ADVERTISEMENT

ಮುರುಘಾಮಠಕ್ಕೆ ಆಡಳಿತಾಧಿಕಾರಿ ನೇಮಕಕ್ಕೆ ಬಸನಗೌಡ ಪಾಟೀಲ ಯತ್ನಾಳ ಒತ್ತಾಯ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2022, 13:59 IST
Last Updated 3 ಸೆಪ್ಟೆಂಬರ್ 2022, 13:59 IST
ಬಸನಗೌಡ ಪಾಟೀಲ ಯತ್ನಾಳ
ಬಸನಗೌಡ ಪಾಟೀಲ ಯತ್ನಾಳ   

ವಿಜಯಪುರ: ಚಿತ್ರದುರ್ಗದ ಮುರುಘಾ ಮಠ ಉಳಿಸುವ ಕೆಲಸ ಸರ್ಕಾರ ಮಾಡಬೇಕು, ಒಳ್ಳೆಯ ಆಡಳಿತಾಧಿಕಾರಿಯನ್ನು ತಕ್ಷಣ ನೇಮಕ ಮಾಡಬೇಕು ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಒತ್ತಾಯಿಸಿದರು.

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಮುರುಘಾ ಶರಣರನ್ನು ಮಠದಲ್ಲಿ ಇಟ್ಟುಕೊಳ್ಳಬಾರದು, ಅವರ ವಿರುದ್ಧ ಗಂಭೀರ ಆರೋಪ ಬಂದಿರೋ ಕಾರಣ ಮುಂದಿನ ದಿನಗಳಲ್ಲಿ ವೀರಶೈವ ಲಿಂಗಾಯತ ಸಮಾಜ ಒಳ್ಳೆಯ ಮಠಾಧೀಶರನ್ನು ಮುರುಘಾ ಮಠಕ್ಕೆ ನೇಮಕ ಮಾಡಬೇಕು ಎಂದು ಸಲಹೆ ನೀಡಿದರು.

ಚಿತ್ರದುರ್ಗ ಆಳಿದ ಮದಕರಿ ನಾಯಕರ ವಂಶದವರು ಮಠಕ್ಕೆ ಸಾವಿರಾರು ಎಕರೆ ಜಮೀನು ನೀಡಿದ್ದಾರೆ. ಸಾವಿರಾರು ಕೋಟಿ ಆಸ್ತಿಯಿದೆ. ಮಠ ಎಂದಿಗೂ ಕೆಟ್ಟ ಜನರ ಕೈಗೆ ಸಿಗಬಾರದು ಎಂದರು.

ADVERTISEMENT

ಮಠದಿಂದ ‘ಬಸವ ಶ್ರೀ’ ಪ್ರಶಸ್ತಿ ಪಡೆದವರು ವಾಪಸ್‌ ಕೊಡುತ್ತಿದ್ದಾರೆ. ಅದೇ ರೀತಿ ಮುರುಘಾಮಠದಲ್ಲಿ ವಿಜಯೇಂದ್ರ ಏನಿಟ್ಟಿದ್ದಾನೋ ಅದನ್ನು ವಾಪಸ್ ಕೊಡಲಿ, ವಿಜಯೇಂದ್ರ ಏನು ಕೊಟ್ಟಿದ್ದಾನೋ ಅದನ್ನು ವಸೂಲಿ ಮಾಡಲಿ ಎಂದರು.

ಮುರುಘಾ ಶ್ರೀಗಳು ಹಿಂದೂ ಧರ್ಮದ ಬಗ್ಗೆ ಹಗುರವಾಗಿ ಮಾತನಾಡುತ್ತಿದ್ದರು. ವೀರಶೈವ ಲಿಂಗಾಯತ ಮಠದಲ್ಲಿ ಟಿಪ್ಪು ಸುಲ್ತಾನ್ ಮೂರ್ತಿ ಇಟ್ಟಿದ್ದರು. ಗೋಮಾತೆಯ ಬಗ್ಗೆಯೂ ಅವಹೇಳನಕಾರಿಯಾಗಿ ಮಾತನಾಡಿದ್ದರು ಎಂದು ಆರೋಪಿಸಿದರು.

ಈ ದೇಶವನ್ನು ಹಾಳು ಮಾಡಲು ಹೊರಟಿರುವ ಪ್ರಗತಿಪರರು ಹಾಗೂ ಬುದ್ದಿಜೀವಿಗಳೇ ಮುರುಘಾ ಶರಣರನ್ನು ಹಾಳು ಮಾಡಿದ್ದು, ಪ್ರಗತಿಪರರು ಎಂದು ಹೇಳಿಕೊಂಡವರೇ ಸ್ವಾಮೀಜಿಯನ್ನು ದಿಕ್ಕು ತಪ್ಪಿಸಿದವರು. ಇಂಥ ಸಂದರ್ಭದಲ್ಲಿ ಯಾರೂ ಅವರ ಪರ ನಿಲ್ಲಲ್ಲ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಹೇಳಿದ್ದಾರೆ ಎಂದರು.

ಹಿಂದೂ ಧರ್ಮ ರಕ್ಷಣೆ ಮಾಡಲು ಖಾವಿಯಿದೆಯೇ ಹೊರತು, ಇಸ್ಲಾಂ ಧರ್ಮದ ವರ್ಣನೆ, ಗುಣಗಾನ ಮಾಡಲಿಕ್ಕೆ ಅಲ್ಲ. ಹಿಂದೂ ಧರ್ಮದ ಗುಣಗಾನ ಮಾಡಿ, ಬೆಳೆಸಿ ಇತರೆ ಧರ್ಮದವರನ್ನು ಹಿಂದೂ ಧರ್ಮಕ್ಕೆ ಕರೆ ತನ್ನಿ. ಲವ್ ಜಿಹಾದ್‌ಗಳಂತ ಘಟನೆ ತಪ್ಪಿಸಿ, ಅದನ್ನು ಬಿಟ್ಟು ವಿಭೂತಿ ಕುಂಕುಮ ಹಚ್ಚಿಕೊಂಡು ಟಿಪ್ಪು ಸುಲ್ತಾನ್ ಆರಾಧನೆ ಮಾಡಿದರೆ ಹೇಗೆ ಎಂದು ಪ್ರಶ್ನಿಸಿದರು.

ಟಿಪ್ಪು ಸುಲ್ತಾನ್ ಹೊಗಳಿದ ಎಲ್ಲರೂ ಹಾಳಾಗಿ ಹೋಗಿದ್ದಾರೆ. ಟಿಪ್ಪು ಬಗ್ಗೆ ಸಿನೆಮಾ ಮಾಡಿದವನ ಪೆಂಡಾಲ್ ಸುಟ್ಟು ಹೋಗಿದೆ. ಟಿಪ್ಪುವಿನ ಖಡ್ಗ ತಂದಿದ್ದ ವಿಜಯ್ ಮಲ್ಯಾ ದೇಶ ಬಿಟ್ಟು ಓಡಿ ಹೋಗಿದ್ದಾನೆ. ಟಿಪ್ಪು ಜಯಂತಿ ಮಾಡಿ ಸಿದ್ದರಾಮಯ್ಯ 30 ಸಾವಿರ ಅಂತರದಿಂದ ಚುನಾವಣೆಯಲ್ಲಿ ಸೋತಿದ್ದಾರೆ. ಟಿಪ್ಪು ಬಗ್ಗೆ ಯಾವುದೇ ನಾಯಕರು ಗುಣಗಾನ ಮಾಡಬೇಡಿ, ನಿಮಗೂ ಹಾಗೇ ಆಗುತ್ತದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.