ADVERTISEMENT

ವಿಜಯಪುರ | ಬೆಂಬಲ ಬೆಲೆ: ₹7,400 ಉದ್ದಿನಕಾಳು ಖರೀದಿಗೆ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2024, 15:43 IST
Last Updated 11 ಸೆಪ್ಟೆಂಬರ್ 2024, 15:43 IST
<div class="paragraphs"><p>ಉದ್ದಿನ ಕಾಳು(ಪ್ರಾತಿನಿಧಿಕ ಚಿತ್ರ)</p></div>

ಉದ್ದಿನ ಕಾಳು(ಪ್ರಾತಿನಿಧಿಕ ಚಿತ್ರ)

   

ವಿಜಯಪುರ: ಕನಿಷ್ಠ ಬೆಂಬಲ ಬೆಲೆ ಜಿಲ್ಲಾ ಕಾರ್ಯಪಡೆ ಸಮಿತಿ ಸಭೆಯಲ್ಲಿ ಎಫ್‍ಎಕ್ಯೂ ಗುಣಮಟ್ಟದ ಉದ್ದಿನಕಾಳು ಪ್ರತಿ ಕ್ವಿಂಟಲ್‍ಗೆ ₹7,400 ಬೆಂಬಲ ಬೆಲೆಯಡಿ ಖರೀದಿಸಲು ನಿರ್ಧರಿಸಲಾಗಿದೆ.

ವಿಜಯಪುರ, ಬಸವನಬಾಗೇವಾಡಿ, ಮುದ್ದೇಬಿಹಾಳ, ಇಂಡಿ, ಸಿಂದಗಿಯಲ್ಲಿ ಉದ್ದಿನ ಕಾಳು ಖರೀದಿ ಕೇಂದ್ರಗಳನ್ನು ತೆರೆಯಲಾಗಿದ್ದು ಕೃಷಿ ಪತ್ತಿನ ಸಹಕಾರಿ ಸಂಘಗಳು, ಟಿಎಪಿಸಿಎಂಎಸ್ ಸಂಸ್ಥೆಗಳ ಮೂಲಕ ಖರೀದಿ ಪ್ರಕ್ರಿಯೆ ಪ್ರಾರಂಭಿಸಲು ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಲಾಯಿತು.

ADVERTISEMENT

ಪ್ರತಿ ಎಕರೆಗೆ 2 ಕ್ವಿಂಟಲ್ ಹಾಗೂ ಪ್ರತಿ ರೈತರಿಂದ ಗರಿಷ್ಠ 6 ಕ್ವಿಂಟಲ್‌ ಉದ್ದಿನ ಕಾಳನ್ನು ಖರೀದಿಸಲು ತಿರ್ಮಾನಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಶಾಖಾ ವ್ಯವಸ್ಥಾಪಕರು ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ (ಮಾರ್ಕಫೆಡ್) ವಿಜಯಪುರ ಮೊ.9449864452 ಸಂಪರ್ಕಿಸಲು ತಿಳಿಸಲಾಗಿದೆ.

ಎಫ್.ಎ.ಕ್ಯೂ ಗುಣಮಟ್ಟದ ಉದ್ದಿನ ಕಾಳನ್ನು ಖರೀದಿಸಲು ಕೇಂದ್ರ ಸರ್ಕಾರವು ಪ್ರತಿ ಕ್ವಿಂಟಾಲ್‌ಗೆ ಬೆಂಬಲ ಬೆಲೆ ₹7,400 ನಿಗದಿಪಡಿಸಿದೆ. ಇದರ ಖರೀದಿಗೆ ನ್ಯಾಪೆಡ್ ಸಂಸ್ಥೆಯನ್ನು ಕೇಂದ್ರ ಸರ್ಕಾರದ ಏಜೆನ್ಸಿಯನ್ನಾಗಿ ಹಾಗೂ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳವನ್ನು ರಾಜ್ಯದಿಂದ ಖರೀದಿ ಏಜೆನ್ಸಿಯನ್ನಾಗಿ ಗುರುತಿಸಲಾಗಿದೆ. 

ಜಿಲ್ಲೆಯಲ್ಲಿ 387 ಹೆಕ್ಟೇರ್ ಪ್ರದೇಶದಲ್ಲಿ ಉದ್ದಿನಕಾಳು ಬಿತ್ತನೆ ಮಾಡಲಾಗಿದ್ದು, ಅಂದಾಜು 3,870 ಕ್ವಿಂಟಲ್ ಇಳುವರಿ ಅಂದಾಜಿಸಲಾಗಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಉದ್ದಿನಕಾಳು ಪ್ರತಿ ಕ್ವಿಂಟಲ್ ₹7,000 ರಿಂದ 10,920 ವರೆಗಿನ ದರದಲ್ಲಿ ಮಾರಾಟವಾಗುತ್ತಿದೆ.

ಬೆಂಬಲ ಬೆಲೆ ಯೋಜನೆಯ ಮಾರ್ಗಸೂಚಿಗಳನ್ವಯ ರೈತರಿಗೆ ನಿಗದಿತ ಅವಧಿಯೊಳಗೆ ಖರೀದಿ ಪ್ರಮಾಣದ ಮೌಲ್ಯವನ್ನು ಡಿಬಿಟಿ ಮೂಲಕ ಜಮೆ ಆಗುವಂತೆ ಪಾವತಿ ಮಾಡಬೇಕು. ಆವರ್ತನಿಧಿ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಖರೀದಿ ಕೇಂದ್ರಗಳಲ್ಲಿ ವರ್ತಕರು ತರುವ ಸೂರ್ಯಕಾಂತಿ ಖರೀದಿಸದಂತೆ ಹಾಗೂ ಯಾವುದೇ ರೀತಿಯ ದುರುಪಯೋಗವಾಗದಂತೆ ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಸಭೆಯಲ್ಲಿ ಸೂಚಿಸಲಾಗಿದೆ ಎಂದು  ಕೃಷಿ ಮಾರಾಟ ಇಲಾಖೆ ಸಹಾಯಕ ನಿರ್ದೇಶಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.