯೋಜನೆ ನನೆಗುದಿಗೆ ಬಿದ್ದಿದೆ. ಹನ್ನೆರಡನೇ ಶತಮಾನದ ಮಹಾಶರಣರಲ್ಲಿ ಒಬ್ಬರಾದ ಮಡಿವಾಳ ಮಾಚಿದೇವರ ಜನ್ಮಸ್ಥಳ ದೇವರ ಹಿಪ್ಪರಗಿ ಪಟ್ಟಣದಲ್ಲಿ ಮಾಚಿದೇವ ಸ್ಮಾರಕ ನಿರ್ಮಾಣ ಕೆಲಸ ನಡೆದಿದೆ. ಇನ್ನೆರೆಡು ತಿಂಗಳಲ್ಲಿ ಪೂರ್ಣಗೊಳ್ಳಲಿದೆ.

ಮಹಿಳಾ ವಿ.ವಿ.ಗೆ ಬಿಡುಗಡೆಯಾಗಿದ್ದ ₹ 30 ಕೋಟಿ ಅನುದಾನ ಇದೀಗ ಪೂರ್ಣ ಪ್ರಮಾಣದಲ್ಲಿ ಬಂದಿದೆ. ಇನ್ನೂ ಹಲ ಕೆಲಸ ನಡೆಯಬೇಕಿದೆ. ‘ಕಿರು ತಾರಾಲಯ’ ಸ್ಥಾಪನೆ ಘೋಷಣೆಗೆ ಸೀಮಿತವಾಗಿದೆ. ಟೆಂಡರ್‌ ಹಂತ ದಾಟಿಲ್ಲ. ಐಟಿ ಪಾರ್ಕ್‌ ಸ್ಥಾಪನೆ ಇಂದಿಗೂ ಗಗನ ಕುಸುಮವಾಗಿದೆ ಎಂದು ವಿ.ವಿ. ಮೂಲಗಳು ‘ಪ್ರಜಾವಾಣಿ’ಗೆ ಖಚಿತ ಪಡಿಸಿವೆ.

2015–16ನೇ ಸಾಲಿನ ಬಜೆಟ್‌ ಘೋಷಣೆಯೇ ಇಂದಿಗೂ ಅನುಷ್ಠಾನಗೊಂಡಿಲ್ಲ. ವಿಜಯಪುರ ನಗರವನ್ನು ಮಾದರಿ ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸಲು ₹ 10 ಕೋಟಿ ಅನುದಾನ ಮಂಜೂರಾಗಿದ್ದರೂ; 80% ಅನುದಾನ ಉಳಿದಿದೆ. ‘ಕಾರವಾನ್’ ಪ್ರವಾಸೋದ್ಯಮ ಯೋಜನೆಯ ಮಾಹಿತಿಯೇ ಸಿಗದಾಗಿದೆ ಎಂಬ ದೂರು ಪ್ರವಾಸಿಗರದ್ದು.

ವಿಜಯಪುರಕ್ಕೆ ‘ಘನತ್ಯಾಜ್ಯ ನಿರ್ವಹಣಾ’ ಘಟಕ ಘೋಷಣೆಯಾಗಿದ್ದರೂ; ಇದೂವರೆಗೂ ಕಾರ್ಯಾಚರಣೆ ಆರಂಭಗೊಂಡಿಲ್ಲ. ಮಹಿಳಾ ವಿಶ್ವವಿದ್ಯಾಲಯದಲ್ಲಿ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರ ಸ್ಥಾಪನೆಗೆ ಸಂಬಂಧಿಸಿದಂತೆ ಚಟುವಟಿಕೆ ನಡೆದಿವೆ. ಭಾಸ್ಕರಾಚಾರ್ಯರ ಅಧ್ಯಯನ ಪೀಠ ಸ್ಥಾಪನೆಯಾಗಿದ್ದರೂ; ಕಾರ್ಯ ವೈಖರಿ ವಿ.ವಿ.ಗಷ್ಟೇ ಸೀಮಿತವಾಗಿದೆ ಎಂಬ ದೂರು ವ್ಯಾಪಕವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.