ADVERTISEMENT

ಶಹಾಪೇಟೆ ಜನರ ಸಮಸ್ಯೆಗೆ ಮುಕ್ತಿ ಎಂದು?

ಮಳೆ ಬಂದರೆ ಭಯಪಡುವಂತಹ ಸ್ಥಿತಿ l ಮನೆಯೊಳಗೆ ನುಗ್ಗುವ ನೀರು l ನಿವಾಸಿಗಳಿಗೆ ಹುಳುಹುಪ್ಪಟೆ ಭಯ

ಸುಭಾಸ ಎಸ್.ಮಂಗಳೂರ
Published 14 ಅಕ್ಟೋಬರ್ 2019, 8:54 IST
Last Updated 14 ಅಕ್ಟೋಬರ್ 2019, 8:54 IST
ವಿಜಯಪುರದ ಶಹಾಪೇಟೆಯಲ್ಲಿರುವ ಚರಂಡಿ ನೆಲಮಟ್ಟದಲ್ಲಿರುವುದು  –ಪ್ರಜಾವಾಣಿ ಚಿತ್ರಗಳು/ಸಂಜೀವ ಅಕ್ಕಿ
ವಿಜಯಪುರದ ಶಹಾಪೇಟೆಯಲ್ಲಿರುವ ಚರಂಡಿ ನೆಲಮಟ್ಟದಲ್ಲಿರುವುದು  –ಪ್ರಜಾವಾಣಿ ಚಿತ್ರಗಳು/ಸಂಜೀವ ಅಕ್ಕಿ   

ವಿಜಯಪುರ: ಸಕಾಲಕ್ಕೆ ಮಳೆ ಬಾರದಿದ್ದರೆ ದೇವರ ಮೊರೆ ಹೋಗುವ ಜನರ ಮಧ್ಯೆ ಮಳೆ ಬಂದರೆ ಭಯಪಡುವಂತಹ ಸ್ಥಿತಿ ಇಲ್ಲಿದೆ. ಅರ್ಧ ಗಂಟೆ ಮಳೆ ಸುರಿದರೂ ಸಾಕು, ಮಳೆ ನೀರು ಮನೆಯೊಳಗೆ ನುಗ್ಗುತ್ತದೆ.

ಇದು ನಗರದ ಮಧ್ಯ ಭಾಗದಲ್ಲಿರುವ ಶಹಾಪೇಟೆಯ ಚಿತ್ರಣ. ಇಲ್ಲಿರುವುದು ಪ್ರಮುಖವಾಗಿ ಮೂರೇ ಮೂರು ಸಮಸ್ಯೆ. ಈಗಿರುವ ಚರಂಡಿಗಳನ್ನು ನಿಯಮಿತವಾಗಿ ಸ್ವಚ್ಛಗೊಳಿಸದಿರುವುದು, ಹೊಸದಾಗಿ ಚರಂಡಿಗಳನ್ನು ನಿರ್ಮಿಸಬೇಕಿರುವುದು ಮತ್ತು ಮಳೆ ನೀರು ಸರಾಗವಾಗಿ ಹರಿದು ಹೋಗುವಂತೆ ಮಾಡದಿರುವುದು.

‘ಈ ಮೂರು ಬೇಡಿಕೆಗಳನ್ನು ಇಟ್ಟುಕೊಂಡು ಅನೇಕ ಬಾರಿ ಪಾಲಿಕೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಎಲ್ಲರೂ ಬರುತ್ತಾರೆ, ನೋಡುತ್ತಾರೆ. ಶಾಶ್ವತ ಪರಿಹಾರದ ಭರವಸೆ ನೀಡುತ್ತಾರೆ, ಹೋಗುತ್ತಾರೆ ಅಷ್ಟೆ’ ಎಂದು ಇಲ್ಲಿಯ ನಿವಾಸಿಗಳು ದೂರುತ್ತಾರೆ.

ADVERTISEMENT

ನೀರಿನ ಸಮಸ್ಯೆ: ಶಹಾಪೇಟೆಯ ಕೆಲವು ಭಾಗಗಳಲ್ಲಿ 24x7 ನೀರಿನ ವ್ಯವಸ್ಥೆ ಇದೆ. ಇನ್ನು ಕೆಲವೆಡೆ ಇಲ್ಲ. 24x7 ವ್ಯವಸ್ಥೆ ಇದ್ದರೂ ನೀರು ಬರುವುದು ಮಾತ್ರ 12 ದಿನಕ್ಕೊಮ್ಮೆಯೇ. ಮಳೆ ಆದ ಸಂದರ್ಭದಲ್ಲಿ ನೀರು ಬಿಟ್ಟರೆ ಇಲ್ಲಿಯ ಜನರ ಗೋಳು ಹೇಳತೀರದು. ನೀರು ಹಿಡಿಯಲು ಹರಸಾಹಸ ಪಡುವ ಸ್ಥಿತಿ.

‘ಒಂದೆಡೆ ಮಳೆ ನೀರನ್ನು ಆಚೆ ಹಾಕುವುದು, ಇನ್ನೊಂದೆಡೆ ಕುಡಿಯುವ ನೀರನ್ನು ತುಂಬಿಸುವುದು. ಎರಡೂ ಕೆಲಸಗಳನ್ನು ಏಕಕಾಲಕ್ಕೆ ಮಾಡುವಂತಹ ಸ್ಥಿತಿ ನಿರ್ಮಾಣವಾಗುತ್ತದೆ’ ಎಂದು ಇಲ್ಲಿಯ ಜನರು ಆಕ್ರೋಶ ವ್ಯಕ್ತಪಡಿಸುತ್ತಾರೆ.

‘ಶಹಾಪೇಟೆಯು ವಾರ್ಡ್ ನಂ.13 ಮತ್ತು 14ರಲ್ಲಿ ಹಂಚಿ ಹೋಗಿದೆ. ರಸ್ತೆ, ಚರಂಡಿ ಕೆಲವೆಡೆ ಅಪೂರ್ಣಗೊಂಡಿವೆ. ಮಳೆ ನೀರು ಸರಾಗವಾಗಿ ಹರಿದು ಹೋಗಲು ವ್ಯವಸ್ಥೆ ಇಲ್ಲ. ಹಳೆಯ ಮನೆಗಳಲ್ಲಿ ಸಂಪ್ ಇಲ್ಲ. ಹೊಸದಾಗಿ ಮನೆ ಕಟ್ಟಿಸಿಕೊಂಡವರು ದೊಡ್ಡ ಸಂಪ್‌ಗಳನ್ನು ನಿರ್ಮಿಸಿಕೊಂಡಿದ್ದಾರೆ. ಇದರಿಂದಾಗಿ ನೀರು ಸಂಗ್ರಹಿಸಲು ಬಹಳಷ್ಟು ತೊಂದರೆ ಅನುಭವಿಸುವಂತಾಗಿದೆ’ ಎಂದು ಹೆಸರು ಹೇಳಲು ಇಚ್ಛಿಸದ ಇಲ್ಲಿನ ನಿವಾಸಿಯೊಬ್ಬರು ಹೇಳಿದರು.

‘ಮಳೆ ನೀರು ಮನೆ ಒಳಗೆ ನುಗ್ಗುತ್ತದೆ. ಸಂಚಾರ ದಟ್ಟಣೆಯೂ ಹೆಚ್ಚಾಗಿದೆ. ಸಹಿಸಲು ಆಗದಷ್ಟು ದೂಳು. ಮಳೆ ಆದರೆ ಅಂಗಡಿಯೊಳಗೂ ನೀರು ನುಗ್ಗುತ್ತದೆ. ಈಚೆಗೆ ಸುರಿದ ಮಳೆಯಿಂದಾಗಿ ಮನೆಯೊಂದರಲ್ಲಿ ನೀರು ನುಗ್ಗಿದ್ದರಿಂದ ಬೆಳ್ಳುಳ್ಳಿ, ಬಿಳಿಜೋಳ ತೊಯ್ದು ಹಾಳಾಗಿವೆ. ಇದಕ್ಕೆಲ್ಲ ಯಾರು ಹೊಣೆ’ ಎಂದು ಅವರು ಪ್ರಶ್ನಿಸಿದರು.

‘ಇಂಡಿ ರಸ್ತೆ, ಬಾರಾಕಮಾನ್, ಗಣಪತಿ ಚೌಕ್ ಸೇರಿದಂತೆ ಸುಮಾರು 800ರಿಂದ 900 ಮನೆಗಳು ಈ ಪ್ರದೇಶದಲ್ಲಿವೆ. ಶಿವಾಜಿ ವೃತ್ತ, ಸಿದ್ಧೇಶ್ವರ ದೇವಸ್ಥಾನದಿಂದ ಮಳೆ ನೀರು ಈ ಭಾಗಕ್ಕೆ ಹರಿದು ಬರುತ್ತದೆ. ಆದ್ದರಿಂದ ಪಾಲಿಕೆ ಅಧಿಕಾರಿಗಳು ಕೂಡಲೇ ಇತ್ತ ಗಮನಹರಿಸಬೇಕು. ಮಳೆ ನೀರು ಹರಿದು ಹೋಗಲು ಪ್ರತ್ಯೇಕ ಚರಂಡಿಯನ್ನು ನಿರ್ಮಿಸಬೇಕು. ಅಪೂರ್ಣ ರಸ್ತೆಗಳನ್ನು ಪೂರ್ಣಗೊಳಿಸಬೇಕು. ಜನರ ಗೋಳನ್ನು ತಪ್ಪಿಸಬೇಕು’ ಎಂದು ನಿವಾಸಿಗಳು ಆಗ್ರಹಿಸುತ್ತಾರೆ.

'ಮಳೆ ನೀರು ಹರಿದು ಹೋಗಲು ಪ್ರತ್ಯೇಕ ಚರಂಡಿ ನಿರ್ಮಿಸಲಾಗುವುದು. ಹೊಸ ರಸ್ತೆ ನಿರ್ಮಾಣದ ಸಂದರ್ಭದಲ್ಲಿ ಚರಂಡಿ ನಿರ್ಮಿಸಿದ ಬಳಿಕವೇ ರಸ್ತೆ ನಿರ್ಮಿಸಲಾಗುವುದು.
-ಹರ್ಷ ಶೆಟ್ಟಿ, ಆಯುಕ್ತ, ಮಹಾನಗರ ಪಾಲಿಕೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.