ವಿಜಯಪುರ: ಸರ್ಕಾರಿ ವೈದ್ಯಕೀಯ ಮಹಾವಿದ್ಯಾಲಯವನ್ನು ಯಾವುದೇ ಕಾರಣಕ್ಕೂ ಖಾಸಗಿ ಸಹಭಾಗಿತ್ವದಲ್ಲಿ ಸ್ಥಾಪಿಸಬಾರದು ಎಂದು ಆಗ್ರಹಿಸಿ ನಡೆಸುತ್ತಿರುವ ಧರಣಿಗೆ ಯಾರದೋ ಕುಮ್ಮಕ್ಕಿದೆ ಎಂದು ಹೇಳುವ ಮೂಲಕ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಅವರು ಹೋರಾಟಗಾರರ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ. ಸಚಿವರು ತಮ್ಮ ಮಾತನ್ನು ಹಿಂಪಡೆದು, ಹೋರಾಟಗಾರರ ಕ್ಷಮೆ ಕೇಳಬೇಕು. ಇಲ್ಲದಿದ್ದರೆ ಸಚಿವರ ವಿರುದ್ಧವೇ ಹೋರಾಟ ಮಾಡಬೇಕಾಗುತ್ತದೆ ಎಂದು ಅಖಂಡ ಕರ್ನಾಟಕ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಎಚ್ಚರಿಕೆ ನೀಡಿದ್ದಾರೆ.
ಧರಣಿ ಕುಳಿತವರು ಯಾವ ಕಾರಣಕ್ಕಾಗಿ ಕುಳಿತಿದ್ದಾರೆ, ಅವರ ನಿಲುವೇನು? ಯಾರಿಗಾಗಿ ಧರಣಿ ಕುಳಿತಿದ್ದಾರೆ ಮತ್ತು ಏತಕ್ಕಾಗಿ ಧರಣಿ ನಡೆಸುತ್ತಿದ್ದಾರೆ ಎಂದು ತಿಳಿದುಕೊಳ್ಳದೇ ಅಧಿಕಾರದ ದರ್ಪದಿಂದ ತಮ್ಮ ಮನಸ್ಸಿಗೆ ತೋಚಿದಂತೆ ಮಾತನಾಡಿರುವುದು ತಮ್ಮ ಸಚಿವ ಸ್ಥಾನಕ್ಕೆ ಶೋಭೆ ತರುವಂತಹದ್ದಲ್ಲ ಎಂದಿದ್ದಾರೆ.
ಧರಣಿ ಕುಳಿತವರು ಯಾರು ಅಜ್ಞಾನಿಗಳಿಲ್ಲ, ಎಲ್ಲರೂ ಉನ್ನತ ಶಿಕ್ಷಣ ಅಧ್ಯಯನ ಮಾಡಿದಂತವರು, ಇಲ್ಲಿ ಯಾರದೂ ಸ್ವಾರ್ಥವಿಲ್ಲ, ಮತ್ತೊಬ್ಬರಿಂದ ಪ್ರಚೋದನೆಗೆ ಒಳಗಾಗಿ ಅಥವಾ ಯಾರ ಕುಮ್ಮಕ್ಕಿನಿಂದ ಧರಣಿ ಕುಳಿತಿಲ್ಲ, ಹೋರಾಟಗಾರರಿಗೆ ಸಚಿವರು ಅಗೌರವವಾಗಿ ಮಾತನಾಡಿ ರೊಚ್ಚಿಗೆಬ್ಬಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.
ಯಾರ ಕುಮ್ಮಕ್ಕಿನಿಂದ ಹೋರಾಟ ನಡೆಯುತ್ತಿದೆ ಎಂಬುವುದನ್ನು ಸಚಿವರು ಬಹಿರಂಗ ಪಡಿಸಲಿ. ಇವರು ಆಯ್ಕೆಯಾಗಿರುವುದು ಜನರ ಮತ ಭಿಕ್ಷೆಯಿಂದ ಎನ್ನುವುದು ಮರೆತಿದ್ದಾರೆ, ಜನರಿಗೆ ಅನ್ಯಾಯವಾದರೆ ಅನ್ಯಾಯವನ್ನು ಪ್ರತಿಭಟಿಸುವುದು ಸಂಘಟನೆಗಳ ಕರ್ತವ್ಯ, ಇಲ್ಲಿ ಯಾರ ಮಾತು ಕೇಳಿ ಯಾರ ಮುಲಾಜಿಗೂ ಒಳಗಾಗುವ ಅಗತ್ಯವಿಲ್ಲ ಎಂದಿದ್ದಾರೆ.
ಸರ್ಕಾರ ಖಾಸಗಿ ಸಹಭಾಗಿತ್ವದಲ್ಲಿ ವೈದ್ಯಕೀಯ ಕಾಲೇಜು ನಡೆಸಲು ಉದ್ದೇಶಿಸಿರುವುದು ಕೋಟಿ ಕೋಟಿ ಹಣವನ್ನು ಲೂಟಿ ಮಾಡುವ ಹುನ್ನಾರದಿಂದಲೇ ಹೊರತು, ಜನ ಹಿತಕ್ಕಲ್ಲ. ಇದರಲ್ಲಿ ಪಿಪಿಪಿ ಮಾದರಿ ಬೇಕಾಗಿರುವುದು ಜನಪ್ರತಿನಿಧಿಗಳಿಗೆ ಹೊರತು ಜನಸಾಮಾನ್ಯರಿಗಲ್ಲ. ಪಿಪಿಪಿ ಮಾಡುವುದರಿಂದ ಜನಪ್ರತಿನಿಧಿಗಳಿಗೇ ಲಾಭವಿದೆ ಹೊರತಾಗಿ ಜನಸಾಮಾನ್ಯರಿಗೆ ನಯಾಪೈಸೆ ಲಾಭವಿಲ್ಲ ಎಂದು ಆರೋಪಿಸಿದರು.
ಒಂದು ವೇಳೆ ಸಚಿವರು ಹೇಳಿದಂತೆ ಪಿಪಿಪಿ ಮಾದರಿಯಿಂದ ಖಾಸಗಿಯವರಿಗೆ ಅನುಕೂಲವಿಲ್ಲ ಎಂದಾದರೆ ₹ 500 ಕೋಟಿ ಬಂಡವಾಳ ಹೂಡಲಾಗುವುದು ಎಂದು ಶಾಸಕ ಯತ್ನಾಳ ಅವರು ಹೇಳಿರುವುದು ಏತಕ್ಕೆ. ಇದು ತಮ್ಮ ಲಾಭಕ್ಕಾಗಿಯೇ ಹೊರತಾಗಿ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸುವುದಕ್ಕಲ್ಲ. ಇದನ್ನು ಖಂಡಿಸಿ ನಾವು ಹೋರಾಟ ನಡೆಸುತ್ತಿದ್ದರೆ ಹೋರಾಟಗಾರರಿಗೆ ಹಗುರವಾಗಿ ಮಾತನಾಡುವುದು ಸರಿಯಲ್ಲ ಎಂದು ಪ್ರಕಟಣೆಯಲ್ಲಿ ಎಚ್ಚರಿಕೆ ನೀಡಿದ್ದಾರೆ.
ಧರಣಿ ಕುಳಿತವರು ಎಲ್ಲರೂ ಪ್ರಾಮಾಣಿಕತೆಯಿಂದ ಸ್ವಂತ ಸಾವಿರಾರು ರೂಪಾಯಿ ಖರ್ಚು ಮಾಡಿ ಸಮಾಜದ ಒಳಿತಿಗಾಗಿ ಹೋರಾಟ ನಡೆಸುತ್ತಿದ್ದಾರೆ. ಸಾರ್ವಜನಿಕ ಕಾಳಜಿಯನ್ನು ಹೊಂದಿದ್ದಾರೆ ಯಾರ ವೈಯಕ್ತಿಕ ಹಿತಾಸಕ್ತಿ ಹೋರಾಟದಲ್ಲಿ ಇಲ್ಲಅರವಿಂದ ಕುಲಕರ್ಣಿರಾಜ್ಯ ಪ್ರಧಾನ ಕಾರ್ಯದರ್ಶಿಅಖಂಡ ಕರ್ನಾಟಕ ರೈತ ಸಂಘ
ಧರಣಿ 16 ದಿನ ಪೂರೈಕೆ
ವಿಜಯಪುರ: ಜಿಲ್ಲೆಯಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗಾಗಿ ಅನಿರ್ದಿಷ್ಟಾವಧಿ ಧರಣಿ ಶುಕ್ರವಾರ 16ನೇ ದಿನ ಪೂರೈಸಿತು. ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿ ರಾಜ್ಯ ಉಪಾಧ್ಯಕ್ಷ ಸೋಮಶೇಖರಗೌಡ ಮಾತನಾಡಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಶಿಕ್ಷಣಕ್ಕೆ ಕಡಿಮೆ ಬಜೆಟ್ ಒದಗಿಸುತ್ತಿವೆ. ಶಿಕ್ಷಣ ಉಚಿತ ಕೊಟ್ಟರೆ ಮುಂದೆ ಸರ್ಕಾರವನ್ನೇ ಪ್ರಶ್ನೆ ಮಾಡುತ್ತಾರೆ ಅದಕ್ಕಾಗಿ ಎಲ್ಲರನ್ನೂ ಶಿಕ್ಷಣದಿಂದ ಆದಷ್ಟು ದೂರ ಇಡುವ ಕೆಲಸ ನಡೆದಿದೆ ಎಂದು ಆರೋಪಿಸಿದರು. ಅರವಿಂದ ಕುಲಕರ್ಣಿ ಭಗವಾನ್ ರೆಡ್ಡಿ ಅಕ್ರಂ ಮಾಶಾಳಕರ ಲಲಿತಾ ಬಿಜ್ಜರಗಿ ವಿದ್ಯಾವತಿ ಅಂಕಲಗಿ ಮಲ್ಲಿಕಾರ್ಜುನ ಬಟಗಿ ಬಾಬುರಾವ್ ಬೀರಕಬ್ಬಿ ಸುರೇಶ ಬಿಜಾಪುರ ಅನಿಲ ಹೊಸಮನಿ ಭರತಕುಮಾರ ಎಚ್ ಟಿ ಸಿದ್ದಲಿಂಗ ಬಾಗೇವಾಡಿ ಗೀತಾ. ಎಚ್. ಸಿದ್ರಾಮ ಹಿರೇಮಠ ಜಯದೇವ ಸೂರ್ಯವಂಶಿ ಶಿವಬಾಳಮ್ಮು ಕೊಂಡಗೂಳಿ ಶ್ರೀಕಾಂತ್ ಕೊಂಡಗೂಳಿ ಕಾವೇರಿ ರಜಪೂತ ಮಹದೇವಿ ಧರ್ಮಶೆಟ್ಟಿ ಶಿವರಂಜನಿ ಎಸ್ ಬಿ ನೀಲಾಂಬಿಕಾ ಬಿರಾದರ ಮೀನಾಕ್ಷಿ ಮಿಣಜಗಿ ಸುಶೀಲಾ ಮಿಣಜಗಿ ಬೋಗೇಶ್ ಸೋಲಾಪುರ ಮಲ್ಲಿಕಾರ್ಜುನ ಎಚ್.ಟಿ ಬಸವರಾಜ ಸುತ್ತಗುಂಡಿ ಪ್ರಕಾಶ ಬಿರಾದರ ಸಂಗಪ್ಪ ಹಂಗರಗಿ ಸಂಗಮೇಶ ಕುಂಬಾರ ಮಳೆಪ್ಪ ಸುರೇಶ ಕಿರಸಾರ ಹನಮಪ್ಪ ಹೂಗಾರ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.