ADVERTISEMENT

ಸಭೆಗಳಿಗೆ ಸೀಮಿತವಾದ ಸಚಿವೆ: ಅಶೋಕ ಮನಗೂಳಿ ಆರೋಪ

​ಪ್ರಜಾವಾಣಿ ವಾರ್ತೆ
Published 6 ಮೇ 2021, 15:12 IST
Last Updated 6 ಮೇ 2021, 15:12 IST
ಅಶೋಕ ಮನಗೂಳಿ
ಅಶೋಕ ಮನಗೂಳಿ   

ವಿಜಯಪುರ: ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಅವರು ಕೇವಲ ಅಧಿಕಾರಿಗಳೊಂದಿಗೆ ಸಭೆ, ಸಮಾರಂಭಗಳಿಗೆ ಸೀಮಿತವಾಗಿದ್ದಾರೆ. ಜಿಲ್ಲಾ, ತಾಲ್ಲೂಕು ಆಸ್ಪತ್ರೆಗಳಿಗೆ ಭೇಟಿ ನೀಡಿ ವಸ್ತು ಸ್ಥಿತಿ ಬಗ್ಗೆ ಪರಿಶೀಲನೆ ನಡೆಸುತ್ತಿಲ್ಲ ಎಂದು ಸಿಂದಗಿ ಕಾಂಗ್ರೆಸ್‌ ಮುಖಂಡ ಅಶೋಕ ಮನಗೂಳಿ ಆರೋಪಿಸಿದ್ದಾರೆ.

ಸಚಿವರು ಸಿಂದಗಿ ತಹಶೀಲ್ದಾರ್‌ ಕಚೇರಿಗೆ ಭೇಟಿ ನೀಡಿ ಅಧಿಕಾರಿಗಳ ಸಭೆ ನಡೆಸಿದರು. ಆದರೆ, ತಾಲ್ಲೂಕು ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಲಿಲ್ಲ. ಅಲ್ಲಿಯ ಕುಂದು ಕೊರತೆಗಳ ಬಗ್ಗೆ ತಿಳಿಯಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಜಿಲ್ಲೆಯಲ್ಲಿ ವಿಜಯಪುರ ಹೊರತು ಪಡಿಸಿ ಹೆಚ್ಚು ಕೋವಿಡ್‌ ಪೀಡಿತರು ದಾಖಲಾಗಿರುವ ತಾಲ್ಲೂಕು ಆಸ್ಪತ್ರೆಯಲ್ಲಿ ಕೋವಿಡ್‌ ರೋಗಿಗಳು ಬೆಡ್‌, ಆಮ್ಲಜನಕ, ರೆಮ್‌ಡಿಸಿವಿರ್‌ ಇಂಜೆಕ್ಷನ್‌ ಲಭಿಸಿದೇ ಪರಿತಪಿಸುತ್ತಿದ್ದರೂ ಗಮನ ಹರಿಸಿಲ್ಲ. ಆಸ್ಪತ್ರೆಯಲ್ಲಿ ವೈದ್ಯ ಸಿಬ್ಬಂದಿ ಕೊರತೆ ಇದ್ದರೂ ಭರ್ತಿ ಮಾಡಲು ಆದ್ಯತೆ ನೀಡುತ್ತಿಲ್ಲ ಎಂದು ದೂರಿದರು.

ADVERTISEMENT

ಸಿಂದಗಿ ತಾಲ್ಲೂಕು ಆಸ್ಪತ್ರೆ ಆವರಣದಲ್ಲೇ ಆಮ್ಲಜನಕ ಉತ್ಪಾದನಾ ಘಟಕ ಆರಂಭಿಸಬೇಕು, ಕೋವಿಡ್ ರೋಗಿಗಳಿಗೆ ಅಗತ್ಯ ಹಾಸಿಗೆ, ಆಮ್ಲಜನಕ, ಔಷಧ ದೊರೆಯುವಂತೆ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಜಿಲ್ಲೆಯಲ್ಲಿ ಕೋವಿಡ್‌ ಆಸ್ಪತ್ರೆಗಳ ಹೊರತಾಗಿ ಅನೇಕ ನರ್ಸಿಂಗ್‌ ಹೋಂಗಳಲ್ಲಿ, ಖಾಸಗಿ ಕ್ಲಿನಿಕ್‌ಗಳಲ್ಲಿ ವೈದ್ಯರು ಕೋವಿಡ್‌ ಪೀಡಿತರಿಗೆ ವೈದ್ಯಕೀಯ ಸಲಹೆ, ಮಾರ್ಗದರ್ಶನ, ಅಗತ್ಯ ಚಿಕಿತ್ಸೆಯನ್ನು ನೀಡಲು ಸಿದ್ಧರಿದ್ದಾರೆ. ಅವರಿಗೆ ಅವಕಾಶ ಕಲ್ಪಿಸಲು ಸರ್ಕಾರ ಆದ್ಯತೆ ನೀಡಬೇಕು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.