ಮುದ್ದೇಬಿಹಾಳ: ತಾಲ್ಲೂಕಿನ ಹೆಜ್ಜೆಮೇಳ ತಂಡವು ಈ ಬಾರಿಯ ಮೈಸೂರು ದಸರಾ ಜಂಬೂ ಸವಾರಿಯ ಮೆರವಣಿಗೆಯಲ್ಲಿ ಹೆಜ್ಜೆ ಹಾಕಲಿದ್ದು, ಉತ್ತರ ಕರ್ನಾಟಕ ಭಾಗದ ಗ್ರಾಮೀಣ ಜಾನಪದ ಕಲೆಯನ್ನು ನಾಡಿಗೆ ಪರಿಚಯಿಸಲಿದೆ.
ತಾಲ್ಲೂಕಿನ ಯರಝರಿಯ ಜಾನಪದ ಹೆಜ್ಜೆಮೇಳ ಸಂಘವು ಅಕ್ಟೋಬರ್ 2ರಂದು ವಿಶ್ವವಿಖ್ಯಾತ ದಸರಾದಲ್ಲಿ ಜಂಬೂ ಸವಾರಿ ಮಹೋತ್ಸವ ಭಾಗಿಯಾಗಲಿದೆ. ಸಂಘಕ್ಕೆ ಮೈಸೂರು ದಸರಾ ಪಂಜಿನ ಕವಾಯತು ಉಪ ಸಮಿತಿಯ ಉಪ ಅಧಿಕಾರಿ ಸೀಮಾ ಲಾಟ್ಕರ್ ಆಹ್ವಾನ ನೀಡಿದ್ದಾರೆ.
ಹೆಜ್ಜೆ ಮೇಳದ ವಿಶೇಷತೆ: ‘ಹಲಗೆ ವಾದನ, ಸಾಂಪ್ರದಾಯಿಕ ವಾದ್ಯಗಳ ಮೂಲಕ ಒಟ್ಟು 22 ಜನರ ತಂಡ ಮೇಳದಲ್ಲಿ ಇರಲಿದೆ. ಯರಝರಿ ಗ್ರಾಮದವರೇ ಈ ಮೇಳದಲ್ಲಿರುವುದು ವಿಶೇಷ. 10 ವರ್ಷಗಳಿಂದ ನಮ್ಮ ತಂಡ ಹಲವೆಡೆ ಪ್ರರ್ದರ್ಶನ ನೀಡಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ’ ಎಂದು ಹೆಜ್ಜೆ ಮೇಳದ ತಂಡದ ಅಧ್ಯಕ್ಷ ಭೀಮಸೇನ ಕೋಳೂರು ತಿಳಿಸಿದರು.
ಮೇಳದ ಧಿರಿಸು: ‘ಅಪ್ಪಟ ಉತ್ತರ ಕರ್ನಾಟಕ ಭಾಗದ ಉಡುಪನ್ನು ಹೆಜ್ಜೆಮೇಳದ ಕಲಾವಿದರು ಧರಿಸುತ್ತಾರೆ. ತಲೆಗೆ ರೇಶ್ಮೆ ಪಟಗ, ಬಿಳಿ ಧೋತ್ರ, ಅಂಗಿ ಧರಿಸುತ್ತಾರೆ. ಕೈಯಲ್ಲಿ ಕೋಲುಗಳನ್ನು ಹಿಡಿದು ಹಲಗೆಯ ತಾಳಬದ್ದ ನಿನಾದಕ್ಕೆ ಹೆಜ್ಜೆ ಹಾಕುತ್ತಾರೆ’ ಎಂದರು.
‘ಮರೆಯಾಗುತ್ತಿರುವ ಗ್ರಾಮೀಣ ಕಲೆಗಳನ್ನು ಉಳಿಸುವುದಕ್ಕೆ ಕನ್ನಡ ಜಾನಪದ ಪರಿಷತ್, ಕನ್ನಡ ಸಾಹಿತ್ಯ ಪರಿಷತ್ ಸೇರಿದಂತೆ ಹಲವು ಸಾಹಿತ್ಯಿಕ ಸಂಘಟನೆಗಳು ಶ್ರಮಿಸುತ್ತಿವೆ. ಯರಝರಿಯ ಹೆಜ್ಜೆಮೇಳವು ಮೈಸೂರು ದಸರಾ ಮೆರವಣಿಗೆಯಲ್ಲಿ ಪ್ರದರ್ಶನವಾಗುತ್ತಿರುವುದು ತಾಲ್ಲೂಕಿನ ಗೌರವವನ್ನು ಇಮ್ಮಡಿಸಿಗೊಳಿಸಿದಂತಾಗಿದೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.