ADVERTISEMENT

ಈದ್‌ ಉಲ್‌ ಫಿತ್ರ್ ಸರಳವಾಗಿ ಆಚರಿಸಿ: ಸೈಯ್ಯದ್ ಮೊಹಮ್ಮದ್ ತನ್ವಿರ ಹಾಶ್ಮಿ

​ಪ್ರಜಾವಾಣಿ ವಾರ್ತೆ
Published 12 ಮೇ 2021, 14:04 IST
Last Updated 12 ಮೇ 2021, 14:04 IST
ಸೈಯ್ಯದ್ ಮೊಹಮ್ಮದ್ ತನ್ವಿರ ಹಾಶ್ಮಿ
ಸೈಯ್ಯದ್ ಮೊಹಮ್ಮದ್ ತನ್ವಿರ ಹಾಶ್ಮಿ   

ಮೊದಲಿಗೆ ಎಲ್ಲ ಭಾರತೀಯರಿಗೆ ಈದ್‌ ಉಲ್‌ ಫಿತ್ರ್ ಹಬ್ಬದ ಮುಬಾರಕ ಬಾದ್.

ಕೊರೊನಾವೈರಸ್ ಇಡೀಜಗತ್ತನ್ನು ಆವರಿಸಿದೆ, ನಮ್ಮ ದೇಶದಲ್ಲಿ ಸಹ ತನ್ನ ಅಟ್ಟಹಾಸವನ್ನು ಮುಂದುವರಿಸಿದೆ. ಈಗಾಗಲೇ ಲಕ್ಷಾಂತರ ಭಾರತೀಯರ ಪ್ರಾಣವನ್ನು ತೆಗೆದುಕೊಂಡಿದೆ.

ಈ ಸಮಯ ಭಾರತೀಯರಿಗೆ ಅಗ್ನಿ ಪರೀಕ್ಷೆಯಾಗಿದೆ. ನಮ್ಮಲ್ಲಿ ಬಹಳಷ್ಟು ಜನರು ತಮ್ಮ ತಂದೆ, ತಾಯಿ, ಹೆಂಡತಿ, ಅಣ್ಣ, ತಮ್ಮ, ತಂಗಿ ಬಂಧುಬಳಗವನ್ನು ಕಳೆದುಕೊಂಡು ದುಃಖಸಾಗರದಲ್ಲಿ ಮುಳುಗಿದ್ದಾರೆ.ಇಂತಹ ಪರಿಸ್ಥಿತಿಯಲ್ಲಿ ನಾವು ಯಾವುದೇ ರೀತಿಯ ಸಂಭ್ರಮಾಚರಣೆ ಮಾಡುವುದು ಸಮಂಜಸವಲ್ಲ.

ADVERTISEMENT

ಕಬರ ಸ್ಥಾನದಲ್ಲಾಗಲಿ, ಸ್ಮಶಾನದಲ್ಲಾಗಲಿ ಅಂತ್ಯಕ್ರಿಯೆ ಮಾಡಲೂ ಸ್ಥಳ ಕೂಡ ಸಿಗಲಾರದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಈದ್‌ ಉಲ್‌ಫಿತ್ರ್ ಮುಸಲ್ಮಾನರಿಗೆ ದೊಡ್ಡ ಹಬ್ಬವೇನೋ ನಿಜ. ಆದರೆ, ನಾವು ಮುಸಲ್ಮಾನನಾಗಿರುವ ಜೊತೆಗೆ ಭಾರತೀಯರು. ನಮ್ಮ ದೇಶದ ಜನರು ಯಾವುದೇ ಧರ್ಮಕ್ಕೆ ಸೇರಿದವರಾದರೂ ಅವರು ನಮ್ಮವರು. ನಮ್ಮವರು ದುಃಖದಲ್ಲಿದ್ದಾಗ ನಾವು ಹೇಗೆ ಸಂತೋಷದಿಂದ ಇರಲು ಸಾಧ್ಯ. ಆದ್ದರಿಂದ ಹಬ್ಬವನ್ನು ಸರಳ ಮತ್ತು ಸಾಧಾರಣ ರೀತಿಯಲ್ಲಿಆಚರಿಸಿ.

ಹಬ್ಬದ ಮೇಲೆ ಮಾಡುವ ಖರ್ಚಿನ ಹಣವನ್ನು ಜಾತಿ, ಧರ್ಮ ನೋಡದೆ ಬಡರೋಗಿಗಳಿಗಾಗಿಖರ್ಚು ಮಾಡಿ. ಹಸಿದವನಿಗೆ ಊಟದ ವ್ಯವಸ್ಥೆ ಮಾಡಿ, ಕುಡಿಯುವ ನೀರಿನ ವ್ಯವಸ್ಥೆ ಮಾಡಿ, ಔಷಧ ವ್ಯವಸ್ಥೆ ಮಾಡಿ, ಬಡ ಕೂಲಿ ಕಾರ್ಮಿಕರಿಗೆ ಆರ್ಥಿಕ ಸಹಾಯ ಮಾಡಿ ತಮ್ಮ ಕೈಲಾದಷ್ಟು ಒಳ್ಳೆಯದನ್ನು ಮಾಡಿ.

ಈ ಸಮಯದಲ್ಲಿ ನಾನು ವಿಶೇಷವಾಗಿ ಬಿ.ಎಲ್. ಡಿ.ಇ ಸಂಸ್ಥೆಯ ಅಧ್ಯಕ್ಷರಾದ, ಶಾಸಕಎಂ.ಬಿ. ಪಾಟೀಲರುಮಾಡುತ್ತಿರುವ ಸೇವೆ ಪ್ರಶಂಸಾದಾಯಕವಾಗಿದೆ ಎಂದು ಹೇಳಲು ಬಯಸುತ್ತೇನೆ. ಅವರು ತಮ್ಮ ಆಸ್ಪತ್ರೆಯಲ್ಲಿ ಅತಿ ಕಡಿಮೆ ಖರ್ಚಿನಲ್ಲಿ ಕೋವಿಡ್ ರೋಗಿಗಳಿಗೆ ಚಿಕಿತ್ಸೆ ಕೊಟ್ಟು ದೇಶದ ರಾಜಕಾರಣಿಗಳಿಗೆ ಒಂದು ಉದಾಹರಣೆಯಾಗಿದ್ದಾರೆ.

ಪರಿಸ್ಥಿತಿಯನ್ನು ನಿಭಾಯಿಸಲು ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಸೇವೆ ಮಾಡುತ್ತಿರುವ ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಅನುಪಮ್‌ ಅಗರವಾಲ್‌, ಜಿಲ್ಲಾ ಪೊಲೀಸ್ ಇಲಾಖೆ, ಜಿಲ್ಲಾಡಳಿತದ ಎಲ್ಲ ಸಿಬ್ಬಂದಿ ವರ್ಗದವರು, ಜಿಲ್ಲಾ ಆರೋಗ್ಯ ಅಧಿಕಾರಿಗಳು, ಪೌರಕಾರ್ಮಿಕರು ಸಂಘ-ಸಂಸ್ಥೆಗಳ ಕಾರ್ಯ ನಿಜವಾಗಿಯೂ ಪ್ರಶಂಸಾದಾಯಕವಾಗಿವೆ.

ವಿಶೇಷವಾಗಿ ರಾಜ್ಯ ಸರ್ಕಾರದಿಂದ ಕೊರೊನಾವೈರಸ್ನಿಯಂತ್ರಿಸಲುಮಾಡಿರುವನಿಯಮಗಳನ್ನು ಚಾಚೂ ತಪ್ಪದೆ ಪಾಲನೆ ಮಾಡಬೇಕು.ಎಲ್ಲರೂ‌ ಆದಷ್ಟು ಬೇಗ ಲಸಿಕೆಗಳನ್ನು ತೆಗೆದುಕೊಳ್ಳಿ.ಈದ್ ನಮಾಜ್ ಅನ್ನು ನಫಿಲ್ ನಮಾಜ್ ರೂಪದಲ್ಲಿ ಮನೆಯಲ್ಲಿ ಮಾಡಬೇಕು.‌

ಬನ್ನಿ, ನಾವೆಲ್ಲರೂ ಕೂಡಿ ಪವಿತ್ರ ಹಬ್ಬದ ಈ ಗಳಿಗೆಯಲ್ಲಿ ಸೃಷ್ಟಿಕರ್ತನಲ್ಲಿ ದುವಾ ಮಾಡಿ ನಮ್ಮ ದೇಶದಿಂದ, ನಮ್ಮ ರಾಜ್ಯದಿಂದ, ಇಡೀ ಜಗತ್ತಿನಿಂದ ಕೊರೊನಾವೈರಸ್ ಕೊನೆಗಾಣಲಿ, ಎಲ್ಲೆಡೆ ಸುಖಃ, ಶಾಂತಿ, ನೆಮ್ಮದಿ, ಸಮೃದ್ಧಿ ಬರಲಿ ಎಂದು ಪ್ರಾರ್ಥಿಸೋಣ.

–ಸೈಯ್ಯದ್ ಮೊಹಮ್ಮದ್ ತನ್ವಿರ ಹಾಶ್ಮಿ ಅಧ್ಯಕ್ಷರು, ಜಮಾತೆ ಅಹಲೆ ಸುನ್ನತ್ ಕರ್ನಾಟಕ, ವಿಜಯಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.