ADVERTISEMENT

ಕಾಂಗ್ರೆಸ್ ಸೋಲಿಗೆ ಮುಸ್ಲಿಮರು ಕಾರಣವಲ್ಲ: ಅಬ್ದುಲ್‍ ಖಾದೀರ್

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2021, 11:28 IST
Last Updated 7 ಸೆಪ್ಟೆಂಬರ್ 2021, 11:28 IST
ಅಬ್ದುಲ್‍ ಖಾದೀರ್
ಅಬ್ದುಲ್‍ ಖಾದೀರ್   

ವಿಜಯಪುರ: ಬಸವನ ಬಾಗೇವಾಡಿ ಪುರಸಭೆ ವಾರ್ಡ್ 21 ರ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸೋಲಿಗೆ ಮುಸ್ಲಿಂ ಕಾರ್ಯಕರ್ತರೇ ಕಾರಣ ಎನ್ನುವ ಬಸವನ ಬಾಗೇವಾಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಐ.ಸಿ. ಪಟ್ಟಣಶೆಟ್ಟಿ ಅವರ ಹೇಳಿಕೆ ಬಾಲಿಷತನದಿಂದ ಕೂಡಿದೆ ಎಂದು ಜಿಲ್ಲಾ ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ಅಬ್ದುಲ್‍ ಖಾದೀರ್ ಖಂಡಿಸಿದ್ದಾರೆ.

ಪಕ್ಷದ ಜವಾಬ್ದಾರಿ ಸ್ಥಾನದಲ್ಲಿರುವ ಐ.ಸಿ. ಪಟ್ಟಣಶೆಟ್ಟಿ ಅವರು ಪಕ್ಷದ ಸೋಲಿಗೆ ಒಂದು ಸಮುದಾಯದ ಕಾರ್ಯಕರ್ತರೇ ಕಾರಣ ಎಂದು ಹೇಳಿಕೆ ನೀಡಿರುವುದು ಬೇಜವಾಬ್ದಾರಿತನದಿಂದ ಕೂಡಿದೆ ಎಂದು ಅವರು ಹೇಳಿದ್ದಾರೆ.

ಮುಸ್ಲಿಂ ಸಮಾಜದ ಕಾರ್ಯಕರ್ತರು ಕಾಂಗ್ರೆಸ್ ಪಕ್ಷವನ್ನೇ ಉಸಿರಾಗಿಸಿಕೊಂಡು ಪಕ್ಷದ ಅಭ್ಯರ್ಥಿಗಳ ಪರವಾಗಿ ಶ್ರಮವಹಿಸಿ ಕೆಲಸ ಮಾಡಿದ್ದಾರೆ. ಆದರೆ, ದುರದೃಷ್ಟವಶಾತ್ ಅಭ್ಯರ್ಥಿ ಸೋಲು ಅನುಭವಿಸಿದ್ದಾರೆ. ಈ ಸೋಲನ್ನು ಮುಸ್ಲಿಂ ಕಾರ್ಯಕರ್ತರ ಹೆಗಲಿಗೆ ಕಟ್ಟುವುದು ಎಷ್ಟು ಸರಿ? ಎಂದು ಖಾದೀರ್ ಪ್ರಶ್ನಿಸಿದ್ದಾರೆ.

ADVERTISEMENT

ಎಂಟು ಜನ ಮುಖಂಡರನ್ನು ಕರೆಯಿಸಿ ಸಮಾಲೋಚನೆ ನಡೆಸಿದ್ದೇನೆ ಎಂದು ಪಟ್ಟಣಶೆಟ್ಟಿ ಅವರು ಹೇಳಿದ್ದಾರೆ, 500ಕ್ಕೂ ಹೆಚ್ಚು ಮುಸ್ಲಿಂ ಮತದಾರರಿರುವ ವಾರ್ಡ್‍ನಲ್ಲಿ ಕೇವಲ ಬೆರಳಣಿಕೆಯಷ್ಟು ಮುಖಂಡರನ್ನು ಕರೆಯಿಸಿ ಅಭಿಪ್ರಾಯ ಪಡೆದರೆ ಒಕ್ಕೊರೆಲಿನ ಅಭಿಪ್ರಾಯ ಮೂಡಲು ಸಾಧ್ಯವೇ? ನಿಮ್ಮ ತಪ್ಪಿಗೆ ಮುಸ್ಲಿಂ ಕಾರ್ಯಕರ್ತರಿಗೆ ಸೋಲಿನ ಹೊಣೆ ಹೊರೆಸಬೇಡಿ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.