ADVERTISEMENT

ಮುದ್ದೇಬಿಹಾಳ | ಯತ್ನಾಳರಿಗಾಗಿ ಪ್ರಾಣ ಕೊಡಲು ಸಿದ್ಧ: ಪ್ರಭುಗೌಡ ದೇಸಾಯಿ

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2025, 12:34 IST
Last Updated 7 ಏಪ್ರಿಲ್ 2025, 12:34 IST
ಮುದ್ದೇಬಿಹಾಳ ಪಟ್ಟಣದಲ್ಲಿ ಸೋಮವಾರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಅವರನ್ನು ಬಿಜೆಪಿಯಿಂದ ಉಚ್ಚಾಟಿಸಿರುವ ಕ್ರಮವನ್ನು ಖಂಡಿಸಿ ಬಸವೇಶ್ವರ ವೃತ್ತದಲ್ಲಿ ಪಂಚಮಸಾಲಿ ಸಮಾಜ ಹಾಗೂ ವಿವಿಧ ಹಿಂದೂ ಪರ ಸಂಘಟನೆಗಳ ಮುಖಂಡರು ಬೃಹತ್‌ ಪ್ರತಿಭಟನೆ ನಡೆಸಿದರು
ಮುದ್ದೇಬಿಹಾಳ ಪಟ್ಟಣದಲ್ಲಿ ಸೋಮವಾರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಅವರನ್ನು ಬಿಜೆಪಿಯಿಂದ ಉಚ್ಚಾಟಿಸಿರುವ ಕ್ರಮವನ್ನು ಖಂಡಿಸಿ ಬಸವೇಶ್ವರ ವೃತ್ತದಲ್ಲಿ ಪಂಚಮಸಾಲಿ ಸಮಾಜ ಹಾಗೂ ವಿವಿಧ ಹಿಂದೂ ಪರ ಸಂಘಟನೆಗಳ ಮುಖಂಡರು ಬೃಹತ್‌ ಪ್ರತಿಭಟನೆ ನಡೆಸಿದರು   

ಮುದ್ದೇಬಿಹಾಳ: ಬಸನಗೌಡ ಪಾಟೀಲ ಯತ್ನಾಳ ಯಾವ ಪಕ್ಷದಲ್ಲಿರುತ್ತಾರೆಯೋ ಸಾಯುವವರೆಗೂ ಅವರ ಜೊತೆಗೆ ಇದ್ದು ಕೆಲಸ ಮಾಡುತ್ತೇವೆ. ಅವರಿಗಾಗಿ ಜೈಲಿಗೆ ಹೋಗುವುದಕ್ಕೂ ಸಿದ್ಧ, ಪ್ರಾಣ ಕೊಡಲು ತಯಾರಿದ್ದೇವೆ ಎಂದು ಜಿ.ಪಂ. ಮಾಜಿ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ ಹೇಳಿದರು.

ಪಟ್ಟಣದಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಅವರನ್ನು ಬಿಜೆಪಿಯಿಂದ ಉಚ್ಚಾಟಿಸಿರುವ ಕ್ರಮವನ್ನು ಖಂಡಿಸಿ ಸೋಮವಾರ ಬಸವೇಶ್ವರ ವೃತ್ತದಲ್ಲಿ ಪಂಚಮಸಾಲಿ ಸಮಾಜ, ವಿವಿಧ ಹಿಂದೂ ಪರ ಸಂಘಟನೆಗಳ ಮುಖಂಡರು ಹಾಗೂ ಯತ್ನಾಳರ ಅಭಿಮಾನಿಗಳು ಹಮ್ಮಿಕೊಂಡಿದ್ದ ಪ್ರತಿಭಟನಾ ರ‍್ಯಾಲಿಯಲ್ಲಿ ಅವರು ಮಾತನಾಡಿದರು.

ಯಾವ ಸಮಾಜ ನಿಮಗೆ ಬೆಂಬಲ ನೀಡಿತ್ತೋ ಅವರ ದ್ರಾಕ್ಷಿ ತೋಟ ಬಂದ್ ಮಾಡಿ ಸಂಸ್ಕಾರ ಇಲ್ಲದವರಂತೆ ನಡೆದುಕೊಂಡಿದ್ದೀರಿ, ಬಸನಗೌಡರ ಬಗ್ಗೆ ಹಗುರವಾಗಿ ಮಾತನಾಡಿದರೆ ನಾವು ಸುಮ್ಮನೆ ಕೂರುವುದಿಲ್ಲ. ದೇಶಮುಖರು, ನಾಡಗೌಡರು ಇಷ್ಟು ವರ್ಷ ಎಂಎಲ್‌ಎ ಆದರೂ ಮಿಣಜಗಿ ಕಲ್ಲಿನ ಕ್ವಾರಿ ಬಂದ್ ಆಗಿರಲಿಲ್ಲ. ಆದರೆ ಹಿಂದಿನ ಶಾಸಕರು ಅಧಿಕಾರದಲ್ಲಿದ್ದಾಗ ಕ್ವಾರಿ ಬಂದ್ ಮಾಡಿಸಿದರು. ನೀವು ಯಾವ ಧಾಟಿಯಲ್ಲಿ ಮಾತನಾಡುತ್ತೀರೋ ನಾವು ಅದೇ ಧಾಟಿಯಲ್ಲಿ ಮಾತನಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.

ADVERTISEMENT

ಸ್ವಾಮಿ ವಿವೇಕಾನಂದ ಯುವ ಬ್ರಿಗೇಡ್ ಸಂಚಾಲಕ ರಾಘವ ಅಣ್ಣಿಗೇರಿ ಮಾತನಾಡಿ, ಕರ್ನಾಟಕದಲ್ಲಿ ಬಿಜೆಪಿ ಉಳಿಯಬೇಕಾದರೆ ಯತ್ನಾಳ ಪಕ್ಷದಲ್ಲಿರಬೇಕು. ಕುಟುಂಬ ರಾಜಕಾರಣಕ್ಕೆ ಬಿಜೆಪಿಯಲ್ಲಿ ಅವಕಾಶವಿಲ್ಲ. ಭ್ರಷ್ಟ, ಹೊಂದಾಣಿಕ ರಾಜಕಾರಣ ಮಾಡುವವರನ್ನು ಪಕ್ಷದಲ್ಲಿರಿಸಿಕೊಂಡು ಮಾಡುತ್ತಿರುವ ರಾಜಕಾರಣಕ್ಕೆ ಬ್ರೆಕ್‌ ಹಾಕಬೇಕು ಎಂದರು.

ಮುಖಂಡ ಅರವಿಂದ ಕೊಪ್ಪ ಮಾತನಾಡಿದರು. ಮುಖಂಡರಾದ ಬಸನಗೌಡ ಪಾಟೀಲ (ನಾಗರಾಳ ಹುಲಿ), ಎಂ.ಎಸ್.ರುದ್ರಗೌಡರ, ಪಂಚಮಸಾಲಿ ಸಮಾಜದ ತಾಲ್ಲೂಕು ಘಟಕದ ಅಧ್ಯಕ್ಷ ಅಮರೇಶ ಗೂಳಿ, ಕಿತ್ತೂರು ಚೆನ್ನಮ್ಮ ಯುವ ಘಟಕದ ತಾಲ್ಲೂಕು ಅಧ್ಯಕ್ಷ ರವಿ ಕಮತ, ಬಸರಕೋಡದ ಸೂಳಿಭಾವಿ, ಬಸವರಾಜ ಗೋನಾಳ, ಕಾಮರಾಜ ಬಿರಾದಾರ ಮೊದಲಾದವರು ಇದ್ದರು.

ಸಿಪಿಐ ಸಿಪಿಒಐ ಮೊಹ್ಮದ ಫಸೀವುದ್ದೀನ್‌, ಪಿಎಸ್‌ಐ ಸಂಜಯ ತಿಪರಡ್ಡಿ ಬಿಗಿ ಭದ್ರತೆ ಒದಗಿಸಿದ್ದರು.

Highlights - ಪಟ್ಟಣದ ಪ್ರಮುಖ ಬೀದಿಯಲ್ಲಿ ಬೃಹತ್‌ ಮೆರವಣಿಗೆ ವಿವಿಧ ಹಿಂದೂಪರ ಸಂಘಟನೆಗಳು ಭಾಗಿ ಸುಗಮ ಸಂಚಾರಕ್ಕೆ ತೊಂದರೆ, ಪರದಾಟ

Quote - ಯತ್ನಾಳರ ಪರ ಹೋರಾಟಕ್ಕೆ ಅಭಿಮಾನಿಗಳು ಸ್ವಯಂಪ್ರೇರಿತಾಗಿ ಬಂದಿದ್ದಾರೆ. ನಿಮ್ಮ ಹಾಗೆ ಹಣ ಸೀರೆ ಕೊಟ್ಟು ಕರೆ ತಂದಿಲ್ಲ.ಕೀಳು ಮಟ್ಟದ ರಾಜಕಾರಣ ಕೈಬಿಡಿ ಅರವಿಂದ ಕೊಪ್ಪ ಮುಖಂಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.