ಮುದ್ದೇಬಿಹಾಳ: ನಷ್ಟದ ಕಾರಣಕ್ಕೆ ಮಾರ್ಚ್‌ನಿಂದ ನಂದಿನಿ ಹಾಲಿನ ‘ಸಮೃದ್ಧಿ’ ಬ್ರಾಂಡ್ ಸ್ಥಗಿತಗೊಳಿಸಿದ್ದನ್ನು ಮತ್ತೆ ಕಳೆದ ಎರಡು ದಿನಗಳಿಂದ ಅವಳಿ ಜಿಲ್ಲೆಯಲ್ಲಿ ಮಾರಾಟಕ್ಕೆ ಚಾಲನೆ ನೀಡಲಾಗಿದೆ. ‘ಸಮೃದ್ಧಿ’ ಹಾಲಿಗೆ ಬೇಡಿಕೆ ಇರಿಸಿದ್ದ ಗ್ರಾಹಕರಿಗೆ ವಿಮುಲ್ ಸ್ಪಂದಿಸಿದೆ.
‘ಸಮೃದ್ಧಿ’ ಹಾಲನ್ನು ಬದಲಿಸಿ ನಂದಿನಿ ಎಮ್ಮೆ ಹಾಲು ಪರಿಚಯಿಸಲಾಗಿತ್ತು. ಇದರಿಂದ ಹೆಚ್ಚಿನ ಜನರು ಈ ಹಾಲು ಖರೀದಿಸಲು ಹಿಂದೇಟು ಹಾಕಿದ್ದು ‘ಶುಭಂ’ ಹಾಲಿನ ಮೊರೆ ಹೋಗಿದ್ದರು. ಆದರೆ, ಅಧಿಕಾರ ವಹಿಸಿಕೊಂಡ ಅಲ್ಪ ಅವಧಿಯಲ್ಲಿಯೇ ವ್ಯವಸ್ಥಾಪಕ ನಿರ್ದೇಶಕ ಡಿ.ಟಿ.ಶಿವಶಂಕರಸ್ವಾಮಿ ಅವರು ‘ಸಮೃದ್ಧಿ’ ಹಾಲಿನ ಮಾರುಕಟ್ಟೆ ಕುಸಿಯದಿರಲು ನಿಗಮದ ಮೇಲಾಧಿಕಾರಿಗಳೊಂದಿಗೆ ಚರ್ಚೆ ಮಾಡಿ ಮರಳಿ ಅವಳಿ ಜಿಲ್ಲೆಯ ಗ್ರಾಹಕರಿಗೆ ಸಮೃದ್ಧಿ ಹಾಲು ಮಾರಾಟಕ್ಕೆ ತಂದು ಗ್ರಾಹಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಈ ಕುರಿತು ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ವಿಮುಲ್ ವ್ಯವಸ್ಥಾಪಕ ನಿರ್ದೇಶಕ ಡಿ.ಟಿ.ಶಿವಶಂಕರಸ್ವಾಮಿ, ನಮ್ಮ ಭಾಗದಲ್ಲಿ ಉತ್ಪಾದನೆಯಾಗುವ ಹಾಲನ್ನು 20 ಸಾವಿರ ಲೀಟರ್ ಸಗಟು ರೂಪದಲ್ಲಿ ಆಂಧ್ರಪ್ರದೇಶಕ್ಕೆ ಮಾರಾಟ ಮಾಡಲಾಗುತ್ತಿದೆ. ಅವಳಿ ಜಿಲ್ಲೆಯಲ್ಲಿ 1.56 ಲಕ್ಷ ಲೀಟರ್ ಹಾಲು ಉತ್ಪಾನೆಯಾಗುತ್ತಿದ್ದು, ಅದರಲ್ಲಿ 90 ಸಾವಿರ ಲೀಟರ್ ಹಾಲಿನ ರೂಪಲದಲ್ಲಿ, 15 ಸಾವಿರ ಲೀಟರ್ ಮೊಸರಿನ ರೂಪದಲ್ಲಿ ಮಾರಾಟವಾಗುತ್ತಿದೆ. ಈ ಮುಂಚೆ ಸಮೃದ್ಧಿ ಹಾಲಿನ ಮಾರುಕಟ್ಟೆಯನ್ನು ಬೇರೆ ಕಂಪನಿಯವರು ಆವರಿಸಿಕೊಳ್ಳವುದು ಮನಗಂಡು ಮತ್ತೆ ಸಮೃದ್ಧಿ ಹಾಲನ್ನು ಮಾರುಕಟ್ಟೆಗೆ ಪೂರೈಸಲು ಕ್ರಮ ಜರುಗಿಸಲಾಗಿದೆ. ಆಂಧ್ರಕ್ಕೆ ನೇರವಾಗಿ ಹಾಲು ಮಾರಾಟ ಮಾಡುತ್ತಿರುವ ಹಿನ್ನೆಲೆಯಲ್ಲಿ ನಷ್ಟದ ಪ್ರಮಾಣ ಅಲ್ಪಪ್ರಮಾಣದಲ್ಲಿ ತಗ್ಗಿದೆ ಎಂದು ಹೇಳಿದರು.
- ನಂದಿನಿ ಹಾಲು ಅದರ ಉತ್ಪನ್ನಗಳು ನೈಸರ್ಗಿಕವಾಗಿದ್ದು ಯಾವುದೇ ರಾಸಾಯನಿಕ ಸೇರಿಸುವುದಿಲ್ಲ. ಗ್ರಾಹಕರ ಬಹುಬೇಡಿಕೆಯ ಬ್ರಾಂಡ್ ನಂದಿನಿಯಾಗಿದೆ. ಅದರ ಗುಣಮಟ್ಟಕ್ಕೆ ನಿರಂತರ ನಿಗಾವಹಿಸಲಾಗುವುದು.
-ಮೋಹನ್ ಶಿಂಧೆ ನಂದಿನಿ ಮಾರುಕಟ್ಟೆ ಅಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.