ADVERTISEMENT

ನೀತಿ ಸಂಹಿತೆ ಪಾಲಿಸಲು ಸೂಚನೆ- ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಭೆ

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2023, 14:22 IST
Last Updated 1 ಏಪ್ರಿಲ್ 2023, 14:22 IST

ವಿಜಯಪುರ: ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಚುನಾವಣಾ ಆಯೋಗವು ಜಾರಿಗೊಳಿಸಿರುವ ನೀತಿ ಸಂಹಿತೆಯನ್ನು ತಪ್ಪದೇ ಪಾಲಿಸುವಂತೆ ವಿವಿಧ ರಾಜಕೀಯ ಪಕ್ಷದ ಪ್ರತಿನಿಧಿಗಳಿಗೆ ವಿಜಯಪುರ ನಗರ ವಿಧಾನಸಭಾ ಮತಕ್ಷೇತ್ರದ ಚುನಾವಣಾಧಿಕಾರಿ ಉಪವಿಭಾಗಾಧಿಕಾರಿ ಕ್ಯಾಪ್ಟನ್ ಮಹೇಶ ಮಾಲಗಿತ್ತಿ ಸೂಚನೆ ನೀಡಿದರು.

ವಿಜಯಪುರ ನಗರ ಮತಕ್ಷೇತ್ರದ ಚುನಾವಣಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿದ ಅವರು, ವಿಧಾನಸಭಾ ಸಾರ್ವತ್ರಿಕ ಚುನಾವಣೆಗೆ ಏಪ್ರಿಲ್ 13ರಂದು ಅಧಿಸೂಚನೆ ಹೊರಡಿಸಲಾಗುವುದು ಎಂದರು.

ನಾಮಪತ್ರ ಸಲ್ಲಿಸಲು ಏಪ್ರಿಲ್ 20 ಕೊನೆಯ ದಿನಾಂಕವಾಗಿದೆ. ಏಪ್ರಿಲ್ 21ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಏಪ್ರಿಲ್ 24ರಂದು ನಾಮಪತ್ರಗಳನ್ನು ಹಿಂತೆಗೆದುಕೊಳ್ಳಲು ಕೊನೆಯ ದಿನವಾಗಿದೆ. ಮೇ 10ರಂದು ಮತದಾನ, ಮೇ.13ರಂದು ಮತ ಎಣಿಕೆ ನಡೆಯಲಿದೆ ಎಂದು ತಿಳಿಸಿದರು

ADVERTISEMENT

ಪ್ರಸ್ತುತ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಎಲ್ಲರೂ ಚುನಾವಣಾ ಆಯೋಗದ ನಿರ್ದೇಶನಗಳನ್ನು ಪಾಲಿಸಬೇಕು ಎಂದು ಹೇಳಿದರು.

ವಿಜಯಪುರ ನಗರ ಮತಕ್ಷೇತ್ರ ವ್ಯಾಪ್ತಿಯಲ್ಲಿ 269 ಮತಗಟ್ಟೆಳಿದ್ದು, ಈ ಪೈಕಿ 118 ಸೂಕ್ಷ್ಮ ಮತಗಟ್ಟೆಗಳಾಗಿವೆ. 1,37,599 ಪುರುಷ, 1,40,056 ಮಹಿಳಾ ಮತದಾರರು ಹಾಗೂ 93 ಇತರೆ ಸೇರಿದಂತೆ ಒಟ್ಟು 2,77,748 ಮತದಾರರಿದ್ದಾರೆ ಎಂದು ಹೇಳಿದರು.

ಸುಗಮ ಚುನಾವಣೆಗಾಗಿ ನಗರ ಮತಕ್ಷೇತ್ರ ವ್ಯಾಪ್ತಿಯಲ್ಲಿ 19 ಸೆಕ್ಟರ್ ಅಧಿಕಾರಿಗಳು, 9 ಫ್ಲೈಯಿಂಗ್ ಸ್ಕ್ವಾಡ್, 9 ಎಸ್‍ಎಸ್‍ಟಿ ತಂಡ, 3 ವಿಡಿಯೋ ಸರ್ವೇಲೆನ್ಸ್ ತಂಡ, 1 ವಿವಿಟಿ ತಂಡ, 1 ಲೆಕ್ಕಪತ್ರಗಳ ತಂಡಗಳನ್ನು ನಿಯೋಜಿಸಲಾಗಿದೆ. ಯಾವುದೇ ಅಕ್ರಮಕ್ಕೆ ಅವಕಾಶ ನೀಡುವುದಿಲ್ಲ, ನ್ಯಾಯ ಸಮ್ಮತ ಹಾಗೂ ಪಾರದರ್ಶಕ ಚುನಾವಣೆಗೆ ಸಹಕರಿಸುವಂತೆ ಅವರು ಮನವಿ ಮಾಡಿದರು.

ಸಹಾಯಕ ಚುನಾವಣಾಧಿಕಾರಿಯಾದ ತಹಶೀಲ್ದಾರ್‌ ಸುರೇಶ ಮುಂಜೆ, ರೇಣುಕಮ್ಮ, ಬಿಎಸ್‍ಪಿಯ ನಿತೇಶ ತೊರವಿ, ಬಿಜೆಪಿಯ ಸಿದ್ದು ಬೆಲ್ಲದ, ಕಾಂಗ್ರೆಸ್‍ನ ಚನ್ನಬಸಪ್ಪ ನಾಮದಾರಿ, ಎಚ್.ಎಸ್.ದಳವಾಯಿ, ಮಚೀಂದ್ರ, ಜೆಡಿಎಸ್‍ನ ಎಂ.ಕೆ.ಬಾಗಾಯತ್, ಎಸ್‍ಡಿಪಿಐನ ನಿಸಾರ ಅಹ್ಮದ ಮನಿಯಾರ ಸಭೆಯಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.