ADVERTISEMENT

ಸಂವಿಧಾನ ರಕ್ಷಣೆಗೆ ಒಗ್ಗಟ್ಟಿನ ಹೋರಾಟ ಅಗತ್ಯ 

ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಲಕ್ಷ್ಮಿನಾರಾಯಣ ನಾಗವಾರ

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2022, 10:53 IST
Last Updated 8 ಆಗಸ್ಟ್ 2022, 10:53 IST
ವಿಜಯಪುರದಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ, ಪತ್ರಕರ್ತ ಅನಿಲ ಹೊಸಮನಿ ಅವರು ಕನ್ನಡಕ್ಕೆ ಅನುವಾದಿಸಿರುವ ಡಾ. ಸವಿತಾ ಭೀಮರಾವ್ ಅಂಬೇಡ್ಕರ್ ಅವರ ಆತ್ಮಚರಿತ್ರೆ ‘ಡಾ. ಅಂಬೇಡ್ಕರ್ ಸಹವಾಸದಲ್ಲಿ’ ಎಂಬ ಕೃತಿಯನ್ನು ಲಕ್ಷ್ಮಿನಾರಾಯಣ ನಾಗವಾರ, ಭಂತೆ ಬೋಧಿಪ್ರಜ್ಞ, ಸನತ್‌ಕುಮಾರ್‌ ಬೆಳಗಲಿ, ಬಸವರಾಜ ಸೂಳಿಭಾವಿ ಬಿಡುಗಡೆಗೊಳಿಸಿದರು
ವಿಜಯಪುರದಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ, ಪತ್ರಕರ್ತ ಅನಿಲ ಹೊಸಮನಿ ಅವರು ಕನ್ನಡಕ್ಕೆ ಅನುವಾದಿಸಿರುವ ಡಾ. ಸವಿತಾ ಭೀಮರಾವ್ ಅಂಬೇಡ್ಕರ್ ಅವರ ಆತ್ಮಚರಿತ್ರೆ ‘ಡಾ. ಅಂಬೇಡ್ಕರ್ ಸಹವಾಸದಲ್ಲಿ’ ಎಂಬ ಕೃತಿಯನ್ನು ಲಕ್ಷ್ಮಿನಾರಾಯಣ ನಾಗವಾರ, ಭಂತೆ ಬೋಧಿಪ್ರಜ್ಞ, ಸನತ್‌ಕುಮಾರ್‌ ಬೆಳಗಲಿ, ಬಸವರಾಜ ಸೂಳಿಭಾವಿ ಬಿಡುಗಡೆಗೊಳಿಸಿದರು   

ವಿಜಯಪುರ: ದೇಶದ ಸಂವಿಧಾನ ಮತ್ತು ಪ್ರಜಾಪ್ರಭುತ್ವ ಅಪಾಯದಲ್ಲಿದೆ. ಇವುಗಳ ರಕ್ಷಣೆಗಾಗಿ ದಲಿತ ಸಂಘಟನೆಗಳಿಂದ ಒಗ್ಗಟ್ಟಿನ ಹೋರಾಟದ ಅಗತ್ಯವಿದೆ ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ ಲಕ್ಷ್ಮಿನಾರಾಯಣ ನಾಗವಾರ ಕರೆ ನೀಡಿದರು.

ನಗರದ ಕಂದಗಲ್‌ ಹನುಮಂತರಾಯ ರಂಗಮಂದಿರದಲ್ಲಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ, ಚಂದ್ರಶೇಖರ ಹೊಸಮನಿ ಫೌಂಡೇಶನ್, ಲಡಾಯಿ ಪ್ರಕಾಶನದ ಆಶ್ರಯದಲ್ಲಿ ಭಾನುವಾರ ಪತ್ರಕರ್ತ ಅನಿಲ ಹೊಸಮನಿ ಅವರು ಕನ್ನಡಕ್ಕೆ ಅನುವಾದಿಸಿರುವ ಡಾ. ಸವಿತಾ ಭೀಮರಾವ್ ಅಂಬೇಡ್ಕರ್ ಅವರ ಆತ್ಮಚರಿತ್ರೆ ‘ಡಾ. ಅಂಬೇಡ್ಕರ್ ಸಹವಾಸದಲ್ಲಿ’ ಎಂಬ ಕೃತಿಯ ಬಿಡುಗಡೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಮನುವಾದಿ ಸರ್ಕಾರಗಳು ಸರ್ಕಾರಿ ಸ್ವಾಮ್ಯದ ಸಂಸ್ಥೆಗಳನ್ನು ಒಂದೊಂದಾಗಿ ಖಾಸಗಿಯವರಿಗೆ ಮಾರಾಟ ಮಾಡುವ ಮೂಲಕ ಹಂತಹಂತವಾಗಿ ಮೀಸಲಾತಿಯನ್ನು ರದ್ದುಗೊಳಿಸುತ್ತಿದ್ದಾರೆ. ಸಂವಿಧಾನದ ಆಶಯಕ್ಕೆ ವಿರುದ್ಧವಾಗಿ ಮನುವಾದಿಗಳು ನಡೆಸಿರುವ ಈ ಕುತಂತ್ರವನ್ನು ತಡೆಬೇಕಾದರೆ ಹರಿದು ಹಂಚಿ ಹೋಗಿರುವ ದಲಿತ ಸಂಘಟನೆಗಳು ಒಂದೇ ವೇದಿಕೆಯಡಿಯಲ್ಲಿ ಬಂದು ಹೋರಾಟ ಮಾಡಬೇಕಿದೆ ಎಂದು ಹೇಳಿದರು.

ADVERTISEMENT

ಮುಸಲ್ಮಾನರ ವಿರುದ್ಧ ದಲಿತರನ್ನು ಎತ್ತಿಕಟ್ಟುವ ಹುನ್ನಾರ ನಡೆಯುತ್ತಿದೆ. ಆಸೆ ಆಮಿಷಗಳ ಮುಖಾಂತರ ದಲಿತ ನಾಯಕರ ದಿಕ್ಕುತಪ್ಪಿಸುವ ಕೆಲಸ ವ್ಯವಸ್ಥಿತವಾಗಿ ಜಾರಿಯಲ್ಲಿದೆ. ಇವತ್ತು ಮುಸಲ್ಮಾನರನು ಟಾರ್ಗೆಟ್ ಮಾಡುತ್ತಿರುವ ಸಂಘಪರಿವಾರದ ಮುಂದಿನ ಟಾರ್ಗೆಟ್ ದಲಿತರೇ ಆಗಿದ್ದಾರೆ. ಮನುವಾದಿಗಳ ಈ ಹುನ್ನಾರವನ್ನು ದಲಿತ ಮುಸ್ಲಿಂ ಮತ್ತು ಮುಖಂಡರು ಅರ್ಥಮಾಡಿಕೊಳ್ಳಬೇಕಿದೆ. ದಲಿತರು ಮತ್ತು ಮುಸಲ್ಮಾನರು ಒಂದಾದರೆ ಈ ದೇಶವನ್ನು ನಾವೇ ಆಳಬಹುದು ಎಂದು ಅವರು ಹೇಳಿದರು.

ರಾಜ್ಯದಲ್ಲಿ ಒಡೆದು ಹೋಗಿರುವ ಎಲ್ಲ ದಲಿತ ಸಂಘಟನೆಗಳನ್ನು ಜೋಡಿಸುವ ದಿಸೆಯಲ್ಲಿ ಚಿಂತನೆ ನಡೆದಿದೆ. ಡಾ. ಅಂಬೇಡ್ಕರ್ ಅವರ ಆಶಯದಂತೆಯೇ ಎಲ್ಲಾ ದಲಿತ ಸಂಘಟನೆಗಳು ಕೆಲಸ ಮಾಡುತ್ತಿವೆ. ಈ ಎಲ್ಲ ಸಂಘಟನೆಗಳನ್ನು ಒಂದುಗೂಡಿಸುವ ಸಾಮರ್ಥ್ಯ ಡಿ.ಜಿ. ಸಾಗರ್ ಅವರಿಗೆ ಇದೆ. ಈ ದಿಸೆಯಲ್ಲಿ ಅವರು ಮುಂದಾಳತ್ವ ವಹಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.

ಡಾ. ಅಂಬೇಡ್ಕರ್ ಅವರ ಎರಡನೇ ಪತ್ನಿ ಡಾ. ಸವಿತಾ ಅಂಬೇಡ್ಕರ್ ಅವರ ಕುರಿತಾಗಿ ಹಲವಾರು ರೀತಿಯ ಅಪಪ್ರಚಾರ ನಡೆದಿದೆ. ಅದಕ್ಕೆ ಉತ್ತರವಾಗಿ ಅವರು ತಮ್ಮ ಆತ್ಮಚರಿತ್ರೆಯನ್ನು ಬರೆದುಕೊಂಡಿದ್ದಾರೆ. ಅದನ್ನು ಕನ್ನಡದಲ್ಲಿ ತಂದಿರುವ ಹಿರಿಯ ಹೋರಾಟಗಾರ ಅನಿಲ ಹೊಸಮನಿ ಅವರು ಐತಿಹಾಸಿಕ ಕಾರ್ಯ ಮಾಡಿದ್ದಾರೆ ಎಂದು ಹೇಳಿದರು.

ಭಂತೆ ಬೋಧಿಪ್ರಜ್ಞ ಸಾನ್ನಿಧ್ಯ ವಹಿಸಿದ್ದರು. ಹಿರಿಯ ಪತ್ರಕರ್ತ ಸನತ್‌ಕುಮಾರ್‌ ಬೆಳಗಲಿ, ಬಸವರಾಜ ಸೂಳಿಭಾವಿ, ಮುಖಂಡ ಎಸ್‌.ಎಂ.ಪಾಟೀಲ ಗಣಿಹಾರ, ದಲಿತ ಸಂಘರ್ಷ ಸಮಿತಿ ಮುಖಂಡರಾದ ಚಂದ್ರು ಚಕ್ರವರ್ತಿ, ಪ್ರಭು ಮೇಗಳಮನಿ, ಚೆನ್ನು ಕಟ್ಟಿಮನಿ, ಗುರುರಾಜ ಗುಡಿಮನಿ, ನಾಗೇಶ ಕಟ್ಟಿಮನಿ, ದಸಂಸ ಜಿಲ್ಲಾ ಸಂಚಾಲಕ ಚಂದ್ರಕಾಂತ ಸಿಂಗೆ, ಜಿಲ್ಲಾ ಸಂಘಟನಾ ಸಂಚಾಲಕ ಹುಯೋಗಿ ತಳ್ಳೊಳ್ಳಿ, ಎಂ.ಬಿ. ಕಟ್ಟಿಮನಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.