ADVERTISEMENT

ವೈದ್ಯಕೀಯ ಕಾಲೇಜು ಸ್ಥಾಪನೆಗೆ ಆಗ್ರಹ | ಟೆಂಟ್‌ ತೆರವು; ಹೋರಾಟಗಾರರು ಜೈಲಿಗೆ

ಹೋರಾಟಗಾರರ ಬಿಡುಗಡೆಗೆ ಬಿಜೆಪಿ, ಕಾಂಗ್ರೆಸ್‌, ವಿವಿಧ ಸಂಘಟನೆಗಳ ಆಗ್ರಹ

​ಪ್ರಜಾವಾಣಿ ವಾರ್ತೆ
Published 3 ಜನವರಿ 2026, 5:51 IST
Last Updated 3 ಜನವರಿ 2026, 5:51 IST
ವಿಜಯಪುರದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಆಗ್ರಹಿಸಿ ಡಾ.ಬಿ.ಆರ್‌.ಅಂಬೇಡ್ಕರ್‌ ವೃತ್ತದಲ್ಲಿ ಹೋರಾಟಗಾರರು ಹಾಕಿಕೊಂಡಿದ್ದ ಟೆಂಟ್ ತೆರವುಗೊಳಿಸಿ ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ
–ಪ್ರಜಾವಾಣಿ ಚಿತ್ರ
ವಿಜಯಪುರದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಆಗ್ರಹಿಸಿ ಡಾ.ಬಿ.ಆರ್‌.ಅಂಬೇಡ್ಕರ್‌ ವೃತ್ತದಲ್ಲಿ ಹೋರಾಟಗಾರರು ಹಾಕಿಕೊಂಡಿದ್ದ ಟೆಂಟ್ ತೆರವುಗೊಳಿಸಿ ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ –ಪ್ರಜಾವಾಣಿ ಚಿತ್ರ   

ವಿಜಯಪುರ: ವಿಜಯಪುರದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಆಗ್ರಹಿಸಿ ಹಾಗೂ ಸರ್ಕಾರಿ ಮತ್ತು ಖಾಸಗಿ ಸಹಭಾಗಿತ್ವದ ವೈದ್ಯಕೀಯ ಕಾಲೇಜು ಸ್ಥಾಪನೆ ವಿರೋಧಿಸಿ ಇಲ್ಲಿ 107 ದಿನದಿಂದ ಅನಿರ್ದಿಷ್ಟಾವಧಿ ಧರಣಿ ನಡೆಸುತ್ತಿದ್ದ ಹೋರಾಟಗಾರ ಟೆಂಟ್‌ನ್ನು ಗುರುವಾರ ತಡರಾತ್ರಿ ಪೊಲೀಸರು ತೆರವುಗೊಳಿಸಿದ್ದಾರೆ.

ಇನ್ನೊಂದೆಡೆ ಸಚಿವ ಎಂ.ಬಿ.ಪಾಟೀಲರ ಮನೆಗೆ ಗುರುವಾರ ಮುತ್ತಿಗೆ ಹಾಕಲು ಯತ್ನಿಸಿದಾಗ ತಡೆಯೊಡ್ಡಿ ವಶಕ್ಕೆ ಪಡೆದಿದ್ದ 27 ಜನರ  ಪೈಕಿ, 21 ಜನರನ್ನು ಗುರುವಾರ ರಾತ್ರಿ ಬಿಡುಗಡೆ ಮಾಡಿದ್ದಾರೆ. 

ಪೊಲೀಸರಿಗೆ ಕಪಾಳಕ್ಕೆ ಹೊಡೆದ ಆರೋಪದ ಮೇಲೆ ಹುಣಶ್ಯಾಳ ಪಿ.ಬಿ.ಸಂಗನಬಸವ ಸ್ವಾಮೀಜಿ ಸೇರಿ ಹೋರಾಟಗಾರರಾದ ಅರವಿಂದ ಕುಲಕರ್ಣಿ, ಅನಿಲ ಹೊಸಮನಿ, ಭಗವಾನ್‌ ರೆಡ್ಡಿ, ಭೋಗೇಶ ಸೋಲಾಪುರ ಮತ್ತು ಸಿದ್ರಾಮ ಹಳ್ಳೂರ ಅವರ ವಿರುದ್ಧ ಕೊಲೆ ಯತ್ನ, ಜೀವ ಬೆದರಿಕೆ ಹಾಗೂ ಕರ್ತವ್ಯಕ್ಕೆ ಅಡ್ಡಿ ಪ್ರಕರಣಗಳನ್ನು ದಾಖಲಿಸಿ, ವಿಜಯಪುರ ದರ್ಗಾ ಜೈಲಿಗೆ ಕಳುಹಿಸಲಾಗಿದೆ.

ADVERTISEMENT

ಬಂಧಿತರ ಬಿಡುಗಡೆಗೆ ಹೋರಾಟಗಾರರು ನ್ಯಾಯಾಲಯದ ಮೊರೆ ಹೋಗಿದ್ದಾರೆ. ಜಿಲ್ಲೆಯಾದ್ಯಂತ ಹೋರಾಟ ತೀವ್ರಗೊಳಿಸಲು ನಿರ್ಧರಿಸಿದ್ದಾರೆ. ಹೋರಾಟಗಾರರ ವಿರುದ್ಧ ಪೊಲೀಸರು ಕೈಗೊಂಡ ಕ್ರಮಕ್ಕೆ ಬಿಜೆಪಿ, ಕಾಂಗ್ರೆಸ್‌, ಎಎಪಿ, ಸಿಪಿಎಂ, ಸಿಪಿಐ ಸೇರಿ ವಿವಿಧ ಪ್ರಗತಿಪರ ಸಂಘಟನೆಗಳ ಮುಖಂಡರು ಖಂಡಿಸಿದ್ದಾರೆ. 

ಸ್ವಾಮೀಜಿ ಬಂಧನಕ್ಕೆ ವಿರೋಧ: ‘ಹುಣಶ್ಯಾಳದ ಸಂಗನಬಸವ ಸ್ವಾಮೀಜಿ ಮತ್ತು ಹೋರಾಟಗಾರರನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದು ನ್ಯಾಯಸಮ್ಮತವಲ್ಲ’ ಎಂದು ಬಿಜೆಪಿ ಪ್ರತಿಕ್ರಿಯಿಸಿದೆ.

‘ಪ್ರತಿಭಟನೆ ಜನರ ಮೂಲಭೂತ ಹಕ್ಕು. ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಅವರು ಹಠ ಬಿಟ್ಟು ಪ್ರತಿಭಟನಕಾರರ ಜೊತೆ ಮಾತನಾಡಲಿ. ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪಿಸುವುದಾಗಿ ಪುನರುಚ್ಚಿಸಿ, ಪರಿಸ್ಥಿತಿ ಶಾಂತಗೊಳಿಸಲಿ’ ಎಂದು ವಿಧಾನ ಪರಿಷತ್‌ ಬಿಜೆಪಿ ಸದಸ್ಯ ಕೇಶವ ಪ್ರಸಾದ್‌ ಪ್ರತಿಕ್ರಿಯಿಸಿದ್ದಾರೆ.

ವಿಜಯಪುರದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಆಗ್ರಹಿಸಿ ಡಾ.ಬಿ.ಆರ್‌.ಅಂಬೇಡ್ಕರ್‌ ವೃತ್ತದಲ್ಲಿ ಹೋರಾಟಗಾರರು ಹಾಕಿಕೊಂಡಿದ್ದ ಟೆಂಟ್ ತೆರವುಗೊಳಿಸಿ ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ –ಪ್ರಜಾವಾಣಿ ಚಿತ್ರ
ಸ್ವಾಮೀಜಿಯವರು ಪಿಎಸ್‌ಐಗೆ ಕಪಾಳಕ್ಕೆ ಹೊಡೆದಿದ್ದು ಸರಿಯಲ್ಲ. ಸ್ವಾಮೀಜಿ ಅವರನ್ನು ಹೊರತುಪಡಿಸಿ ಬಂಧಿತ ನಿರಾಪರಾಧಿ ಹೋರಾಟಗಾರರನ್ನು ತಕ್ಷಣ ಬಿಡಬೇಕು. ದೂರು ಹಿಂಪಡೆಯಬೇಕು.
–ಪ್ರೊ. ರಾಜು ಆಲಗೂರ ಮಾಜಿ ಶಾಸಕ
ಜೈಲಿಗೆ ಕಳಿಸಿದ ಸಂಗನಬಸವ ಸ್ವಾಮೀಜಿ ಮತ್ತು ಹೋರಾಟಗಾರರನ್ನು ಕೂಡಲೇ ಬಿಡುಗಡೆ ಮಾಡಬೇಕು ಇಲ್ಲದಿದ್ದರೆ ವಿಜಯಪುರ ಬಂದ್‌ಗೆ ಕರೆ ನೀಡಲಾಗುವುದು.
–ಗುರುಲಿಂಗಪ್ಪ ಅಂಗಡಿ ಅಧ್ಯಕ್ಷ ಬಿಜೆಪಿ ವಿಜಯ‍ಪುರ ಜಿಲ್ಲಾ ಘಟಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.