
ವಿಜಯಪುರ: ಮುಖ್ಯಮಂತ್ರಿಯಾಗಲು ಹಿಂದೂ ಸಮಾಜವನ್ನು ಒಡೆಯುವ ದುಸ್ಸಾಹಸಕ್ಕೆ ಸಚಿವ ಎಂ.ಬಿ.ಪಾಟೀಲರು ಕೈ ಹಾಕಬಾರದು. ಈ ಹಿಂದೆಯೂ ಪ್ರತ್ಯೇಕ ಲಿಂಗಾಯತ ಧರ್ಮ ವಿಷಯ ಮುನ್ನೆಲೆಗೆ ತಂದು ಕೈ ಸುಟ್ಟುಕೊಂಡಿದ್ದೀರಿ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಗುರುಲಿಂಗಪ್ಪ ಅಂಗಡಿ ಎಚ್ಚರಿಸಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕೆಳಗಿಳಿಸಿ ಮುಖ್ಯಮಂತ್ರಿ ಆಗುವ ಇರಾದೆಯಲ್ಲಿರುವ ಸಚಿವ ಎಂ.ಬಿ.ಪಾಟೀಲರು ಧರ್ಮ ವಿಭಜನೆಯಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿದರು.
2028ರಲ್ಲಿ ಮುಖ್ಯಮಂತ್ರಿ ಆಗುವ ಕನಸು ಕಾಣಬೇಡಿ. ನವೆಂಬರ್ ಕ್ರಾಂತಿಯಲ್ಲಿಯೇ ನೀವು ಮುಖ್ಯಮಂತ್ರಿ ಆಗಬೇಕು, ಹೊರತು ಮುಂದೆ ಆಗಲು ಸಾಧ್ಯವಿಲ್ಲ. 2028ರಲ್ಲಿ ಬಿಜೆಪಿಯೇ ಅಧಿಕಾರಕ್ಕೆ ಬರಲಿದೆ ಎಂದರು.
ಜನರೇ ದಂಗೆ ಏಳುತ್ತಾರೆ:
ಕನೇರಿ ಶ್ರೀಗಳ ಮನಸ್ಸಿಗೆ ನೋವು ಮಾಡುವ ಕೆಲಸ ನಡೆದಿದೆ. ಇದೇ ರೀತಿ ಪರಿಸ್ಥಿತಿ ಮುಂದುವರೆದರೆ ಜನರೇ ದಂಗೆ ಏಳುತ್ತಾರೆ, ನಾವು ಸಹ ಧರ್ಮಸ್ಥಳ ಮಾದರಿಯಲ್ಲಿ ಹೋರಾಟ ನಡೆಸಲು ಬದ್ಧ ಎಂದರು.
ಸಹಜವಾದ ಮಾತಿಗೆ ದೊಡ್ಡದು ಮಾಡುವ ಕೆಲಸ ನಡೆದಿದೆ, ರಾಜ್ಯ ಸರ್ಕಾರ ಈ ವಿಷಯದಲ್ಲಿ ಶ್ರೀಗಳ ಮೇಲೆ ನಿರ್ಬಂಧ ಹೇರಿ ಈ ವಿಷಯ ದೊಡ್ಡದು ಮಾಡಿದೆ ಎಂದರು.
ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಒತ್ತಾಯಿಸಿ 35 ದಿನಗಳಿಂದ ಹೋರಾಟ ನಡೆಯುತ್ತಿದೆ, ಆ ಸ್ಥಳಕ್ಕೆ ಮುಖ್ಯಮಂತ್ರಿಗಳು ಭೇಟಿ ನೀಡಬೇಕಿತ್ತು, ಆದರೆ ಈ ಸರ್ಕಾರ ಮಾತ್ರ ಯಾರಿಗೂ ಸ್ಪಂದನೆಯೇ ಇಲ್ಲದಂತಾಗಿದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.