ವಿಜಯಪುರ: ಕನಿಷ್ಠ ವೇತನ ಜಾರಿ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಬುಧವಾರ ಕರ್ನಾಟಕ ರಾಜ್ಯ ಸಂಯುಕ್ತ ವಸತಿ ನಿಲಯ ಕಾರ್ಮಿಕರ ಸಂಘ ಹಾಗೂ ವಸತಿ ನಿಲಯ ಸಂಘಟನೆ, ಆಲಮಟ್ಟಿ ಗಾರ್ಡನ್ ಸಂಘಟನೆ, ಬಹುಹಳ್ಳಿ ಕುಡಿಯುವ ನೀರು ಸರಬರಾಜು ಸಂಘಟನೆ ಸಿಬ್ಬಂದಿ ಪ್ರತಿಭಟನೆ ನಡೆಸಿ, ಹೆಚ್ಚುವರಿ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರಗೆ ಮನವಿ ಸಲ್ಲಿಸಿದರು.
ಮಲ್ಲಿಕಾರ್ಜುನ ಎಚ್.ಟಿ. ಮಾತನಾಡಿ, ಹೊರಗುತ್ತಿಗೆ ಪದ್ಧತಿಯನ್ನು ರದ್ದುಗೊಳಿಸಿ, ಕಾರ್ಮಿಕರ ಸೇವೆಯನ್ನು ಕಾಯಂ ಮಾಡಿ. ಅಲ್ಲಿವರೆಗೂ ಇಲಾಖೆಗಳಿಂದಲೇ ನೇರವಾಗಿ ವೇತನ ಪಾವತಿಸಿ ಮತ್ತು ಸೇವಾಭದ್ರತೆ ಒದಗಿಸಬೇಕು ಎಂದು ಆಗ್ರಹಿಸಿದರು.
ಎಲ್ಲಾ ಜಿಲ್ಲೆಗಳಲ್ಲಿ ವಿವಿಧೋದ್ದೇಶ ಕಾರ್ಮಿಕರ ಸಹಕಾರ ಸಂಘ ರಚಿಸಲು ಕೂಡಲೇ ಕ್ರಮಕೈಗೊಳ್ಳಬೇಕು. ಕನಿಷ್ಠ ವೇತನ ಹೆಚ್ಚಳ ಕುರಿತ ರಾಜ್ಯ ಸರ್ಕಾರದ ಅಧಿಸೂಚನೆ ಕೂಡಲೆ ಜಾರಿಯಾಗಬೇಕು. ಸರ್ಕಾರಿ ಆದೇಶವಾಗಿ ಮಾರ್ಪಾಡಬೇಕು. ಜಿಲ್ಲಾ ಕೇಂದ್ರಗಳಲ್ಲಿ ಸುಸಜ್ಜಿತ ಇಎಸ್‍ಐ ಆಸ್ಪತ್ರೆ ಪ್ರಾರಂಭಿಸಬೇಕು. ಕಾರ್ಮಿಕರಿಗೆ ಹಾಗೂ ಅವರ ಕುಟುಂಬಗಳಿಗೆ ಇಎಸ್‍ಐ ಸೌಲಭ್ಯ ದೊರೆಯುವಂತೆ ಸಮರ್ಪಕ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಇಎಸ್‍ಐ ಸೌಲಭ್ಯದ ಮಿತಿಯನ್ನು ₹36 ಸಾವಿರಕ್ಕೆ ಹೆಚ್ಚಿಸಬೇಕು. ಎಲ್ಲಾ ಗುತ್ತಿಗೆ ಕಾರ್ಮಿಕರಿಗೆ ಕನಿಷ್ಠ ವೇತನ ₹ 36 ಸಾವಿರ ನಿಗದಿಪಡಿಸಬೇಕು. 2017ರ ನಂತರ ಆರಂಭಗೊಂಡ ಎಲ್ಲಾ ವಸತಿ ಶಾಲೆ,ಕಾಲೇಜುಗಳಿಗೆ 11 ಜನ ಅಡಿಗೆ ಸಿಬ್ಬಂದಿಯನ್ನು ನೇಮಕ ಮಾಡಬೇಕು ಎಂದು ಒತ್ತಾಯಿಸಿದರು.
ರಾಜ್ಯದ ಎಲ್ಲ ಸರ್ಕಾರಿ ಹಾಸ್ಟೇಲ್, ವಸತಿಶಾಲೆ, ಕಾಲೇಜುಗಳಲ್ಲಿ ಹಲವು ವರ್ಷಗಳಿಂದ ಸೇವೆಯಲ್ಲಿರುವ ಹೊರಗುತ್ತಿಗೆ ಕಾರ್ಮಿಕರ ಸೇವೆ ಕಾಯಂಗೊಳಿಸಬೇಕು. ಪರಿಷ್ಕೃತ ಕನಿಷ್ಠ ವೇತನ ಕೂಡಲೇ ಜಾರಿಗೊಳಿಸಬೇಕು ಹಾಗೂ ಎಲ್ಲಾ ಜಿಲ್ಲೆಗಳಲ್ಲಿ ವಿವಿದುದ್ದೇಶ ಕಾರ್ಮಿಕರ ಸಹಕಾರ ಸಂಘ ರಚಿಸಲು ಕೂಡಲೇ ಕ್ರಮಕೈಗೊಳ್ಳಬೇಕು ಎಂದರು.
ಬಹುಹಳ್ಳಿ ಕುಡಿಯುವ ನೀರು ಸರಬರಾಜು ಸಂಘಟನೆ ಅಧ್ಯಕ್ಷ ಮಲ್ಲಿಕಾರ್ಜುನ ಹಿರೇಮಠ, ವಸತಿ ನಿಲಯ ಸಂಘಟನೆಯ ಅಧ್ಯಕ್ಷರಾದ ಕಾಶೀಬಾಯಿ ಜನಗೊಂಡ, ಕಾರ್ಯದರ್ಶಿ ಮಹಾದೇವಿ ಧರ್ಮಶೆಟ್ಟಿ, ಆಲಮಟ್ಟಿ ಗಾರ್ಡನ್ ಸಂಘಟನೆ ದ್ಯಾಮಣ್ಣ ಬಿರಾದಾರ, ಯಲ್ಲಪ್ಪ ಚಲವಾದಿ, ಪರಶುರಾಮ ಒಳಕಲದಿನ್ನಿ, ಪರಮಣ್ಣ ಒಳಕಲದಿನ್ನಿ, ರೇವಣ್ಣ ಸಿದ್ದಪ್ಪ ವಾಲೀಕಾರ, ಅಡಿವೇಶ ಬಡಿಗೇರ, ಮಲ್ಲು ಬಿರಾದಾರ, ಶಾಂತಾಬಾಯಿ ಚಿಮ್ಮಲಗಿ, ರತ್ನಮ್ಮ ಮಾಗಿ, ಸವಿತಾ ಬಿಜಾಪುರ, ಗೌರಮ್ಮ ಬಾಗೇವಾಡಿ, ಬೇಬಿ ಹಿಪ್ಪರಗಿ, ಬಾಳಕ್ಕ ಹೂಗಾರ ಮುಂತಾದವರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.