ADVERTISEMENT

ವಿಜಯಪುರ: ನೀರೆತ್ತುವ ಯಂತ್ರ, ಟ್ರಾನ್ಸ್‌ಫಾರ್ಮರ್‌ ದುರಸ್ತಿಗೆ ಆಗ್ರಹ

ಮುಖ್ಯಮಂತ್ರಿ ಬಿಎಸ್‌ವೈಗೆ ಸಂಸದ ರಮೇಶ ಜಿಗಜಿಣಗಿ ಪತ್ರ

​ಪ್ರಜಾವಾಣಿ ವಾರ್ತೆ
Published 12 ಮೇ 2020, 11:23 IST
Last Updated 12 ಮೇ 2020, 11:23 IST
ರಮೇಶ ಜಿಗಜಿಣಗಿ
ರಮೇಶ ಜಿಗಜಿಣಗಿ   

ವಿಜಯಪುರ: ಮುಳವಾಡ ಏತ ನೀರಾವರಿ ಯೋಜನೆಯ ಜಾಕ್‌ವೆಲ್‌ಗಳಲ್ಲಿ ಸುಟ್ಟು ಹೋಗಿರುವ ನೀರೆತ್ತುವ ಯಂತ್ರ ಮತ್ತು ವಿದ್ಯುತ್‌ ಟ್ರಾನ್ಸ್‌ಫಾರ್ಮರ್‌ ದುರಸ್ತಿ ಮಾಡಿಸುವಂತೆ ಸಂಸದ ರಮೇಶ ಜಿಗಜಿಣಗಿ ಅವರು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಈ ಸಂಬಂಧ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಪತ್ರ ಬರೆದಿರುವ ಅವರು, ತಕ್ಷಣ ಕ್ರಮಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

ಬಸವನ ಬಾಗೇವಾಡಿ ತಾಲ್ಲೂಕಿನ ಬಳೂತಿ ಜಾಕ್‌ವೆಲ್‍ನಲ್ಲಿ ಎರಡು ವಿದ್ಯುತ್ ಟ್ರಾನ್ಸ್‌ಫಾರ್ಮರ್‌ಗಳು 2018ರ ಡಿಸೆಂಬರ್‌ನಲ್ಲೇ ಸಂಪೂರ್ಣ ಸುಟ್ಟು ಹೋಗಿವೆ. ಸದ್ಯ ಕೇವಲ ಒಂದೇ ಟ್ರಾನ್ಸ್‌ಫಾರ್ಮರ್‌ ಮೇಲೆ ನೀರೆತ್ತುತ್ತಿದ್ದು ಇದರಿಂದ ಪೂರ್ಣ ಸಾಮರ್ಥ್ಯದಲ್ಲಿ ನೀರೆತ್ತಲು ಸಾಧ್ಯವಾಗುತ್ತಿಲ್ಲ ಎಂದು ಅವರು ಗಮನಕ್ಕೆ ತಂದಿದ್ದಾರೆ.

ADVERTISEMENT

ಇದೇ ಯೋಜನೆಯ ಎರಡನೇಯ ಹಂತದಲ್ಲಿ ನೀರೆತ್ತುವ ಹಣಮಾಪುರ ಜಾಕವೆಲ್‍ನಲ್ಲಿ ಒಂದು ಟ್ರಾನ್ಸ್‌ಫಾರ್ಮರ್‌ 2019ರ ಜೂನ್‌ನಲ್ಲೆ ಸುಟ್ಟು ಹೋಗಿದೆ. ಸದ್ಯ ಕೇವಲ ಒಂದೇ ವಿದ್ಯುತ್ ಟ್ರಾನ್ಸ್‌ಫಾರ್ಮರ್‌ನಿಂದ ನೀರೆತ್ತುತ್ತಿದ್ದು, ಪೂರ್ಣ ಸಾಮರ್ಥ್ಯದಲ್ಲಿ ನೀರೆತ್ತಲು ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದ್ದಾರೆ.

ಮುಳವಾಡ ಏತ ನೀರಾವರಿ ಯೋಜನೆಯ ಪ್ರಥಮ ಹಂತದ ನೀರೆತ್ತುವ ಬಳೂತಿ, ದ್ವಿತೀಯ ಹಂತದ ಹಣಮಾಪುರ ಮತ್ತು ಮೂರನೇ ಹಂತದ ಮಸೂತಿ ಈ ಮೂರು ಜಾಕ್‌ವೆಲ್‍ಗಳು ಒಂದಕ್ಕೊಂದು ಪೂರಕವಾಗಿರುವ ಜಾಕ್‌ವೆಲ್‍ಗಳಾಗಿದ್ದು, ಒಂದೆಡೆ ನೀರೆತ್ತಿ ಸರಬರಾಜು ಮಾಡಿದಾಗ ಮಾತ್ರ ಮುಂದಿನವುಗಳು ಕಾರ್ಯನಿರ್ವಹಿಸುತ್ತವೆ. ಇದರಲ್ಲಿ ಯಾವುದೇ ಒಂದು ಜಾಕ್‌ವೆಲ್ ಸ್ಥಗಿತಗೊಂಡರೂ ಉಳಿದ ಜಾಕ್‌ವೆಲ್‍ಗಳು ಕಾರ್ಯ ನಿರ್ವಹಿಸುವುದಿಲ್ಲ ಎಂದು ತಿಳಿಸಿದ್ದಾರೆ.

ಸದ್ಯ ಬಳೂತಿ ಮತ್ತು ಹಣಮಾಪುರಗಳಲ್ಲಿ ಎರಡು ಟ್ರಾನ್ಸ್‌ಫಾರ್ಮರ್‌ಗಳ ಬದಲಾಗಿ ಒಂದೇ ಟ್ರಾನ್ಸ್‌ಫಾರ್ಮರ್‌ನಿಂದ ನೀರೆತ್ತುವ ಕಾರ್ಯ ನಡೆಯುತ್ತಿದ್ದು, ಇದರಿಂದ ಒತ್ತಡ ಉಂಟಾಗಿ ಏನಾದರೂ ಅನಾಹುತ ಸಂಭವಿಸಿದರೇ ಕನಿಷ್ಠ 6ರಿಂದ 8 ತಿಂಗಳ ಕಾಲ ಇಡೀ ಯೋಜನೆ ಸ್ಥಗಿತಗೊಳ್ಳುವ ಸಾಧ್ಯತೆ ಇದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

ಒಂದು ವೇಳೆ ಅನಾಹುತ ಸಂಭವಿಸಿದರೆ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ನಿರ್ಮಿಸಿರುವ ಜಾಕ್‌ವೆಲ್‍ಗಳು, ಕಾಲುವೆಗಳು, ಅಕ್ವಾಡೆಕ್ಟ್‌ಗಳು ನಿರುಪಯುಕ್ತವಾಗುತ್ತವೆ ಮತ್ತು ಇದನ್ನು ನಂಬಿಕೊಂಡಿರುವ ಜಿಲ್ಲೆಯ ರೈತರಿಗೆ ಕೋಟ್ಯಂತರ ರೂಪಾಯಿ ನಷ್ಟವಾಗುತ್ತದೆ. ಅಲ್ಲದೇ, ಕುಡಿಯುವ ನೀರಿನ ಯೋಜನೆಗಳು ವಿಫಲವಾಗುತ್ತವೆ ಎಂದು ಅವರು ಗಮನಕ್ಕೆ ತಂದಿದ್ದಾರೆ.

ನುರಿತ ಎಂಜಿನಿಯರ್‌ಗಳ ಕೊರತೆ

ನೀರಾವರಿ ಇಲಾಖೆಯಲ್ಲಿ ಈ ಏತನೀರಾವರಿ ಯೋಜನೆಗಳನ್ನು ನೋಡಿಕೊಳ್ಳಲು ನುರಿತ ಇಲೆಕ್ಟ್ರೀಕಲ್ ಮತ್ತು ಮೆಕ್ಯಾನಿಕಲ್ ಎಂಜನಿಯರ್‌ಗಳು ಇಲ್ಲ. ಆದ್ದರಿಂದ ಏತನೀರಾವರಿ ಯೋಜನೆಗಳಲ್ಲಿನ ಇಲೆಕ್ಟ್ರೀಕಲ್ ಮತ್ತು ಮೆಕ್ಯಾನಿಕಲ್ ಕಾಮಗಾರಿಗಳನ್ನು ಮತ್ತು ನಿರ್ವಹಣೆಯನ್ನು ನುರಿತ ಇಲೆಕ್ಟ್ರೀಕಲ್ ಮತ್ತು ಮೆಕ್ಯಾನಿಕಲ್ ಎಂಜಿನಿಯರ್‌ಗಳಿಂದ ಮೇಲ್ವಿಚಾರಣೆ ಮತ್ತು ಅವುಗಳ ನಿರ್ವಹಣೆ ಮಾಡುವುದು ಅತೀ ಅವಶ್ಯಕವಾಗಿದೆ ಎಂದು ಸಂಸದ ಜಿಗಜಿಣಗಿ ಹೇಳಿದ್ದಾರೆ.

ಇಂಧನ ಇಲಾಖೆಯ ಅಧೀನದಲ್ಲಿ ಬರುವ ಕರ್ನಾಟಕ ವಿದ್ಯತ್ ನಿಗಮ ಮತ್ತು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಯನಿರ್ವಾಹಕ ಎಂಜಿನಿಯರ್‌, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಮತ್ತು ಸಹಾಯಕ ಎಂಜಿನಿಯರ್‌ಗಳನ್ನು ಎರವಲು ಸೇವೆ ಪಡೆದುಕೊಂಡು ಇಲೆಕ್ಟ್ರೀಕಲ್ ಮತ್ತು ಮೆಕ್ಯಾನಿಕಲ್ ಕಾಮಗಾರಿ ಮತ್ತು ನಿರ್ವಹಣೆಯನ್ನು ಮಾಡಲು ತಕ್ಷಣ ಕ್ರಮಕೈಗೊಳ್ಳಲು ಸಂಬಂಧಪಟ್ಟ ನೀರಾವರಿ ಇಲಾಖೆ ಮತ್ತು ಇಂಧನ ಇಲಾಖೆಯವರಿಗೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.