ADVERTISEMENT

ಮಾತುಕತೆ ವಿಫಲ: ಮುಂದುವರಿದ ಧರಣಿ

ಸರ್ಕಾರದ ಗಮನ ಸೆಳೆಯಲು ಯತ್ನ: ಎಂ.ಬಿ.ಪಾಟೀಲ ಭರವಸೆ

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2025, 4:52 IST
Last Updated 30 ಸೆಪ್ಟೆಂಬರ್ 2025, 4:52 IST
ವಿಜಯಪುರದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪಿಸಬೇಕೆಂದು ಆಗ್ರಹಿಸಿ ನಡೆಯುತ್ತಿರುವ ಅನಿರ್ದಿಷ್ಟಾವಧಿ ಧರಣಿ ಸ್ಥಳಕ್ಕೆ ಸೋಮವಾರ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಭೇಟಿ ನೀಡಿ ಮಾತನಾಡಿದರು 
ವಿಜಯಪುರದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪಿಸಬೇಕೆಂದು ಆಗ್ರಹಿಸಿ ನಡೆಯುತ್ತಿರುವ ಅನಿರ್ದಿಷ್ಟಾವಧಿ ಧರಣಿ ಸ್ಥಳಕ್ಕೆ ಸೋಮವಾರ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಭೇಟಿ ನೀಡಿ ಮಾತನಾಡಿದರು    

ವಿಜಯಪುರ: ‘ಜಿಲ್ಲೆಯಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪಿಸುವುದಾಗಿ ಸರ್ಕಾರ ಅಧಿಕೃತವಾಗಿ ಘೋಷಣೆ ಮಾಡುವವರೆಗೂ ಹೋರಾಟ ನಿಲ್ಲಿಸುವುದಿಲ್ಲ, ಧರಣಿ ಕೈಬಿಡುವುದಿಲ್ಲ’ ಎಂದು ಧರಣಿನಿರತರು ಸಚಿವ ಎಂ.ಬಿ.ಪಾಟೀಲ ಅವರಿಗೆ ತಿಳಿಸಿದರು.

ನಗರದ ಡಾ.ಬಿ.ಆರ್‌.ಅಂಬೇಡ್ಕರ್‌ ವೃತ್ತದಲ್ಲಿ 12 ದಿನಗಳಿಂದ ನಡೆಯುತ್ತಿರುವ ಅನಿರ್ದಿಷ್ಟಾವಧಿ ಧರಣಿ ಸ್ಥಳಕ್ಕೆ ಸೋಮವಾರ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಭೇಟಿ ನೀಡಿ, ಮನವಿ ಸ್ವೀಕರಿಸಿದರು.

‘ವಿಜಯಪುರದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ನನ್ನ ವಿರೋಧವಿಲ್ಲ. ಇದಕ್ಕೆ  ಸಹಮತ ಇದೆ. ಪಿಪಿಪಿ ಮಾದರಿ ಕೈಬಿಟ್ಟು, ಜಿಲ್ಲೆಯ ಜನರ ಬೇಡಿಕೆಯಂತೆ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪಿಸಲು ಕ್ರಮಕೈಗೊಳ್ಳುವಂತೆ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ವೈದ್ಯಕೀಯ ಶಿಕ್ಷಣ ಸಚಿವರ ಗಮನಕ್ಕೆ ತರುತ್ತೇನೆ. ಹೋರಾಟ ಕೈಬಿಡಿ’ ಎಂದು ಸಚಿವ ಎಂ.ಬಿ.ಪಾಟೀಲ ಮನವಿ ಮಾಡಿದರು.

ADVERTISEMENT

ಸಚಿವರ ಮನವಿಯನ್ನು ಹೋರಾಟಗಾರರ ತಿರಸ್ಕರಿಸಿದರು 

ತಪ್ಪು ತಿಳಿವಳಿಕೆ ಬೇಡ: ‘ಖಾಸಗಿ ಸಹಭಾಗಿತ್ವದಲ್ಲಿ ವೈದ್ಯಕೀಯ ಕಾಲೇಜು ಸ್ಥಾಪಿಸಿದರೆ ಬಡ, ಮಧ್ಯಮ ವರ್ಗದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅನುಕೂಲವಾಗುವುದಿಲ್ಲ ಎಂಬುದು ತಪ್ಪು ತಿಳಿವಳಿಕೆ. ಖಾಸಗಿಯಾಗಿರಲಿ ಅಥವಾ ಸರ್ಕಾರಿ ವೈದ್ಯಕೀಯ ಕಾಲೇಜು ಆಗಿಲಿ, ಎಲ್ಲರೂ ನೀಟ್‌ ಬರೆದು ಆಯ್ಕೆ ಆಗಬೇಕಾಗುತ್ತದೆ. ಸರ್ಕಾರ ನಿಗದಿ ಪಡಿಸಿದ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಇದರಲ್ಲಿ ಯಾವುದೇ ರಿಯಾಯಿತಿ ಇರುವುದಿಲ್ಲ’ ಎಂದು ಸಚಿವರು ಹೇಳಿದರು.

‘ನನ್ನದೇ ಸ್ವಂತ ಡೀಮ್ಡ್‌ ವೈದ್ಯಕೀಯ ಕಾಲೇಜು ಇದ್ದರೂ, ಅದರಲ್ಲಿ ನನ್ನ ಮಕ್ಕಳಿಗೆ ಒಂದು ಸೀಟು ಕೊಡಲು ಸಾಧ್ಯವಾಗುವುದಿಲ್ಲ ಎಂಬುದನ್ನು ಹೋರಾಟಗಾರರು ತಿಳಿದುಕೊಳ್ಳಬೇಕು’ ಎಂದರು.

ಶಾಸಕ ವಿಠಲ ಕಟಕಧೋಂಡ, ಕೌಶಲಾಭಿವೃದ್ಧಿ ನಿಗಮದ ಅಧ್ಯಕ್ಷೆ ಕಾಂತಾ ನಾಯಕ, ಕಾಂಗ್ರೆಸ್‌ ಮುಖಂಡ ಅಬ್ದುಲ್‌ ಹಮೀದ್‌ ಮುಶ್ರೀಫ್‌, ಎಸ್‌.ಎಂ.ಪಾಟೀಲ ಗಣಿಹಾರ, ಜಿಲ್ಲಾಧಿಕಾರಿ ಡಾ.ಆನಂದ್‌ ಕೆ., ಜಿ.ಪಂ. ಸಿಇಒ ರಿಷಿ ಆನಂದ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಇದ್ದರು.

ಹೋರಾಟ ಸಮಿತಿ ಸದಸ್ಯರಾದ ಅರವಿಂದ ಕುಲಕರ್ಣಿ, ಭಗವಾನ್ ರೆಡ್ಡಿ, ಅಪ್ಪಸಾಹೇಬ ಯರನಾಳ, ಅನಿಲ ಹೊಸಮನಿ, ಲಲಿತಾ ಬಿಜ್ಜರಗಿ, ಕೆ.ಎಫ್. ಅಂಕಲಗಿ, ವಿದ್ಯಾವತಿ ಅಂಕಲಗಿ, ಗೀತಾ ಎಚ್., ಮಹದೇವಿ ಧರ್ಮಶೆಟ್ಟಿ, ಕಾವೇರಿ ರಜಪೂತ, ಗೀತಾ ಕಟ್ಟಿ, ಗೀತಾ ಪಾಟೀಲ ಇದ್ದರು. 

‘ಕುಮ್ಮಕ್ಕಿನಿಂದ ಕೆಲವರ ಹೋರಾಟ’

‘ಇನ್ನೂ 10 ವೈದ್ಯಕೀಯ ಕಾಲೇಜು ಸ್ಥಾಪಿಸುವ ಶಕ್ತಿ ನನಗಿದೆ. ಪಿಪಿಪಿಗೂ ನನಗೂ ಯಾವುದೇ ಸಂಬಂಧವಿಲ್ಲ. ಹೋರಾಟದಲ್ಲಿ ತೊಡಗಿರುವವರಲ್ಲಿ ಶೇ 90ರಷ್ಟು ಜನ ನೈಜ ಹೋರಾಟಗಾರರು. ಇನ್ನು ಕೆಲವರು ಕುಮ್ಮಕ್ಕಿನಿಂದ ಹೋರಾಟದಲ್ಲಿ ತೊಡಗಿದ್ದಾರೆ’ ಎಂದು ಸಚಿವ ಎಂ.ಬಿ.ಪಾಟೀಲ ಆರೋಪಿಸಿದರು. ‘ವಿಜಯಪುರದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಪ್ರಾರಂಭಿಸಲು ಸುಸಜ್ಜಿತ ಜಾಗ ಮೂಲಸೌಕರ್ಯಗಳಿವೆ. ಹಾಗಂತ ಕೇವಲ ₹100 ಕೋಟಿಯಲ್ಲಿ ಕಾಲೇಜು ಸ್ಥಾಪಿಸಲು ಆಗುವುದಿಲ್ಲ ಕನಿಷ್ಠ ₹500 ಕೋಟಿ ಬೇಕಾಗುತ್ತದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.