ADVERTISEMENT

ಶಬ್ದ, ವಾಯುಮಾಲಿನ್ಯ ಗಣನೀಯ ಇಳಿಕೆ

ದೀಪಾವಳಿ ಸಂದರ್ಭದಲ್ಲಿ ಶಬ್ದಗಳ ಮಾದರಿ ಸಂಗ್ರಹ: ಜಾಗೃತಿ ಮೂಡಿಸಿದ ಪರಿಣಾಮ

ಸುಭಾಸ ಎಸ್.ಮಂಗಳೂರ
Published 11 ನವೆಂಬರ್ 2019, 19:41 IST
Last Updated 11 ನವೆಂಬರ್ 2019, 19:41 IST

ವಿಜಯಪುರ: ಪಟಾಕಿ ಸಿಡಿಸುವುದರಿಂದ ಪರಿಸರಕ್ಕೆ ಉಂಟಾಗುವ ಹಾನಿ ಮತ್ತು ಮಾಲಿನ್ಯದ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದ ಪರಿಣಾಮ ಈ ಬಾರಿ ಶಬ್ದ ಮತ್ತು ವಾಯುಮಾಲಿನ್ಯದ ಪ್ರಮಾಣ ಬಹಳಷ್ಟು ಇಳಿಕೆಯಾಗಿದೆ.

ಶಬ್ದ ಮಾಲಿನ್ಯಕ್ಕೆ 125 ಡೆಸಿಬಲ್ಸ್‌ ಪ್ರಮಾಣವನ್ನು ನಿಗದಿಪಡಿಸಲಾಗಿದ್ದು, ಈ ಪ್ರಮಾಣವನ್ನು ದಾಟಿದರೆ ಅದನ್ನು ಶಬ್ದ ಮಾಲಿನ್ಯ ಎಂದು ಗುರುತಿಸಲಾಗುತ್ತದೆ. ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಮಹಾನಗರ ಪಾಲಿಕೆ ಅಧಿಕಾರಿಗಳು ಈ ಬಾರಿ ‘ಶಬ್ದ’ ಮತ್ತು ‘ಪರಿಸರ ಮಾಲಿನ್ಯ’ದ ಬಗ್ಗೆ ಸಾಕಷ್ಟು ಜಾಗೃತಿ ಮೂಡಿಸಿದ್ದರು.

ಸಾಮಾನ್ಯ ದಿನಗಳಲ್ಲಿ ನಗರ ಪ್ರದೇಶಗಳಲ್ಲಿ ಶಬ್ದ ಮಾಲಿನ್ಯದ ಪ್ರಮಾಣ 55ರಿಂದ 65 ಡೆಸಿಬಲ್ಸ್‌ ಇರುತ್ತದೆ. ಇಷ್ಟು ಪ್ರಮಾಣದ ಮಾಲಿನ್ಯವನ್ನು ಸಾಮಾನ್ಯ ಎಂದು ಗುರುತಿಸಲಾಗುತ್ತದೆ. ದೀಪಾವಳಿ ಸಂದರ್ಭದಲ್ಲಿ ಈ ಪ್ರಮಾಣ 125 ಡೆಸಿಬಲ್ಸ್‌ ದಾಟಬಾರದು ಎಂಬುದು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಹೇಳುತ್ತದೆ. ಅಂತೆಯೇ ಈ ಬಾರಿ ಗರಿಷ್ಠ ಶಬ್ದ ಮಾಲಿನ್ಯ ದಾಖಲಾಗಿದ್ದು 86 ಡೆಸಿಬಲ್ಸ್ ಮಾತ್ರ. 2018ರ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಗರಿಷ್ಠ 108 ಹಾಗೂ ಕನಿಷ್ಠ 81 ಡೆಸಿಬಲ್ಸ್‌ ಇತ್ತು. ಈ ವರ್ಷ ಗರಿಷ್ಠವೇ 86 ಡೆಸಿಬಲ್ಸ್ ಇರುವುದು ಸಾರ್ವಜನಿಕರು ನಿಟ್ಟುಸಿರು ಬಿಡುವಂತಾಗಿದೆ.

ADVERTISEMENT

‘ದೀಪಾವಳಿ ಹಬ್ಬದ ಸಂದರ್ಭದಲ್ಲಿ ಒಂದು ದಿನ ಮುಂಚಿತವಾಗಿ ಹಾಗೂ ನಂತರ ಮೂರು ದಿನ ಶಬ್ದದ ಮಾದರಿಯನ್ನು ಸಂಗ್ರಹಿಸಲಾಗಿತ್ತು. ಅಕ್ಟೋಬರ್ 21ರಂದು ಗರಿಷ್ಠ 68 ಹಾಗೂ ಕನಿಷ್ಠ 55 ಡೆಸಿಬಲ್ಸ್ ಶಬ್ದ ಮಾಲಿನ್ಯ ದಾಖಲಾಗಿದೆ. ಅಕ್ಟೋಬರ್ 27 ಮತ್ತು 28ರಂದು ಗರಿಷ್ಠ 84 ಹಾಗೂ ಕನಿಷ್ಠ 55 ಡೆಸಿಬಲ್ಸ್ ದಾಖಲಾಗಿದೆ’ ಎಂದು ಕರ್ನಾಟಕ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಜಿಲ್ಲಾ ಕಚೇರಿಯ ಕ್ಷೇತ್ರ ಸಹಾಯಕ ಶಶಿಧರ ಗೌಡರ ‘ಪ್ರಜಾವಾಣಿ’ಗೆ ತಿಳಿಸಿದರು.

‘ಶಬ್ದದ ಮಾದರಿಗಳನ್ನು ಬೆಳಗಾವಿಯ ಎಂಎಸ್‌ವಿ ಅನಾಲಿಟಿಕಲ್ ಲ್ಯಾಬರೋಟರಿಗೆ ಕಳುಹಿಸಲಾಗಿತ್ತು. ಈಗ ವರದಿ ಬಂದಿದ್ದು, ಜನರು ನಿಟ್ಟುಸಿರು ಬಿಡುವಂತಾಗಿದೆ. ಅದೇ ರೀತಿ ವಾಯು ಮಾಲಿನ್ಯದ ಪ್ರಮಾಣವೂ ನಿಗದಿಗಿಂತ ಕಡಿಮೆಯೇ ಇದೆ. ವಿಜಯಪುರ ನಗರದಲ್ಲಿ ದೂಳು ಬಿಟ್ಟರೆ ಬೇರೆ ರೀತಿಯ ಮಾಲಿನ್ಯದಿಂದ ಅಷ್ಟಾಗಿ ತೊಂದರೆ ಇಲ್ಲ’ ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.