ವಿಜಯಪುರ: ‘ಕೋಮು ಪ್ರಚೋದನಾಕಾರಿ ಹೇಳಿಕೆ ನೀಡುವ ಮೂಲಕ ಸಮಾಜದ ಸೌಹಾರ್ದ ಕೆಡಿಸಲು ಯತ್ನಿಸುತ್ತಿರುವ ಶಾಸಕ ಬಸನಗೌಡ ಪಾಟೀಲ ಯತ್ನಾಳ ಬಾಯಿ ಮುಚ್ಚಿಸಲು ಮುಖ್ಯಮಂತ್ರಿ ಮತ್ತು ಗೃಹ ಸಚಿವರೊಂದಿಗೆ ಚರ್ಚಿಸಿ ಕಾನೂನು ಕ್ರಮಕೈಗೊಳ್ಳಲಾಗುವುದು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಹೇಳಿದರು.
ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಯತ್ನಾಳ ಅವರು ಪದೇ ಪದೇ ಮುಸ್ಲಿಮರನ್ನು ಗುರಿಯಾಗಿಸಿಕೊಂಡು ಮಾತನಾಡುತ್ತಿರುವುದು ಸರಿಯಲ್ಲ, ಅವರ ಹೇಳಿಕೆಗಳು ಅವರ ಹೊಲಸು, ಅಸಹ್ಯ ಮನಸ್ಥಿತಿಯ ಪ್ರತೀಕವಾಗಿದೆ’ ಎಂದು ಕಿಡಿಕಾರಿದರು.
‘ಬಸನಗೌಡ ಎಂಬ ಹೆಸರನ್ನು ಇಟ್ಟುಕೊಂಡಿರುವ ಯತ್ನಾಳ ಅವರ ಬಾಯಲ್ಲಿ ಬಸವಣ್ಣನವರ ವಚನಗಳು ಬರಬೇಕಿತ್ತು. ಆದರೆ, ಬರೀ ಮುಸ್ಲಿಂ ದ್ವೇಷದ ಮಾತುಗಳು ಬರುತ್ತಿವೆ. ಅಭಿವೃದ್ಧಿ ವಿಷಯದ ಮಾತುಗಳೇ ಅವರ ಬಾಯಲ್ಲಿ ಬರುತ್ತಿಲ್ಲ, ಕೇವಲ ಇನ್ನೊಂದು ಧರ್ಮದ ಹೆಣ್ಣು ಮಕ್ಕಳನ್ನು, ದೇವರನ್ನು ಎಳೆದು ತರುವುದು ಕೇಂದ್ರ ಸಚಿವರಾಗಿದ್ದವರಿಗೆ ಶೋಭೆ ತರುವುದಿಲ್ಲ’ ಎಂದರು.
‘ವಿಜಯಪುರ ಬಸವ ಜನ್ಮ ಭೂಮಿ, ಆದಿಲ್ ಶಾಹಿಗಳ ಆಡಳಿತ ನಡೆಸಿದ ಸಾಮರಸ್ಯದ ಭೂಮಿ, ಸಿದ್ದೇಶ್ವರ ಶ್ರೀಗಳು ನಡೆದಾಡಿದ ಪುಣ್ಯ ಭೂಮಿ. ಈ ನೆಲದಲ್ಲಿ ಕೋಮು ಸಾಮರಸ್ಯ ಕದಡಲು ಯತ್ನಾಳಗೆ ಬಿಡುವುದಿಲ್ಲ'ಎಂದರು.
‘ಯತ್ನಾಳ ಅವರನ್ನು ಬಿಜೆಪಿಯಿಂದ ಹೊರಹಾಕಿದರೂ ಇನ್ನೂ ಬುದ್ದಿ ಬಂದಿಲ್ಲ, ಅವರು ಸುಧಾರಣೆ ಆಗುವುದಿಲ್ಲ. ತಮಗೊಬ್ಬರಿಗೆ ಮಾತ್ರ ಬೈಯ್ಯಲು ಬರುತ್ತದೆ ಎಂದು ಯತ್ನಾಳ ಬಾವಿಸಿದ್ದರು. ಆದರೆ, ಇದೀಗ ಅವರ ಕ್ರಿಯೆಗೆ ಪ್ರತಿಕ್ರಿಯೆ ವ್ಯಕ್ತವಾಗತೊಡಗಿದೆ. ಅವರು ಆರಂಭಿಸಿದ ಬೈಗುಳಗಳೇ ಅವರಿಗೆ ತಿರುಗುಬಾಣವಾಗಿವೆ, ಅವರ ಕೃತ್ಯಕ್ಕೆ ಅವರೇ ಪ್ರತಿಫಲ ಉಣ್ಣುವಂತಾಗಿದೆ’ ಎಂದು ಹೇಳಿದರು.
‘ಖಾದ್ರಿ ವಕೀಲ ಅವರು ಯತ್ನಾಳ ಅವರ ಕುಟುಂಬದ ಬಗ್ಗೆ ಆಡಿರುವ ಅವಹೇಳನಕಾರಿ ಮಾತುಗಳನ್ನು ನಾನು ಸಮರ್ಥಿಸಿಕೊಳ್ಳುವುದಿಲ್ಲ, ಖಂಡನೀಯ’ ಎಂದರು.
‘ಮಹಾನಗರ ಪಾಲಿಕೆ ಮೇಯರ್ ಚುನಾವಣೆಯಲ್ಲಿ ಕಾಂಗ್ರೆಸ್ ಸಚಿವರೊಬ್ಬರು ಬಿಜೆಪಿಗೆ ಸಹಾಯ ಮಾಡಿದ್ದಾರೆ’ ಎಂದು ಯತ್ನಾಳ ಅವರು ಹೇಳಿಕೆ ನೀಡುವ ಮೂಲಕ ಗೊಂದಲ ಸೃಷ್ಟಿಸಲು ಯತ್ನಿಸಿದ್ದಾರೆ. ರಾಜಕೀಯ ನಾಟಕ ಮಾಡುತ್ತಿದ್ದಾರೆ’ ಎಂದು ಆರೋಪಿಸಿದರು.
‘ಬಿಜೆಪಿ ಸರ್ಕಾರದ ಅವಧಿಯಲ್ಲಿ ವಿಜಯಪುರ ಮಹಾನಗರ ಪಾಲಿಕೆಯಲ್ಲಿ ಮುಸ್ಲಿಮರು ಹೆಚ್ಚಿನ ಸಂಖ್ಯೆಯಲ್ಲಿ ಇರುವ ವಾರ್ಡ್‌ಗಳಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳನ್ನೇ ಮಾಡಿರಲಿಲ್ಲ’ ಎಂದು ಆರೋಪಿಸಿದರು.
‘ಇದೀಗ ಮಳೆ ನೀರಿನಿಂದ ನಗರದ ಅನೇಕ ವಾರ್ಡ್‌ಗಳಲ್ಲಿ ಜನರು ಸಮಸ್ಯೆಗೆ ಒಳಗಾಗಿದ್ದಾರೆ. ಶಾಸಕ ಯತ್ನಾಳ ಅವರು ಆ ಜನರ ಸಂಕಷ್ಟ ಆಲಿಸಿಲ್ಲ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.