ನಾಲತವಾಡ: ಪಟ್ಟಣ ಎಲ್ಲ ರಂಗದಲ್ಲೂ ಶರವೇಗದಲ್ಲಿ ಬೆಳೆಯುತ್ತಿದೆ, ಜನದಟ್ಟಣೆ ಅಧಿಕವಾಗುತ್ತಿದೆ. ಹೀಗಾಗಿ ಪಟ್ಟಣದಲ್ಲಿಯೂ ಅಪರಾಧ ಪ್ರಕರಣ, ಅಪಘಾತಗಳ ಸಂಖ್ಯೆ ಕೂಡಾ ಹೆಚ್ಚಾಗುತ್ತಿವೆ. ಪಟ್ಟಣದ ಸಾರ್ವಜನಿಕರನ್ನು, ವ್ಯಾಪಾರೋದ್ಯಮಿಗಳನ್ನು ನಿದ್ದೆ ಗೆಡಿಸಿವೆ. ಇವುಗಳ ನಿಯಂತ್ರಣಕ್ಕೆ ಪಟ್ಟಣದಲ್ಲಿ ಪೊಲೀಸ್ ಠಾಣೆ ಅಗತ್ಯವಾಗಿದೆ.
ನಾಲತವಾಡದವರೇ ಆದ ಕ್ಷೇತ್ರದ ಶಾಸಕ ಸಿ.ಎಸ್.ನಾಡಗೌಡ ಅವರು ಪಟ್ಟಣದಲ್ಲಿ ಪೂರ್ಣ ಪ್ರಮಾಣದ ಪೊಲೀಸ್ ಠಾಣೆ ಆರಂಭಕ್ಕೆ ಆದ್ಯತೆ ನೀಡಲಿದ್ದಾರೆ ಎಂಬ ವಿಶ್ವಾಸ ಜನರಲ್ಲಿ ಮನೆ ಮಾಡಿದೆ.
ನಾಲತವಾಡ 2014ರಲ್ಲಿ ಪಟ್ಟಣ ಪಂಚಾಯಿತಿಯಾಗಿ ಪರಿವರ್ತನೆ ಹೊಂದಿದೆ. ಆದರೆ, ಜನಸಂಖ್ಯೆ ಹಾಗೂ ವಾಹನ ದಟ್ಟಣೆಗೆ ತಕ್ಕಂತೆ ಪೊಲೀಸ್ ವ್ಯವಸ್ಥೆ ಇಲ್ಲ. ಪಟ್ಟಣಕ್ಕೆ ಪ್ರತ್ಯೇಕ ಹಾಗೂ ಗ್ರಾಮೀಣಕ್ಕೆ ಪ್ರತ್ಯೇಕ ಪೊಲೀಸ್ ಠಾಣೆಯ ಅಗತ್ಯತೆ ಬಹಳಷ್ಟಿದೆ.
ಕೃಷ್ಣಾ ಮೇಲ್ದಂಡೆ ಯೋಜನೆಯಲ್ಲಿ ಮುಳುಗಿದ ಗ್ರಾಮಗಳಾದ ಬಿಜ್ಜೂರ, ಸುಲ್ತಾನಪುರ, ಖಾನಾಪುರ, ಕಾನಿಕೇರಿ, ಅಯ್ಯನಗುಡಿ, ಚಿಕ್ಕ ಬಿಜ್ಜೂರ, ಲೊಟಗೇರಿ, ಘಾಳಪೂಜಿ, ಟಕ್ಕಳಕಿ, ಇಂಗಳಗಿ, ಬಲದಿನ್ನಿ, ಕಾರಕೂರ, ರಕ್ಕಸಗಿ, ಬಂಗಾರಗುಂಡ, ವೀರೇಶನಗರ, ನಾಗಬೇನಾಳ ತಾಂಡಾ, ಆರೇಶಂಕರ, ನಾಗಬೇನಾಳ ಗ್ರಾಮಗಳಿಗೆ ಪಟ್ಟಣದಿಂದ ಸುಮಾರು 15 ಕಿ.ಮೀ. ವ್ಯಾಪ್ತಿಯಲ್ಲಿ ಪುನರ್ವಸತಿ ಕಲ್ಪಿಸಲಾಗಿದೆ. ಪ್ರತ್ಯೇಕ ಗ್ರಾಮಗಳಾಗಿದ್ದರೂ ಪಟ್ಟಣದ ವ್ಯಾಪ್ತಿಯಲ್ಲಿವೆ. ಪಟ್ಟಣ ಬೆಳೆಯುತ್ತಿದೆ. 20ಕ್ಕೂ ಹೆಚ್ಚು ಬಡಾವಣೆಗಳು ತಲೆಯತ್ತಿ ನಿಂತಿವೆ. ಇಲ್ಲಿ ಸರ್ಕಾರಿ ಹಾಗೂ ಖಾಸಗಿ ಸೇರಿದಂತೆ ಸುಮಾರು 35 ಶಿಕ್ಷಣ ಸಂಸ್ಥೆಗಳು, 30ಕ್ಕೂ ಅಧಿಕ ವಿವಿಧ ರೀತಿಯ ಸಂಘ, ಸಂಸ್ಥೆಗಳು ಕ್ರಿಯಾಶೀಲವಾಗಿವೆ. ಕಬ್ಬಿನ ಬೆಳೆಯ ಸಲುವಾಗಿ, ಕಾಲುವೆ ನೀರಿಗಾಗಿ ಹಾಗೂ ಇನ್ನುಳಿದ ನಾನಾ ಕಾರಣ ಹೋರಾಟ, ಪ್ರತಿಭಟನೆ ನಡೆಯುತ್ತಲೆ ಇರುತ್ತವೆ. ಅದಕ್ಕಾಗಿ ಇಲ್ಲಿ ಪಿಎಸ್ಐ ಹಾಗೂ ಎಎಸ್ಐ ಒಳಗೊಂಡ ದೊಡ್ಡ ಪೊಲೀಸ್ ಠಾಣೆಯ ಅಗತ್ಯತೆ ಇದೆ.
ಪಟ್ಟಣದಲ್ಲಿ ವಿಜಯಪುರ, ಯಾದಗಿರಿ ಹಾಗೂ ರಾಯಚೂರ ರಾಜ್ಯ ಹೆದ್ದಾರಿಗಳಿವೆ. ಸಮೀಪದಲ್ಲೇ ಸಕ್ಕರೆ ಕಾರ್ಖಾನೆ, ಬೃಹತ್ ಎಣ್ಣೆ ಉದ್ಯಮಗಳು ಇರುವುದರಿಂದ ಜನರ, ಕಾರ್ಮಿಕ ವಾಹನ ಸಂಖ್ಯೆ ಅಧಿಕವಾಗುತ್ತ ನಡೆದಿದೆ. ಕಬ್ಬು ಕಟಾವು ಹಂಗಾಮಿನಲ್ಲಿ 5 ಸಾವಿರಕ್ಕೂ ಅಧಿಕ ಕೂಲಿ ಕಾರ್ಮಿಕರು, 500ಕ್ಕೂ ಅಧಿಕ ಕಬ್ಬು ತುಂಬುವ ಟ್ರ್ಯಾಕ್ಟರ್ ಮಹಾರಾಷ್ಟ್ರದಿಂದ ಬರುತ್ತಾರೆ. ಸಮೀಪದಲ್ಲೆ ಆಂಧ್ರಪ್ರದೇಶ ಮತ್ತು ತೆಲಂಗಾಣಕ್ಕೆ ಸಂಪರ್ಕ ಕಲ್ಪಿಸುವ ಹೆದ್ದಾರಿಗಳಿವೆ. ಕೃಷ್ಣಾ ನದಿಗೆ ನಿರ್ಮಿಸಿರುವ ಬಸವಸಾಗರ ಜಲಾಶಯವೂ ಹತ್ತಿರ ಇದೆ. 40 ಹಳ್ಳಿಗಳ ಹೋಬಳಿ ಕೇಂದ್ರವಾದ್ದರಿಂದ, ಹಬ್ಬ ಜಾತ್ರೆಗಳಿಗೆ, ಮದುವೆಯ ಜವಳಿ ಹಾಗೂ ಬಂಗಾರ ಖರೀದಿ ಜೋರಾಗಿರುತ್ತದೆ. ಇದರಿಂದ ಸಹಜವಾಗಿ ಸಂಚಾರ ದಟ್ಟಣೆ ಅಧಿಕವಾಗುತ್ತದೆ.
ಅಪಘಾತಗಳು ನಿರಂತರವಾಗಿದ್ದು, ಪೊಲೀಸರು ಸಂಚಾರ ನಿಯಂತ್ರಿಸಲು ಹರಸಹಾಸ ಪಡುತ್ತಿದ್ದಾರೆ. ಸೋಮವಾರ ಸಂತೆಯ ದಿನದಂದು ಮುಖ್ಯ ಬಜಾರದಲ್ಲಿ ಜನದಟ್ಟಣೆಯ ಸನ್ನಿವೇಶ ಉಸಿರು ಕಟ್ಟಿಸುವ ಸ್ಥಿತಿಯಲ್ಲಿರುತ್ತದೆ. ಯಾರ ಜೇಬನ್ನು ಯಾರು ತುಂಬಿಸುತ್ತಾರೊ ದೇವರೇ ಬಲ್ಲ. ಈಗಿರುವ ಮೂವರು ಪೊಲೀಸ್ ಸಿಬ್ಬಂದಿ ಒತ್ತಡದಲ್ಲಿ ಕೆಲಸ ಮಾಡುತ್ತಾರೆ. ಕೃಷ್ಣಾ ನದಿ ತೀರದ ಗ್ರಾಮೀಣದಲ್ಲಿ ಹಲವಾರು ಪ್ರಕರಣ ನಡೆಯುತ್ತಲೆ ಇರುತ್ತವೆ. ಪಟ್ಟಣ ಹಾಗೂ ಗ್ರಾಮೀಣಕ್ಕೆ ಹೊರಠಾಣೆ ಒಂದೇ ಇರುವುದರಿಂದ ನಿತ್ಯ ಹಲವಾರು ಜನರು ನ್ಯಾಯಕ್ಕಾಗಿ ಬರುವುದರಿಂದ ಪಟ್ಟಣ ಹಾಗೂ ಗ್ರಾಮೀಣ ಭಾಗ ನಿಭಾಯಿಸಲಾಗದೇ ಇರುವುದರಿಂದ ಜನರಿಗೆ ಪರಿಣಾಮಕಾರಿ ಕರ್ತವ್ಯ ನಿರ್ವಹಿಸಲು ಸಾಧ್ಯವಾಗದೇ ಇರುವುದರಿಂದ ಇಲ್ಲಿನ ಪಟ್ಟಣಕ್ಕೆ ಪೊಲೀಸ್ ಠಾಣೆ ಅಗತ್ಯವಿದೆ ಎಂಬ ಮಾತು ವ್ಯಾಪಕವಾಗಿ ಕೇಳಿ ಬರುತ್ತಿದೆ.
ನಾಲತವಾಡದಲ್ಲಿ ಸದ್ಯ ಹೊರ ಠಾಣೆ ಇದೆ. ಪೂರ್ಣ ಪ್ರಮಾಣದ ಠಾಣೆ ಅಗತ್ಯ ಇದೆಯೇ ಎಂಬುದರ ಕುರಿತು ಪರಿಶೀಲಿಸಿ ಅಗತ್ಯ ಇದ್ದರೆ ಆರಂಭಿಸಲು ಕ್ರಮಕೈಗೊಳ್ಳಲಾಗುವುದುಲಕ್ಷ್ಮಣ ನಿಂಬರಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ
ನಾಲತವಾಡ ಪಟ್ಟಣ ಜಿಲ್ಲೆಯಲ್ಲೇ ಅಧಿಕ ಪ್ರಮಾಣದಲ್ಲಿ ಬೆಳೆಯುತ್ತಿದ್ದು ಅದಕ್ಕೆ ಅನುಗುಣವಾಗಿ ಅಪರಾಧಿ ಕೃತ್ಯಗಳೂ ಹೆಚ್ಚಾಗಿವೆ ಕೂಡಲೇ ಪೊಲೀಸ್ ಠಾಣೆ ಆಗಬೇಕುಬಿ.ಎಂ.ತಾಳಿಕೋಟಿಅಧ್ಯಕ್ಷ ನಾಲತವಾಡ ಪಟ್ಟಣ ತಾಲ್ಲೂಕು ಹೋರಾಟ ಸಮಿತಿ
ರಾತ್ರಿಯಾದರೆ ಯಾವ ಓಣಿಯಲ್ಲಿ ಕಳ್ಳತನವಾಗುತ್ತದೆ ಎಂಬ ಭಯ ಕಾಡುತ್ತಿದೆ ಪಟ್ಟಣದ ವ್ಯಾಪ್ತಿ ಬೃಹತ್ ಆಗಿದ್ದು ಒಬ್ಬರೇ ಪೇದೆ ರಾತ್ರಿ ಗಸ್ತು ತಿರುಗುವುದು ಭಯವಾಗುತ್ತಿದೆ. ಠಾಣಿ ಮೇಲ್ದರ್ಜೆಗೆ ಏರಿಸಿ ಸಿಬ್ಬಂದಿ ಹೆಚ್ಚಳವಾಗಬೇಕು.ಬಸವರಾಜ ಗಂಗನಗೌಡ್ರ ಗಡ್ಡಿ ಉಪಾಧ್ಯಕ್ಷ ಪಟ್ಟಣ ಪಂಚಾಯಿತಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.