ADVERTISEMENT

ಕಾಲಿಟ್ಟಲ್ಲೆಲ್ಲಾ ಕೊಚ್ಚೆ: ಇದು ಮುದ್ದೇಬಿಹಾಳದ ತರಕಾರಿ ಮಾರುಕಟ್ಟೆ!

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2025, 3:05 IST
Last Updated 23 ಆಗಸ್ಟ್ 2025, 3:05 IST
ಫೋಟೋ:21-ಎಂ.ಬಿ.ಎಲ್‌01 ಮುದ್ದೇಬಿಹಾಳ ಪಟ್ಟಣದ ಕೆರೆ ಹತ್ತಿರ ಇರುವ ತರಕಾರಿ ಮಾರುಕಟ್ಟೆ ಮಳೆಯಿಂದ ಕೆಸರು ಗದ್ದೆಯಂತಾಗಿದ್ದು ಸಂತೆಗೆ ಬಂದ ಜನರ,ವ್ಯಾಪಾರಸ್ಥರು ಪರದಾಟ.
ಫೋಟೋ:21-ಎಂ.ಬಿ.ಎಲ್‌01 ಮುದ್ದೇಬಿಹಾಳ ಪಟ್ಟಣದ ಕೆರೆ ಹತ್ತಿರ ಇರುವ ತರಕಾರಿ ಮಾರುಕಟ್ಟೆ ಮಳೆಯಿಂದ ಕೆಸರು ಗದ್ದೆಯಂತಾಗಿದ್ದು ಸಂತೆಗೆ ಬಂದ ಜನರ,ವ್ಯಾಪಾರಸ್ಥರು ಪರದಾಟ.   

ಮುದ್ದೇಬಿಹಾಳ: ಮಳೆ ಬಂತೆಂದರೆ ಸಾಕು ಇಲ್ಲಿನ ತರಕಾರಿ ಮಾರುಕಟ್ಟೆ ಅಕ್ಷರಶಃ ಕೊಳಚೆ ಪ್ರದೇಶವಾಗಿ ಪರಿವರ್ತನೆಯಾಗುತ್ತಿದೆ. ಹಳ್ಳಿಗಾಡಿನಿಂದ ತರಕಾರಿ ಹೊತ್ತು ತರುವವರು ಹಾಗೂ ವ್ಯಾಪಾರಕ್ಕೆಂದು ಬರುವ ಸಾರ್ವಜನಿಕರು ತಿರುಗಾಡಲು ಆಗದಷ್ಟು ಕೆಸರು ಗದ್ದೆಯಂತಹ ಪರಿಸ್ಥಿತಿ ನಿರ್ಮಾಣವಾಗುತ್ತದೆ.

ವೃದ್ಧೆಯರು,ಮಹಿಳೆಯರು ಹೆಜ್ಜೆ ಇಟ್ಟಲ್ಲಿ ಕಾಲು ಜಾರಿ ಬೀಳುವ ಅಪಾಯಕಾರಿ ಸ್ಥಿತಿ ಇದ್ದು ಪುರಸಭೆಯಿಂದ ಸ್ವಚ್ಛತೆ ಕಾರ್ಯ ಕೈಗೊಳ್ಳುವುದಕ್ಕೂ ಸಾಧ್ಯವಾಗಿಲ್ಲ. ಎಲ್ಲೆಂದರಲ್ಲಿ ಬೀಳುವ ತರಕಾರಿ ತ್ಯಾಜ್ಯದ ವಿಲೇವಾರಿ ಸಮಯಕ್ಕೆ ಸರಿಯಾಗಿ ಆಗುತ್ತಿಲ್ಲ. ಅಲ್ಲದೆ ತರಕಾರಿ ಮಾರುಕಟ್ಟೆಯ ಒಳಾಂಗಣದ ನೆಲ ನುಣುಪಾಗಿರುವ ಕಾರಣ ಸ್ವಲ್ಪ ಮಳೆ ಬಂದರೆ ಸಾಕು ಕೆಸರು ಉಂಟಾಗಿ ದೊಡ್ಡ ಗುಂಡಿಗಳು ನಿರ್ಮಾಣವಾಗುತ್ತವೆ. ಇಂತಹ ಪರಿಸ್ಥಿತಿಯಲ್ಲಿಯೇ ವ್ಯಾಪಾರಿಗಳು ತರಕಾರಿಯನ್ನು ಮಾರುಕಟ್ಟೆಯೊಳಗಡೆ ಇಟ್ಟು ಭಯದಲ್ಲೇ ವ್ಯಾಪಾರ ಮಾಡುವ ಪರಿಸ್ಥಿತಿ ಉಂಟಾಗಿದೆ.

ಈ ಕುರಿತು ಪತ್ರಿಕೆಯೊಂದಿಗೆ ಮಾತನಾಡಿದ ತರಕಾರಿ ವ್ಯಾಪಾರಸ್ಥರಾದ ಶೈನಾಜ್ ಅವಟಿ, ಶೈನಾಜ ಗೊಳಸಂಗಿ, ಶಮ್ಸಾದ ಅವಟಿ, ರೇಷ್ಮಾ ನಾಲತವಾಡ ಮತ್ತಿತರರು ‘ಕಳೆದ 14 ವರ್ಷಗಳಿಂದ ಇಲ್ಲಿ ತರಕಾರಿ ವ್ಯಾಪಾರ ಮಾಡುತ್ತಿದ್ದೇವೆ. ಮೂಲಭೂತ ಸೌಕರ‍್ಯಗಳು ಇಲ್ಲಿಲ್ಲ. ಮಳೆ ಬಂದರೆ ಕೂಡುವುದಕ್ಕೆ ಜಾಗವಿಲ್ಲ. ಕೂತರೆ ಕೆಸರಿನ ವಾತಾವರಣದಿಂದ ಜನರು ಮಾರುಕಟ್ಟೆಯೊಳಗಡೆ ಬರುವುದಿಲ್ಲ. ತರಕಾರಿ ಸರಿ ಇಲ್ಲವೆಂದು ಯಾರೂ ಕೊಳ್ಳುವುದಿಲ್ಲ. ನಿತ್ಯದ ದುಡಿಮೆ ನಂಬಿಕೊಂಡು ವ್ಯಾಪಾರ ಮಾಡುವ ನಮಗೆ ನಷ್ಟವಾಗುತ್ತಿದ್ದು ಉಪಜೀವನ ಸಾಗಿಸುವುದು ಕಷ್ಟಕರವಾಗಲಿದೆ’ ಎಂದು ಅಳಲು ತೋಡಿಕೊಂಡರು.

ADVERTISEMENT

‘ಕಾಯಿಪಲ್ಯೆ ಮಾರುಕಟ್ಟೆ ಬಜಾರದಾಗ ಕೂಡು ಪುರುಸೊತ್ತಿಲ್ದ ಭೂಬಾಡ್ಗಿ ಅಂತ 20 ರೂ. ವಸೂಲಿ ಮಾಡಕೊಂಡು ಹೋಗ್ತಾರ. ಇಲ್ಲಿ ರೊಜ್ಜು(ಕೆಸರು) ಸರಿಮಾಡ್ಸರಿ ಅಂದ್ರ ನಮ್ಗೆನೂ ಗೊತ್ತಿಲ್ಲ. ಅಲ್ಲೇ ಮುನ್ಸಿಪಾಲ್ಟಿಯವ್ರಿಗೆ ಕೇಳ್ರಿ ಅಂತರ‍್ರಿ. ಜನ್ರು ಬರಲಿಕ್ಕ ಯಾಪಾರ ಹೆಂಗ ಮಾಡೂದು ನೀವ ಹೇಳ್ರಿ’ ಎಂದು ರೂಢಗಿಯಿಂದ ತರಕಾರಿ ಮಾರಾಟ ಮಾಡಲು ಬಂದಿದ್ದ ಶ್ರೀಕಾಂತ ಸೂಳಿಭಾವಿ, ಮುದ್ದೇಬಿಹಾಳದ ರೇಣುಕಾ ಹಿಪ್ಪರಗಿ ತಮ್ಮ ಕಷ್ಟವನ್ನು ತೋಡಿಕೊಂಡರು.

‘ಕಾಲಿಟ್ಟಲ್ಲೆಲ್ಲಾ ಕೆಸರುಮಯವಾದ ಮಾರುಕಟ್ಟೆ ಇರುವುದರಿಂದಲೇ ಕೊಳ್ಳುವುವವರು ಬರುವುದಕ್ಕೆ ಹಿಂದೇಟು ಹಾಕುತ್ತಾರೆ. ಮೊದಲೇ ಮುದ್ದೇಬಿಹಾಳದ ಎರಡ್ಮೂರು ಕಡೆ ಉಪ ಮಾರುಕಟ್ಟೆಗಳನ್ನು ತೆರೆದು ತರಕಾರಿ ಮಾರಾಟಕ್ಕೆ ಹಚ್ಚಿದ್ದರಿಂದ ವಾರದ ಸಂತೆ ಹೇಳಿಕೊಳ್ಳುವಂತೆಯೂ ಆಗುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ ಮಾರುಕಟ್ಟೆ ಹದಗೆಟ್ಟರೆ ಜನರು ತರಕಾರಿ ಕೊಳ್ಳುವುದಕ್ಕಾದರೂ ಹೇಗೆ ಬರುತ್ತಾರೆ’ ಎಂದು ಬಸಮ್ಮ ಮೈಲೇಶ್ವರ ಹೇಳಿದರು.


 ಮುದ್ದೇಬಿಹಾಳ ತರಕಾರಿ ಮಾರುಕಟ್ಟೆ ದುಸ್ಥಿತಿ.

ಶಾಸಕ ಸಿ.ಎಸ್.ನಾಡಗೌಡ ಅವರು ಎಸ್.ಎಫ್.ಸಿ ವಿಶೇಷ ಅನುದಾನದಲ್ಲಿ ತರಕಾರಿ ಮಾರುಕಟ್ಟೆ ಸುಧಾರಣೆಗೆ 25 ಲಕ್ಷ ರೂ.ಮಂಜೂರಾತಿ ಕೊಟ್ಟಿದ್ದು ಟೆಂಡರ್ ಕರೆದು ಕೆಲಸ ಆರಂಭಿಸಲಾಗುವುದು. ಜನರಿಗೆ ತೊಂದರೆ ಆಗದಂತೆ ಕ್ರಮ ಕೈಗೊಳ್ಳುತ್ತೇವೆ.
-ಮಹೆಬೂಬ ಗೊಳಸಂಗಿ ಅಧ್ಯಕ್ಷರುಪುರಸಭೆ

‘ಶುಚಿತ್ವಕ್ಕೆ ಶೀಘ್ರ ಕ್ರಮ’

ಮುದ್ದೇಬಿಹಾಳ ತರಕಾರಿ ಮಾರುಕಟ್ಟೆ ಶುಚಿತ್ವಕ್ಕೆ ಎರಡು ದಿನದಲ್ಲಿ ಕಾರ್ಯೋನ್ಮುಖವಾಗುತ್ತೇವೆ. ಮಳೆ ಬಂದ ಕಾರಣ ಸಮಸ್ಯೆ ಆಗಿದೆ. ಸರಿಪಡಿಸಲು ಈಗಾಗಲೇ ಎಸ್.ಎಫ್.ಸಿ ವಿಶೇಷ ಅನುದಾನದಲ್ಲಿ ಹಣ ಮೀಸಲಿಟ್ಟಿದ್ದು ಮಾರುಕಟ್ಟೆ ಆವರಣದಲ್ಲಿ ಕಾಂಕ್ರಿಟ್ ಮಾಡಿಸಿ ಸ್ವಚ್ಛತೆಗೆ ಆದ್ಯತೆ ನೀಡಲಾಗುವುದು ಎಂದು ಪುರಸಭೆ ಮುಖ್ಯಾಧಿಕಾರಿ ಮಲ್ಲಿಕಾರ್ಜುನ ಬಿರಾದಾರ ಹೇಳಿದರು. ವ್ಯಾಪಾರಿಗಳು ಪುರಸಭೆಯ ಕಸದ ವಾಹನ ಬಂದಾಗ ಅದರಲ್ಲಿಯೆ ಕಸ ಹಾಕುವ ಪದ್ಧತಿ ಇಟ್ಟುಕೊಳ್ಳಬೇಕು. ಎಲ್ಲೆಂದರಲ್ಲಿ ಕಸ ಬೀಸಾಡಿ ಹೋಗಬಾರದು ಎಂದು ಅವರು ಕೋರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.