ADVERTISEMENT

ಬಸವನಬಾಗೇವಾಡಿ: ಪುಸ್ತಕ  ಜೋಳಿಗೆಗೆ ಮುಂದಾದ ಸಿದ್ಧಲಿಂಗ ಶ್ರೀ

3 ವರ್ಷದ ಹಿಂದೆ ದೀಪಾವಳಿ ಸಂದರ್ಭದಲ್ಲಿ ಆರಂಭ: ಸಾಹಿತ್ಯಾಸಕ್ತರಿಂದ ಮೆಚ್ಚುಗೆ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2024, 4:23 IST
Last Updated 27 ಅಕ್ಟೋಬರ್ 2024, 4:23 IST
ಸಿದ್ಧಲಿಂಗ ಸ್ವಾಮೀಜಿ
ಸಿದ್ಧಲಿಂಗ ಸ್ವಾಮೀಜಿ   

ಬಸವನಬಾಗೇವಾಡಿ:  ದೀಪಾವಳಿ ಸಮೀಪಿಸುತ್ತಿದ್ದಂತೆ ಮನೆ ಮಂದಿಗೆಲ್ಲ ಬಿಡುವಿಲ್ಲದ ಕೆಲಸ. ಹಬ್ಬಕ್ಕೂ ಮುಂಚಿತವಾಗಿಯೇ ಮನೆ, ಅಂಗಡಿಗಳಿಗೆ ಸುಣ್ಣ, ಬಣ್ಣ ಹಚ್ಚಿ ಸ್ವಚ್ಛತಾ ಕಾರ್ಯದಲ್ಲಿ ಜನರು ತೊಡಗಿರುತ್ತಾರೆ. ಈ ಸಮಯದಲ್ಲಿ ಮನೆಯಲಿದ್ದ ಹಳೆಯ ಗುಜರಿ ಸಾಮಾನುಗಳು, ಹಳೆಯ ಪುಸ್ತಕ, ಪತ್ರಿಕೆಗಳನ್ನು ಗುಜರಿ, ರದ್ದಿ ಅಂಗಡಿಗೆ ಹಾಕುವುದು ಸಾಮಾನ್ಯ.  ಆದರೆ ಇದೇ ಸಂದರ್ಭವನ್ನು ಉಪಯೋಗಿಸಿಕೊಂಡು ಹಳೆಯ ಪುಸ್ತಕಗಳನ್ನು, ಸ್ಪರ್ಧಾತ್ಮಕ ಪರೀಕ್ಷೆಗೆ ಸಂಬಂಧಿಸಿದ ವಾರ, ಮಾಸಿಕ ಪತ್ರಿಕೆಗಳ ಸಂಗ್ರಹಕ್ಕಾಗಿ ಸ್ಥಳೀಯ ವಿರಕ್ತಮಠದ ಸಿದ್ಧಲಿಂಗ ಸ್ವಾಮೀಜಿ ಪುಸ್ತಕ ಜೋಳಿಗೆ ಹಾಕುವ ಮೂಲಕ ಪುಸ್ತಕಗಳ ಸಂಗ್ರಹಕ್ಕೆ ಮುಂದಾಗಿದ್ದಾರೆ.

ಶ್ರೀಗಳು ಮೂರು ವರ್ಷಗಳ ಹಿಂದೆಯೇ ಅಭಿಯಾನ ಆರಂಭಿಸಿದ್ದು, ಸಾಹಿತ್ಯ ಆಸಕ್ತರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ವಿದ್ಯಾರ್ಥಿಗಳು ಹಾಗೂ ಯುವಕರಲ್ಲಿ ಓದುವ ಅಭಿರುಚಿ ಹೆಚ್ಚಿಸುವ ನಿಟ್ಟಿನಲ್ಲಿ ವಿರಕ್ತಮಠದಲ್ಲಿ ಸುಸಜ್ಜಿತ ಗ್ರಂಥಾಲಯ ಆರಂಭಿಸುವ ಉದ್ದೇಶದಿಂದ ಈಗಾಗಲೇ ಸಾವಿರಕ್ಕೂ ಹೆಚ್ಚು ಪುಸ್ತಕಗಳನ್ನು ಸಂಗ್ರಹಿಸಿದ್ದಾರೆ.

ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ದತೆ ಮಾಡಿಕೊಳ್ಳುತ್ತಿರುವ ಯುವಕರು ಹಾಗೂ ಓದುಗರು ಶ್ರೀಗಳು ಸಂಗ್ರಹಿಸಿರುವ ಪುಸ್ತಗಳ ಸದುಪಯೋಗ ಪಡೆದುಕೊಂಡಿದ್ದಾರೆ.

ADVERTISEMENT

ಶ್ರೀಗಳ ಪುಸ್ತಕ ಸಂಗ್ರಹ ಕಾರ್ಯಕ್ಕೆ ಚುಟುಕು ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷ ಪ್ರಭಾಕರ ಖೇಡದ ಅವರು ಸ್ವಯಂಪ್ರೇರಣೆಯಿಂದ ಸಾಹಿತಿ, ಕವಿಗಳಿಂದ ಪುಸ್ತಕ ಜೋಳಿಗೆ ಕುರಿತ ಕವನಗಳನ್ನು ಆಹ್ವಾನಿಸುವ ಮೂಲಕ ಅವುಗಳನ್ನು ಸಾಮಾಜಿಕ ಜಾಲತಾಣದ ಮೂಲಕ ಪುಸ್ತಕಗಳ ಸಂಗ್ರಹಕ್ಕೆ ಸಹಕಾರ ನೀಡುತ್ತಿದ್ದಾರೆ.

ಸಾಹಿತಿ ಪ.ಗು.ಸಿದ್ದಾಪುರ, ಸ್ವರ್ಣಲತಾ ಬಿರಾದಾರ, ಎಚ್.ಆರ್.ಬಾಗವಾನ, ದ್ರಾಕ್ಷಾಯಿಣಿ ಬಾಗೇವಾಡಿ ಸೇರಿದಂತೆ 10ಕ್ಕೂ ಹೆಚ್ಚು ಸಾಹಿತಿ, ಕವಿಗಳು ಶ್ರೀಗಳ ಪುಸ್ತಕ ಜೋಳಿಗೆ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಕವನಗಳನ್ನು ಕಳುಹಿಸಿದ್ದಾರೆ.

ಸಾಹಿತ್ಯ ಆಸಕ್ತರು, ಪುಸ್ತಕ ಪ್ರೇಮಿಗಳು ತಮ್ಮ ಮನೆಗಳಲ್ಲಿ ಸಂಗ್ರಹಿಸಿಟ್ಟಿರುವ ಹಳೆಯ ಪುಸ್ತಕಗಳನ್ನು ರದ್ದಿಗೆ ಹಾಕದೇ ಶ್ರೀಗಳ ಜೋಳಿಗೆಗೆ ಹಾಕುವ ಮೂಲಕ ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ದತೆ ಮಾಡಿಕೊಳ್ಳುತ್ತಿರುವವರಿಗೆ ಹಾಗೂ ಓದುಗರಿಗೆ ಅನಕೂಲ ಮಾಡಕೊಡಬೇಕು ಎನ್ನುತ್ತಾರೆ ಪ್ರಭಾಕರ ಖೇಡದ.

‘ಮಠದ ಆವರಣದಲ್ಲಿ ಗ್ರಂಥಾಲಯ ನಿರ್ಮಾಣ‘

‘ಮೊಬೈಲ್‌ನಲ್ಲೆ ಹೆಚ್ಚು ಕಾಲ ಕಳೆಯುವ ಯುವಕರಲ್ಲಿ ಓದುವ ಆಸಕ್ತಿ ಬೆಳೆಸುವುದರೊಂದಿಗೆ ವಿದ್ಯಾರ್ಥಿಗಳು ಪಠ್ಯ ಪುಸ್ತಕದೊಂದಿಗೆ ವಿವಿಧ ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿ ಪುಸ್ತಕದತ್ತ ಆಕರ್ಷಿಸುವ ನಿಟ್ಟಿನಲ್ಲಿ ಮಠದ ಆವರಣದಲ್ಲಿ ಸುಸಜ್ಜಿತ ಗ್ರಂಥಾಲಯ ಆರಭಿಸುವ ಉದ್ದೇಶವಿದೆ.  ತಮ್ಮ ಮನೆಯಲ್ಲಿ ಸಂಗ್ರಹಿಸಿದ ಪುಸ್ತಕಗಳನ್ನು ನೀಡಲು ಜಿಲ್ಲೆ ಸೇರಿದಂತೆ ವಿವಿಧ ಜಿಲ್ಲೆಯ ಸಾಹಿತ್ಯಾಸಕ್ತರು ಮುಂದಾಗಿದ್ದಾರೆ. ಮಠದ ಆವರಣದಲ್ಲಿ ಓದುಗರಿಗೆ ಕುಳಿತುಕೊಳ್ಳಲು ಆಸನಗಳ ವ್ಯವಸ್ಥೆ ಮಾಡಲಾಗುವುದು. ಗ್ರಂಥಾಲಯದ ಸದಸ್ಯತ್ವ ಹೊಂದಿದವರಿಗೆ ಪುಸ್ತಕಗಳನ್ನು ಮನೆಗೆ ತೆಗೆದುಕೊಂಡು ಹೋಗಲು ಅವಕಾಶ ನೀಡಲಾಗಿದೆ’ ಎಂದು ಸಿದ್ಧಲಿಂಗ ಸ್ವಾಮೀಜಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.