ADVERTISEMENT

ಸಿಂದಗಿ: ಕಾರ್ಖಾನೆಗಳು ಲಿಖಿತವಾಗಿ ದರ ಪ್ರಕಟಿಸಲಿ

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2025, 5:56 IST
Last Updated 13 ನವೆಂಬರ್ 2025, 5:56 IST
ಸರ್ಕಾರ ಘೋಷಿಸಿದ ದರವನ್ನು ಸಕ್ಕರೆ ಕಾರ್ಖಾನೆಗಳು ಲಿಖಿತವಾಗಿ ಪ್ರಕಟಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಜಿಲ್ಲಾ ಘಟಕದ ನೇತೃತ್ವದಲ್ಲಿ ಕಬ್ಬು ಬೆಳೆಗಾರರು ಸಿಂದಗಿ ತಾಲ್ಲೂಕು ಪ್ರಜಾಸೌಧ ಎದುರು ಬುಧವಾರ ಪ್ರತಿಭಟನೆ ನಡೆಸಿ ತಹಶೀಲ್ದಾರ್‌ ಕರೆಪ್ಪ ಬೆಳ್ಳಿ ಅವರಿಗೆ ಮನವಿ ಸಲ್ಲಿಸಿದರು
ಸರ್ಕಾರ ಘೋಷಿಸಿದ ದರವನ್ನು ಸಕ್ಕರೆ ಕಾರ್ಖಾನೆಗಳು ಲಿಖಿತವಾಗಿ ಪ್ರಕಟಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಜಿಲ್ಲಾ ಘಟಕದ ನೇತೃತ್ವದಲ್ಲಿ ಕಬ್ಬು ಬೆಳೆಗಾರರು ಸಿಂದಗಿ ತಾಲ್ಲೂಕು ಪ್ರಜಾಸೌಧ ಎದುರು ಬುಧವಾರ ಪ್ರತಿಭಟನೆ ನಡೆಸಿ ತಹಶೀಲ್ದಾರ್‌ ಕರೆಪ್ಪ ಬೆಳ್ಳಿ ಅವರಿಗೆ ಮನವಿ ಸಲ್ಲಿಸಿದರು   

ಸಿಂದಗಿ: ಆಲಮೇಲ ಕೆಪಿಆರ್, ಮಲಘಾಣದ ಸಾಯಿ ಬಸವೇಶ್ವರ, ಯರಗಲ್ ಬಿ.ಕೆ ಸಂಗಮನಾಥ ಶುಗರ್ಸ್ ಕಾರ್ಖಾನೆಗಳ ಆಡಳಿತ ಮಂಡಳಿ ಸರ್ಕಾರ ಘೋಷಿಸಿದ ಪ್ರತಿ ಟನ್ ಕಬ್ಬಿಗೆ ₹3,300 ದರ ಲಿಖಿತವಾಗಿ ಪ್ರಕಟಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಜಿಲ್ಲಾ ಘಟಕದ ನೇತೃತ್ವದಲ್ಲಿ ಕಬ್ಬು ಬೆಳೆಗಾರರು ಬುಧವಾರ ಇಲ್ಲಿಯ ತಾಲ್ಲೂಕು ಪ್ರಜಾಸೌಧ ಎದುರು ಪ್ರತಿಭಟನೆ ನಡೆಸಿದರು.

ರೈತ ಸಂಘ ರಾಜ್ಯ ಗೌರವಾಧ್ಯಕ್ಷ ದಾನಪ್ಪಗೌಡ ಚನಗೊಂಡ ವಕೀಲ ಮಾತನಾಡಿ, ಸರ್ಕಾರ ಘೋಷಿಸಿದ ದರವನ್ನು ವಿಜಯಪುರ ಜಿಲ್ಲೆಯ ಸಕ್ಕರೆ ಕಾರ್ಖಾನೆಗಳ ಆಡಳಿತ ಮಂಡಳಿ ಲಿಖಿತವಾಗಿ ಪ್ರಕಟಿಸಲು ಹಿಂದೇಟು ಹಾಕುತ್ತಿವೆ. ಆಲಮೇಲ ಬಳಿ ಇರುವ ಕೆಪಿಆರ್ ಶುಗರ್ಸ್ ಮತ್ತು ಯರಗಲ್ ಬಿ.ಕೆ ಬಳಿ ಇರುವ ಸಂಗಮನಾಥ ಶುಗರ್ಸ್ ಕಾರ್ಖಾನೆಗಳ ಎದುರು ರೈತರು ಧರಣಿ ನಡೆಸಿದ್ದಾರೆ ಎಂದರು.

ಈ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಮೌನ ವಹಿಸಿರುವುದಕ್ಕೆ ಕಾರಣ ಏನು? ನಿಮ್ಮದೂ ಸಕ್ಕರೆ ಕಾರ್ಖಾನೆಗಳಿವೆಯಾ ಎಂದು ಚನಗೊಂಡ ವಕೀಲರು ಪ್ರಶ್ನಿಸಿದರು.

ADVERTISEMENT

ನಮ್ಮ ಜಿಲ್ಲೆಯವರೇ ಆದ ಸಕ್ಕರೆ ಸಚಿವ ಶಿವಾನಂದ ಪಾಟೀಲ ಕೃಷ್ಣಾ ಮತ್ತು ಭೀಮಾ ಭಾಗದ ರೈತರು ಎಂದು ವ್ಯತ್ಯಾಸ ಮಾಡಿ ಮಲತಾಯಿಧೋರಣೆ ಮಾಡಿದ್ದಾರೆ. ನಿಮ್ಮ ಮತಕ್ಷೇತ್ರದ ಎರಡು ಸಕ್ಕರೆ ಕಾರ್ಖಾನೆಗಳ ಎದುರು ರೈತರು ಧರಣಿ ನಡೆಸಿದ್ದರೂ ತಾವೇಕೆ ಸುಮ್ಮನಿದ್ದೀರಿ ಎಂದು ಶಾಸಕ ಅಶೋಕ ಮನಗೂಳಿಯವರಿಗೆ ಪ್ರಶ್ನಿಸಿದರು.

ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರೂ ಸಕ್ಕರೆ ಕಾರ್ಖಾನೆ ಹಿತಾಸಕ್ತಿ ಕಾಪಾಡುವ ದಿಸೆಯಲ್ಲಿ ಮಾತನಾಡುತ್ತಿದ್ದಾರೆ. ಅದರಂತೆ ಇಂಡಿ ಕ್ಷೇತ್ರದ ಶಾಸಕ ಯಶವಂತರಾಯಗೌಡ ಪಾಟೀಲ ಕೂಡ ರೈತರ ಪರವಾಗಿಲ್ಲ ಎಂದು ಟೀಕಿಸಿದರು.

ಕೆಪಿಆರ್ ಕಾರ್ಖಾನೆ ಎದುರು ಹೋರಾಟ ನಡೆಸಿದ ರೈತರನ್ನು ಒಕ್ಕಲೆಬ್ಬಿಸಲು ಪೊಲೀಸರು ಅನುಮತಿ ಇಲ್ಲದೇ ಹೋರಾಟಕ್ಕೆ ಅವಕಾಶ ಕೊಡುವುದಿಲ್ಲ. ಕಾನೂನಾತ್ಮಕ ರೀತಿಯಲ್ಲಿ ಹೋರಾಟ ಮಾಡುತ್ತಿದ್ದರೆ ಪೂರ್ವಾನುಮತಿ ಯಾಕೆ ಪಡೆಯಬೇಕು ಎಂದರು.

ನವೆಂಬರ್ 12 ಸಂಜೆ ಒಳಗಾಗಿ ಕಾರ್ಖಾನೆ ಆಡಳಿತ ಮಂಡಳಿ ಸಭೆ ನಡೆಸಿ ಸರ್ಕಾರ ನಿಗದಿಪಡಿಸಿದ ದರವನ್ನು ಲಿಖಿತವಾಗಿ ಪ್ರಕಟಿಸದಿದ್ದರೆ ರೈತರನ್ನು ಒಗ್ಗೂಡಿಸಿ ತಹಶೀಲ್ದಾರ್‌ ಕಚೇರಿಗೆ ಬೀಗ ಹಾಕುವುದಲ್ಲದೆ, ಹೆದ್ದಾರಿ ಬಂದ್ ಮಾಡಿ ಉಗ್ರ ಹೋರಾಟ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

‘ಸರ್ಕಾರ ನಿಗದಿಪಡಿಸಿದ ಕಬ್ಬಿನ ದರ ಲಿಖಿತವಾಗಿ ಪ್ರಕಟಿಸಿ ಕಾರ್ಖಾನೆ ಪ್ರಾರಂಭಿಸಬೇಕೆಂದು ಆಡಳಿತ ಮಂಡಳಿಗೆ ಕಟ್ಟುನಿಟ್ಟಾಗಿ ಆದೇಶಿಸಿದೆ. ಮುಂಗಾರು ಬೆಳೆ ಪರಿಹಾರ ಹಣ ವಾರದಲ್ಲಿ ರೈತರ ಖಾತೆಗೆ ಜಮೆಯಾಗಲಿದೆ’ ಎಂದು ತಹಶೀಲ್ದಾರ್‌ ಕರೆಪ್ಪ ಬೆಳ್ಳಿ ಪ್ರತಿಭಟನಕಾರರಿಗೆ ತಿಳಿಸಿದರು.

ರೈತ ಸಂಘ ಜಿಲ್ಲಾ ಘಟಕದ ಅಧ್ಯಕ್ಷ ಚಂದ್ರಗೌಡ ಪಾಟೀಲ ಮಾತನಾಡಿದರು. ಸಲೀಂ ಮುಲ್ಲಾ, ಭೀಮರಾಯ ಮನಗೂಳಿ, ರಾಜೂ ಕಲಕೇರಿ, ನೀಲಮ್ಮ ಯಡ್ರಾಮಿ, ಲಕ್ಕಮ್ಮ ಬಿರಾದಾರ, ಬಾಪುಗೌಡ ಬಗಲಿ, ಶಿವಶರಣ ಹೆಗ್ಗನದೊಡ್ಡಿ, ಪರಶು ದೇವರಮನಿ, ಬಸವರಾಜ ಸಣ್ಣಮನಿ, ಶ್ರೀಶೈಲ ಜಾಲವಾದಿ, ರವಿಕುಮಾರ ಮೂಲಿಮನಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.