ADVERTISEMENT

‘ಶಾಸ್ತ್ರಿ ಮಾರುಕಟ್ಟೆ’ಗೆ ಬೀಗ

ಮುಚ್ಚಿದ 500 ಮಳಿಗೆ: ಪ್ರತಿ ನಿತ್ಯ 20 ಸಾವಿರ ಗ್ರಾಹಕರ ಭೇಟಿ

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2020, 14:03 IST
Last Updated 15 ಮಾರ್ಚ್ 2020, 14:03 IST
ವಿಜಯಪುರದ ಹೃದಯ ಭಾಗದಲ್ಲಿರುವ ಲಾಲ್‌ ಬಹದ್ಧೂರ್ ಶಾಸ್ತ್ರಿ ಮಾರುಕಟ್ಟೆಯಲ್ಲಿರುವ ಅಂಗಡಿಗಳು ಬಂದ್ ಆಗಿರುವುದು
ವಿಜಯಪುರದ ಹೃದಯ ಭಾಗದಲ್ಲಿರುವ ಲಾಲ್‌ ಬಹದ್ಧೂರ್ ಶಾಸ್ತ್ರಿ ಮಾರುಕಟ್ಟೆಯಲ್ಲಿರುವ ಅಂಗಡಿಗಳು ಬಂದ್ ಆಗಿರುವುದು   

ವಿಜಯಪುರ: ಕೊರೊನಾ ಭೀತಿ ಹಿನ್ನೆಲೆಯಲ್ಲಿ ನಗರದ ಹೃದಯ ಭಾಗದಲ್ಲಿರುವ ಲಾಲ್ ಬಹದ್ಧೂರ್ ಶಾಸ್ತ್ರಿ ಮಾರುಕಟ್ಟೆಯನ್ನು ವಾರದ ಮಟ್ಟಿಗೆ ಬಂದ್ ಮಾಡಿಸಲಾಗಿದೆ.

ಮೂರಂತಸ್ತಿನ ಈ ಮಾರುಕಟ್ಟೆಯಲ್ಲಿ 500 ಮಳಿಗೆಗಳು ಇವೆ. 13 ಪ್ರವೇಶ ದ್ವಾರಗಳು ಇವೆ. ಯಾರು, ಯಾವ ಕಡೆಯಿಂದಾದರೂ ಬಂದು, ವ್ಯಾಪಾರ ಮುಗಿಸಿಕೊಂಡು ಹೋಗುವಂತಹ ವ್ಯವಸ್ಥೆ ಇಲ್ಲಿದೆ. ಇಲ್ಲಿ ಪ್ರತಿ ನಿತ್ಯ ಕನಿಷ್ಠ 20 ಸಾವಿರ ಗ್ರಾಹಕರು ವಿವಿಧ ವಸ್ತುಗಳ ಖರೀದಿಗೆ ಭೇಟಿ ನೀಡುತ್ತಾರೆ. ಹೀಗಾಗಿ, ಸರ್ಕಾರದ ನಿರ್ದೇಶನದಂತೆ ಮುಂಜಾಗ್ರತಾ ಕ್ರಮವಾಗಿ ಇದನ್ನು ಬಂದ್ ಮಾಡಿಸಲಾಗಿದೆ.

‘ಶಾಸ್ತ್ರಿ ಮಾರುಕಟ್ಟೆಗೆ ಹೊಂದಿಕೊಂಡಂತೆ ಗಾಂಧಿ ವೃತ್ತದಿಂದ ಬಿಎಲ್‌ಡಿಇ, ಲಿಂಗದಗುಡಿ ವರೆಗೆ ಸುಮಾರು 5 ಸಾವಿರ ಅಂಗಡಿಗಳಿವೆ. ಇವರೆಲ್ಲರಿಗೂ ವ್ಯಾಪಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ನಮಗೆ ಮಾತ್ರ ಅವಕಾಶ ನೀಡದಿರುವುದರಿಂದ ನಷ್ಟ ಅನುಭವಿಸುವಂತಾಗಿದೆ. ವ್ಯಾಪಾರವನ್ನೇ ನಂಬಿಕೊಂಡಿರುವ ನಮಗೆ ಒಂದು ವಾರ ಅಂಗಡಿಗಳನ್ನು ಬಂದ್ ಮಾಡುವುದರಿಂದ ಬಹಳಷ್ಟು ತೊಂದರೆ ಆಗುತ್ತದೆ’ ಎಂದು ಹೆಸರುಹೇಳಲು ಇಚ್ಛಿಸದ ವ್ಯಾಪಾರಿಯೊಬ್ಬರು ‘ಪ್ರಜಾವಾಣಿ’ ಎದುರು ಅಳಲು ತೋಡಿಕೊಂಡರು.

ADVERTISEMENT

ಕುರಿ ಮಾಂಸಕ್ಕೆ ಬೇಡಿಕೆ: ‘ಕೊರೊನಾ ವೈರಸ್ ಸೋಂಕು ಕೋಳಿಗಳಿಂದ ಹರಡುತ್ತದೆ ಎಂಬುದು ಸುಳ್ಳು ಸುದ್ದಿ. ಕೋಳಿ ಮಾಂಸ ಹಾಗೂ ಮೊಟ್ಟೆ ಸುರಕ್ಷಿತ ಆಹಾರವಾಗಿದೆ’ ಎಂದು ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯು ಸಾರ್ವಜನಿಕರಲ್ಲಿ ತಿಳಿವಳಿಕೆ ಮೂಡಿಸಿದ್ದರೂ ಜನರು ಕೋಳಿ ಮಾಂಸ ಖರೀದಿಸಲು ಹಿಂದೇಟು ಹಾಕುತ್ತಿದ್ದಾರೆ. ಇದರಿಂದಾಗಿ ಕುರಿ ಮತ್ತು ಆಡಿನ ಮಾಂಸಕ್ಕೆ ಬೇಡಿಕೆ ಹೆಚ್ಚಾಗಿದೆ.

‘ದೊಡ್ಡ ಸಭೆ, ಸಮಾರಂಭಗಳಿಗೆ ದೊಡ್ಡ ಆಡು ಮತ್ತು ಕುರಿಗಳನ್ನು ಹಾಗೂ ಸಣ್ಣ ಸಮಾರಂಭಗಳಿಗೆ ಸಣ್ಣ ಆಡು, ಕುರಿಗಳನ್ನು ಜನರು ಖರೀದಿಸುತ್ತಿದ್ದರು. ಆದರೆ, ಈ ವಾರ ಸಭೆ, ಸಮಾರಂಭ, ಮದುವೆಗಳನ್ನು ನಿಷೇಧಿಸಿದ ಪರಿಣಾಮ ದೊಡ್ಡ ಆಡು, ಕುರಿಗಳನ್ನು ಕೇಳುವವರೇ ಇಲ್ಲ. ಸಣ್ಣ ಕುರಿ, ಆಡುಗಳನ್ನು ಮಾತ್ರ ಖರೀದಿಸುತ್ತಿದ್ದಾರೆ’ ಎಂದು ಇಲ್ಲಿಯ ಎಪಿಎಂಸಿಯಲ್ಲಿ ಭಾನುವಾರ ಆಡುಗಳನ್ನು ಮಾರಾಟಕ್ಕೆ ತಂದಿದ್ದ ದ್ಯಾಮ್ಲು ಚವ್ಹಾಣ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.