
ವಿಜಯಪುರ: ವೀರ ರಾಣಿ ಚನ್ನಮ್ಮ ಅವರ ಮೂರ್ತಿ ಅನಾವರಣಕ್ಕೆ ಯಾವ ವಿರೋಧವೂ ಇಲ್ಲ, ಕಾರ್ಯಕ್ರಮಕ್ಕೆ ಆಕ್ಷೇಪ ವ್ಯಕ್ತಪಡಿಸಿದವರಿಗೆ ಸಮಾಜದ ಗಣ್ಯರು, ಸ್ವಾಮೀಜಿಗಳು ಮನವೊಲಿಸುವ ಪ್ರಯತ್ನ ಮಾಡಿದ್ದಾರೆ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಉಮೇಶ ಕೋಳಕೂರ ಹೇಳಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಜಂಬಗಿಯಲ್ಲಿರುವ ರಾಣಿ ಚೆನ್ನಮ್ಮ ಅವರ ವಂಶಜರಾದ ಜಂಬಗಿಯ ದೇಶಮುಖ ಅವರ ನಿವಾಸದಿಂದ ಬೆಳಿಗ್ಗೆ 6 ರಿಂದ ವೀರ ಜ್ಯೋತಿಯೂ ಹೊರಟು ಸಿದ್ದೇಶ್ವರ ದೇವಾಲಯಕ್ಕೆ ತಲುಪಲಿದೆ. ಸಿದ್ದೇಶ್ವರ ದೇವಾಲಯದಿಂದ ನೂರಾರು ಮಹಿಳೆಯರು ಪೂರ್ಣಕುಂಭ ಹೊತ್ತು ಈ ವೀರ ಜ್ಯೋತಿ ಮೆರವಣಿಗೆಯೊಂದಿಗೆ ಹೆಜ್ಜೆ ಹಾಕಲಿದ್ದು, ಈ ಮೆರವಣಿಗೆ ವಿವಿಧ ಪ್ರಮುಖ ಮಾರ್ಗಗಳಲ್ಲಿ ಸಂಚರಿಸಿ ರಾಣಿ ಚನ್ನಮ್ಮ ವೃತ್ತ (ಕೇಂದ್ರ ಬಸ್ ನಿಲ್ದಾಣ)ಕ್ಕೆ ತಲುಪಿ ಸಂಪನ್ನಗೊಳ್ಳಲಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಈ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ ಎಂದು ವಿವರಿಸಿದರು.
ಕೇಂದ್ರ ಬಸ್ ನಿಲ್ದಾಣದ ಎದುರು ಸುಂದರ ಹಾಗೂ ಭವ್ಯವಾದ ರಾಣಿ ಚನ್ನಮ್ಮ ಮೂರ್ತಿ ಅನಾವರಣ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಸೇರಿದಂತೆ ಹಲವಾರು ಸಚಿವರು, ಜನಪ್ರತಿನಿಧಿಗಳು, ಸಮಾಜದ ಮುಖಂಡರು ಭಾಗವಹಿಸಲಿದ್ದಾರೆ. ಒಟ್ಟು 32 ಎತ್ತರದ ಈ ಭವ್ಯ ಪ್ರತಿಮೆ ಜ.9 ರಂದು ಅನಾವರಣವಾಗಲಿದೆ. ಈ ಕಾರ್ಯಕ್ರಮದ ಅಂಗವಾಗಿ 100 ಅಡಿ ಎತ್ತರದ 24 ಗಂಟೆಗಳ ಕಾಲ ತ್ರಿವರ್ಣ ಧ್ವಜ ಹಾರಾಡುವ ನಿಟ್ಟಿನಲ್ಲಿ ಬೃಹತ್ ಧ್ವಜ ಸ್ತಂಭ ನಿರ್ಮಿಸಲಾಗಿದ್ದು, ಈ ಧ್ವಜಸ್ತಂಭದ ಅನಾವರಣ ಸಹ ನಡೆಯಲಿದೆ ಎಂದರು.
ಅಪೂರ್ವ ಇತಿಹಾಸವುಳ್ಳ ಹಾಗೂ ಅನೇಕ ಕಲಾವಿದರಿಗೆ ಕಲಾ ವಿದ್ವತ್ತು ಪ್ರದರ್ಶನಕ್ಕೆ ವೇದಿಕೆಯಾಗಿದ್ದ ಕಿತ್ತೂರ ರಾಣಿ ಚೆನ್ನಮ್ಮ ನಾಟ್ಯ ಮಂದಿರ ಪುನರುಜ್ಜೀವನ ಕಾರ್ಯ ಸಹ ಅದೇ ವೇಳೆ ನಡೆಯಲಿದೆ ಎಂದರು.
ಪ್ರಮುಖರಾದ ಎಸ್.ಎಸ್.ಆಲೂರ, ಡಿ.ಎಸ್. ಬಿರಾದಾರ, ಜಿ.ಜಿ.ಸಲಗರ, ಪುಟ್ಟು ಸಾವಳಗೊಳ, ಆರ್.ಜಿ.ಯರನಾಳ, ರವಿ ತೊರವಿ, ರಾಜುಗೌಡ ಪಾಟೀಲ, ವಿದ್ಯಾರಾಣಿ ತುಂಗಳ ಮೊದಲಾದವರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.