ADVERTISEMENT

ಮಣ್ಣಿಗೆ ಹೋಗುವ ಮುನ್ನ 10 ಸಾವಿರ ಉದ್ಯೋಗ: ಮಾಜಿ ಶಾಸಕ ನಡಹಳ್ಳಿ ಭಾವುಕ ಮಾತು

​ಪ್ರಜಾವಾಣಿ ವಾರ್ತೆ
Published 23 ಜುಲೈ 2025, 3:59 IST
Last Updated 23 ಜುಲೈ 2025, 3:59 IST
ಮುದ್ದೇಬಿಹಾಳ ಪಟ್ಟಣದ ಮಾರುತಿ ನಗರದಲ್ಲಿರುವ ಫಾರ್ಮಹೌಸ್‌ನಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ ಎ.ಎಸ್.ಪಾಟೀಲ ನಡಹಳ್ಳಿ ಕಾರ್ಯಕರ್ತರು,ಅಭಿಮಾನಿಗಳನ್ನುದ್ದೇಶಿಸಿ ಮಾತನಾಡಿದರು
ಮುದ್ದೇಬಿಹಾಳ ಪಟ್ಟಣದ ಮಾರುತಿ ನಗರದಲ್ಲಿರುವ ಫಾರ್ಮಹೌಸ್‌ನಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ ಎ.ಎಸ್.ಪಾಟೀಲ ನಡಹಳ್ಳಿ ಕಾರ್ಯಕರ್ತರು,ಅಭಿಮಾನಿಗಳನ್ನುದ್ದೇಶಿಸಿ ಮಾತನಾಡಿದರು   

ಮುದ್ದೇಬಿಹಾಳ: ‘ನಾನು ಮತಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದರಿಂದಲೇ ಜನ ಬೆಂಬಲಿಸಲಿಲ್ಲವೋ ಏನೋ? ಆದರೆ ರೈತರ ಮಕ್ಕಳು ಕಷ್ಟ ಅನುಭವಿಸಬಾರದು ಎಂಬ ಉದ್ದೇಶದಿಂದ ನಾನು ಮಣ್ಣಿಗೆ ಹೋಗುವ ಮುನ್ನ 10 ಸಾವಿರ ಉದ್ಯೋಗ ಕೊಟ್ಟು ಹೋಗುತ್ತೇನೆ’ ಎಂದು ಬಿಜೆಪಿ ರೈತ ಮೋರ್ಚಾ ರಾಜ್ಯ ಘಟಕದ ಅಧ್ಯಕ್ಷ ಎ.ಎಸ್.ಪಾಟೀಲ ನಡಹಳ್ಳಿ ಭಾವುಕರಾಗಿ ಹೇಳಿದರು.

ಪಟ್ಟಣದ ಮಾರುತಿ ನಗರದಲ್ಲಿರುವ ತಮ್ಮ ಫಾರ್ಮಹೌಸ್‌ನಲ್ಲಿ ಮಂಗಳವಾರ ಅಭಿಮಾನಿಗಳು,ಕಾರ್ಯಕರ್ತರು ಹಮ್ಮಿಕೊಂಡಿದ್ದ ತಮ್ಮ 56ನೇ ಜನ್ಮದಿನದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ನಾವೆಲ್ಲ ಜಾತಿ ವಿಷಯ ಬಂದಾಗ ಒಗ್ಗಟ್ಟು ಆಗುತ್ತೇವೆ. ಆದರೆ ಜನರ ಬದುಕು ಕಟ್ಟುವ ನಾಯಕತ್ವವನ್ನು ಆಯ್ಕೆ ಮಾಡಿಕೊಳ್ಳುವುದರಲ್ಲಿ ಎಡವಿದ್ದೇವೆ. ಆಧುನಿಕ ಬದುಕು ಕಟ್ಟಿಕೊಡುವ, ಸೌಲಭ್ಯಗಳನ್ನು ಜನರಿಗೆ ತಲುಪಿಸುವ ನಾಯಕತ್ವ ಬೇಕು. ತೊಗರಿ ಬೆಳೆ ನಷ್ಟವಾದರೂ ಈ ಸರ್ಕಾರದಿಂದ ಒಂದು ರುಪಾಯಿ ಪರಿಹಾರ ಬಂದಿಲ್ಲ, ಬರುವುದೂ ಇಲ್ಲ. ಈ ಸರ್ಕಾರ, ಈಗ ನೀವು ಆಯ್ಕೆ ಮಾಡಿಕೊಂಡ ಜನಪ್ರತಿನಿಧಿ ಹಾಗೆ ಇದ್ದಾರೆ. ರೈತರು ಬೆಳೆ ಇನ್ಸೂರೆನ್ಸ್ ಬಂದಿಲ್ಲ ಎಂದು ಕೇಳುತ್ತಿದ್ದಾರೆ’ ಎಂದು ತಿಳಿಸಿದರು.

ADVERTISEMENT

‘ನೀರಾವರಿ ಯೋಜನೆಗಳು ಅಲ್ಲಿಗೆ ನಿಂತಿವೆ. ನಾಗರಬೆಟ್ಟ ಏತ ನೀರಾವರಿ ಯೋಜನೆ ಏನಾಗಿದೆ. ಬೂದಿಹಾಳ ಪೀರಾಪೂರ ಯೋಜನೆಗಾಗಿ ರೈತರು ಹೋರಾಟ ನಡೆಸುವಾಗ ನಾನು ಹೋರಾಟಕ್ಕೆ ಬೆಂಬಲಿಸುವುದಾಗಿ ಹೇಳುತ್ತಲೇ ಉಸ್ತುವಾರಿ ಸಚಿವರು ಓಡಿ ಬಂದು ಭರವಸೆ ಕೊಟ್ಟು ಹೋದರು. ನೀರಾವರಿಗಾಗಿ ಹೋರಾಟ ಅನಿವಾರ್ಯ ಎಂಬಂತಾಗಿದೆ’ ಎಂದರು.

‘ಮತಕ್ಷೇತ್ರದಲ್ಲಿ ಕುಡಿವ ನೀರಿನ ಯೋಜನೆ ಸಲುವಾಗಿ ಸಿಸಿ ರಸ್ತೆ ಹಾಳುಮಾಡುತ್ತಿದ್ದಾರೆ. ಆಯ್ಕೆಯಾದವರು ನಿಮ್ಮೂರಿಗೆ ಬಂದು ಧನ್ಯವಾದ ಕೂಡಾ ಹೇಳಲಿಲ್ಲ. ಮೊದಲು ಅವರಿಗೆ ಹಳ್ಳಿಗಳ ಜನಕ್ಕೆ ನೀರು ಕೊಡಲು ತಿಳಿಸಿ. ನನ್ನ ದುಡಿಮೆಯಲ್ಲಿ ಅರ್ಧ ರಾಜಕಾರಣಕ್ಕೆ, ದಾಸೋಹಕ್ಕೆ ವ್ಯಯ ಮಾಡಿದ್ದೇನೆ. ನನಗೆ ಮಂತ್ರಿಯಾಗಿ ಮೆರೆಯಬೇಕು ಎಂಬ ಭಾವನೆ ಇಲ್ಲ. ರೈತರ ಮಕ್ಕಳು ತಮ್ಮ ತಂದೆಯವರು ಅನುಭವಿಸಿದ ಕಷ್ಟ ಅನುಭವಿಸಬಾರದು ಎಂಬ ಕಾರಣದಿಂದ ರಾಜಕಾರಣಕ್ಕೆ ಬಂದಿದ್ದೇನೆ. ಇದು ಕೇವಲ ಭಾಷಣಕ್ಕಾಗಿ ಮಾತಲ್ಲ ಸಂಕಲ್ಪದಿಂದ ಮಾತನಾಡುತ್ತಿದ್ದೇನೆ’ ಎಂದು ಹೇಳಿದರು.

ಬಿಜೆಪಿ ಮುಖಂಡರಾದ ರಮೇಶ ಬಿದನೂರ, ರವಿಕಾಂತ ಬಗಲಿ,ಪ್ರಭುಗೌಡ ಬಿರಾದಾರ, ಪ್ರಭು ಕಡಿ, ಬಿ.ಪಿ.ಕುಲಕರ್ಣಿ, ಮಲಕೇಂದ್ರಗೌಡ ಪಾಟೀಲ, ಗಂಗಾಧರ ನಾಡಗೌಡ,ರವೀಂದ್ರ ಲೋಣಿ,ಎಂ.ಬಿ.ಅಂಗಡಿ,ಎಂ.ಎಸ್.ಪಾಟೀಲ,ಸುಮಂಗಲಾ ಕೋಟಿ, ಕೆ.ವೈ.ಬಿರಾದಾರ,ಮಹದೇವಯ್ಯ ಶಾಸ್ತ್ರೀಗಳು, ಪುರಸಭೆ ಸದಸ್ಯೆ ಸಹನಾ ಬಡಿಗೇರ ಮಾತನಾಡಿದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಗುರುಲಿಂಗಪ್ಪ ಅಂಗಡಿ ಸೇರಿದಂತೆ ಪಕ್ಷದ ಮುಖಂಡರು ಇದ್ದರು. ನಡಹಳ್ಳಿಯವರ ಜನ್ಮದಿನದ ಅಂಗವಾಗಿ ಅವರ ಅಭಿಮಾನಿಗಳು, ಕಾರ್ಯಕರ್ತರು ರಕ್ತದಾನ ಶಿಬಿರ, ಆರೋಗ್ಯತಪಾಸಣಾ ಶಿಬಿರ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ನಡೆಸಿದರು.

‘ಮುದ್ದೇಬಿಹಾಳ ಮತಕ್ಷೇತ್ರಕ್ಕೆ ಈಗ ಆಯ್ಕೆಯಾದವರು ಒಂದೇ ಒಂದು ಪಂಚಾಯಿತಿಗೆ 12 ತಾಸು ಕರೆಂಟ್ ಕೊಡಲು ಆಗುತ್ತದೆಯೇ ? ಎಂಬುದನ್ನು ತೋರಿಸಿಕೊಡಲಿ ಎಂದು ಸವಾಲು ಹಾಕಿದ ಮಾಜಿ ಶಾಸಕ ನಡಹಳ್ಳಿ, ನಾನು ಇಡೀ ತಾಲ್ಲೂಕಿಗೆ 12 ತಾಸು ವಿದ್ಯುತ್ ಕೊಡುತ್ತೇನೆ. ನನ್ನ ಅವಧಿಯಲ್ಲಿ ಹತ್ತು ವಿದ್ಯುತ್ ಸ್ಟೇಷನ್ ತಂದಿದ್ದೇವೆ. ಆಗ ಏಳು ತಾಸು ಕೊಡುತ್ತಿದ್ದರು. ಈಗಲೂ ಅಷ್ಟೇ ವಿದ್ಯುತ್ ಕೊಡುತ್ತಿದ್ದಾರೆ. ಇವರಿಂದ ಎರಡೂವರೆ ವರ್ಷದಲ್ಲಿ ಹೆಚ್ಚಿಗೆ ವಿದ್ಯುತ್ ಕೊಡುವುದಕ್ಕೆ ಆಗಿಲ್ಲ’ ಎಂದು ಶಾಸಕ ನಾಡಗೌಡರ ಹೆಸರು ಹೇಳದೇ ಟೀಕಿಸಿದರು.

ಫೋಟೋ:22-ಎಂ.ಬಿ.ಎಲ್‌01ಎ ಮುದ್ದೇಬಿಹಾಳದ ಆರೋಗ್ಯ ತಪಾಸಣಾ ಶಿಬಿರ ಹಾಗೂ ರಕ್ತದಾನ ಶಿಬಿರ ನಡೆಸಿಕೊಟ್ಟ ವೈದ್ಯರನ್ನು ಮಾಜಿ ಶಾಸಕ ನಡಹಳ್ಳಿ ಸನ್ಮಾನಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.