ADVERTISEMENT

ಪ್ರೋತ್ಸಾಹಧನದ ನಿರೀಕ್ಷೆಯಲ್ಲಿ ಬೆಳೆಗಾರರು..!

ವಿಜಯಪುರ ಜಿಲ್ಲೆಯ 751 ರೈತರಿಂದ 11,520 ಕ್ವಿಂಟಲ್ ಉಳ್ಳಾಗಡ್ಡಿ ಖರೀದಿ ಸರ್ಕಾರದ ಯೋಜನೆಯಡಿ

ಡಿ.ಬಿ, ನಾಗರಾಜ
Published 14 ಮಾರ್ಚ್ 2019, 19:46 IST
Last Updated 14 ಮಾರ್ಚ್ 2019, 19:46 IST
ವಿಜಯಪುರ ಎಪಿಎಂಸಿಯಲ್ಲಿ ನಡೆದ ಉಳ್ಳಾಗಡ್ಡಿ ವಹಿವಾಟಿನ ಚಿತ್ರಣಪ್ರಜಾವಾಣಿ ಚಿತ್ರ
ವಿಜಯಪುರ ಎಪಿಎಂಸಿಯಲ್ಲಿ ನಡೆದ ಉಳ್ಳಾಗಡ್ಡಿ ವಹಿವಾಟಿನ ಚಿತ್ರಣಪ್ರಜಾವಾಣಿ ಚಿತ್ರ   

ವಿಜಯಪುರ: ಉಳ್ಳಾಗಡ್ಡಿ ಧಾರಣೆ ಮುಕ್ತ ಮಾರುಕಟ್ಟೆಯಲ್ಲಿ ಪಾತಾಳಮುಖಿಯಾದ ಸಂದರ್ಭ, ಬೆಳೆಗಾರರ ನೆರವಿಗೆ ಧಾವಿಸಿದ್ದ ರಾಜ್ಯ ಸರ್ಕಾರ, ವಿಜಯಪುರ ಎಪಿಎಂಸಿ ಮೂಲಕ ಪ್ರೋತ್ಸಾಹ ಧನ ಯೋಜನೆಯಡಿ ಈರುಳ್ಳಿ ಖರೀದಿ ನಡೆಸಿತ್ತು.

ಫೆಬ್ರುವರಿ 10ರಿಂದ ಆರಂಭಗೊಂಡಿದ್ದ ಖರೀದಿ, ಫೆ.25ರವರೆಗೆ 16 ದಿನ ನಡೆದಿತ್ತು. ಈ ಅವಧಿಯಲ್ಲಿ ಜಿಲ್ಲೆಯ ವಿವಿಧ ಭಾಗದ 751 ರೈತರು, ಒಟ್ಟು 11,520 ಕ್ವಿಂಟಲ್‌ ಉಳ್ಳಾಗಡ್ಡಿಯನ್ನು ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ನಡೆಸಿದ್ದರು. ಆದರೆ ಇಂದಿನವರೆಗೂ ಈ ಯಾರೊಬ್ಬರಿಗೂ ಪ್ರೋತ್ಸಾಹಧನ ಬಿಡುಗಡೆಯಾಗಿಲ್ಲ. ಬೆಳೆಗಾರರ ಚಿತ್ತ ಇದೀಗ ತೋಟಗಾರಿಕೆ ಇಲಾಖೆಯತ್ತ ನೆಟ್ಟಿದೆ.

‘ಮೂಲ ದರ ಕ್ವಿಂಟಲ್‌ಗೆ ₹ 700 ನಿಗದಿಯಾಗಿತ್ತು. ಮಾರುಕಟ್ಟೆಯಲ್ಲಿ ಇದಕ್ಕಿಂತ ಧಾರಣೆ ಎಷ್ಟು ಕಡಿಮೆ ಇರಲಿದೆ ಅಷ್ಟು ಮೊತ್ತವನ್ನು ತೋಟಗಾರಿಕೆ ಇಲಾಖೆ ರೈತರ ಬ್ಯಾಂಕ್‌ ಖಾತೆಗೆ ನೇರವಾಗಿ ಜಮೆ ಮಾಡಲಿದೆ. ಉಳಿದ ಮೊತ್ತವನ್ನು ಮಾರಾಟ ಮಾಡಿದ ದಿನವೇ ಅಂಗಡಿಯವರಿಂದ ರೈತರು ಪಡೆದಿದ್ದರು’ ಎಂದು ವಿಜಯಪುರ ಎಪಿಎಂಸಿ ಕಾರ್ಯದರ್ಶಿ ವಿ.ರಮೇಶ ತಿಳಿಸಿದರು.

ADVERTISEMENT

‘ರೈತರು ತಮ್ಮಲ್ಲಿರುವ ಉಳ್ಳಾಗಡ್ಡಿಯನ್ನು ಮಾರುಕಟ್ಟೆಯಲ್ಲಿ ಕ್ವಿಂಟಲ್‌ಗೆ ₹ 600ರಂತೆ ಮಾರಾಟ ಮಾಡಿದ್ದರೆ, ತೋಟಗಾರಿಕೆ ಇಲಾಖೆ ₹ 100 ಜಮೆ ಮಾಡಲಿದೆ. ಕ್ವಿಂಟಲ್‌ಗೆ ₹ 500ಕ್ಕಿಂತ ಕಡಿಮೆ ಧಾರಣೆಗೆ ಮಾರಾಟ ಮಾಡಿದರೂ ಗರಿಷ್ಠ ₹ 200 ನಗದನ್ನು ರೈತರ ಖಾತೆಗೆ ಪ್ರೋತ್ಸಾಹ ಧನವನ್ನಾಗಿ ಜಮೆ ಮಾಡಲಿದೆ.’

‘ಈ ಯೋಜನೆಯಡಿ ಮುಕ್ತ ಮಾರುಕಟ್ಟೆಯಲ್ಲಿ 751 ರೈತರು ತಮ್ಮ ಉಳ್ಳಾಗಡ್ಡಿ ಮಾರಾಟ ಮಾಡಿದ್ದು, ಇವರಿಗೆ ಒಟ್ಟು ₹ 21,20,434 ನಗದನ್ನು ನೀಡಬೇಕಿದೆ. ಇದಕ್ಕೆ ಸಂಬಂಧಿಸಿದ ಪ್ರಕ್ರಿಯೆ ನಡೆದಿವೆ’ ಎಂದು ಅವರು ಮಾಹಿತಿ ನೀಡಿದರು.

ದಾಖಲೆ ನೀಡಬೇಕು:

‘ಮುಕ್ತ ಮಾರುಕಟ್ಟೆಯಲ್ಲಿ ಈ ಯೋಜನೆಯಡಿ ನಿಗದಿತ ಅವಧಿಯಲ್ಲಿ ಉಳ್ಳಾಗಡ್ಡಿ ಮಾರಾಟ ಮಾಡಿದ ರೈತರು ತಮ್ಮ ಪಹಣಿ, ಬೆಳೆ ದೃಢೀಕರಣ ಪತ್ರ, ಆಧಾರ್‌ ಸಂಖ್ಯೆ, ಬ್ಯಾಂಕ್‌ ಖಾತೆಯ ವಿವರ ನೀಡಬೇಕು. ಇವನ್ನು ಎಪಿಎಂಸಿ ಅಧಿಕಾರಿಗಳು ರಾಜ್ಯ ಸರ್ಕಾರದ ‘ಬೆಳೆ ದರ್ಶಕ’ ಸಾಫ್ಟ್‌ವೇರ್‌ನಲ್ಲಿ ಅಪ್‌ಲೋಡ್‌ ಮಾಡಲಿದ್ದಾರೆ. ನಂತರ ತೋಟಗಾರಿಕೆ ಇಲಾಖೆ ನಿಗದಿತ ಪ್ರೋತ್ಸಾಹ ಧನವನ್ನು ಬ್ಯಾಂಕ್‌ ಖಾತೆಗೆ ನೇರವಾಗಿ ಜಮೆ ಮಾಡಲಿದೆ’ ಎಂದು ರಮೇಶ ತಿಳಿಸಿದರು.

‘ಇದೂವರೆಗೂ 227 ರೈತರು ಮಾತ್ರ ತಮ್ಮ ದಾಖಲೆಗಳನ್ನು ಎಪಿಎಂಸಿ ಅಧಿಕಾರಿ ವರ್ಗಕ್ಕೆ ಸಲ್ಲಿಸಿದ್ದಾರೆ. ಇನ್ನೂ 524 ರೈತರು ತಮ್ಮ ದಾಖಲೆ ಸಲ್ಲಿಸಬೇಕು’ ಎಂದು ಅವರು ಹೇಳಿದರು.

ಮಾಹಿತಿಯೇ ಸಿಗಲಿಲ್ಲ

‘ಹೆಬ್ಬಾಳ ಭಾಗದಲ್ಲಿ ಸರ್ಕಾರದ ಪ್ರೋತ್ಸಾಹಧನ ಯೋಜನೆಯಡಿ ಉಳ್ಳಾಗಡ್ಡಿ ಖರೀದಿ ನಡೆದ ಮಾಹಿತಿಯೇ ಯಾವೊಬ್ಬ ಬೆಳೆಗಾರರಿಗೆ ಸಿಗಲಿಲ್ಲ. ಸೂಕ್ತ ಬೆಲೆಗಾಗಿ ಕಾದ ಈರುಳ್ಳಿ ಬೆಳೆಗಾರರು ಇಂದಿಗೂ ತಮ್ಮ ಉತ್ಪನ್ನ ಬಳೂತಗಳಲ್ಲಿ, ಇಲಾರಗಿಯಲ್ಲಿ ಕೊಳೆಯುತ್ತಿರುವುದನ್ನು ಕಂಡು ಕಣ್ಣೀರಿಡುತ್ತಿದ್ದಾರೆ’ ಎಂದು ಹೆಬ್ಬಾಳದ ನಿಂಗರಾಜ ಆಲೂರ ಅಸಮಾಧಾನ ವ್ಯಕ್ತಪಡಿಸುತ್ತಾರೆ.

‘ನಮ್ದೂ ಉಳ್ಳಾಗಡ್ಡಿ ಬೆಳೆ ವಿಳಂಬವಾಗಿ ಬಂದಿದೆ. ಮಾರಾಟಕ್ಕೆ ಫೆಬ್ರುವರಿ 25 ಕೊನೆ ದಿನವಾಗಿದ್ದರಿಂದ ಮಾರಾಟ ಮಾಡಲು ಸಾಧ್ಯವಾಗಲಿಲ್ಲ. ನಿರಾಸೆ ಕಾಡಿತು. ಎಪಿಎಂಸಿ ಇನ್ನೂ ಖರೀದಿ ನಡೆಸಬೇಕಿತ್ತು’ ಎಂದು ಬುದ್ನಿಯ ಸಿ.ಬಿ.ಪಾಟೀಲ ತಿಳಿಸಿದರು.

‘ದಶಕದ ಅವಧಿಯಲ್ಲಿ ಇದೇ ಮೊದಲ ಬಾರಿಗೆ ಡಿಸೆಂಬರ್‌ನಿಂದ ಉಳ್ಳಾಗಡ್ಡಿಯ ಬೆಲೆ ಈ ಪರಿ ಕುಸಿದಿದೆ. ಇಂದಿಗೂ ಮಾರುಕಟ್ಟೆಯಲ್ಲಿ ಚೇತರಿಸಿಕೊಂಡಿಲ್ಲ’ ಎಂದು ಮುರುಗೇಶ ಹೆಬ್ಬಾಳ ಅಸಹಾಯಕತೆ ವ್ಯಕ್ತಪಡಿಸಿದರು.

₹ 700 ಗರಿಷ್ಠ ಧಾರಣೆ

ವಿಜಯಪುರ ಎಪಿಎಂಸಿಗೆ ಪ್ರತಿ ಬುಧವಾರ, ಭಾನುವಾರ 1000ದಿಂದ 1300 ಕ್ವಿಂಟಲ್‌ ಉಳ್ಳಾಗಡ್ಡಿ ಆವಕವಾಗುತ್ತಿದೆ. ಪ್ರಸಕ್ತ ₹ 100ರಿಂದ ₹ 700ರವರೆಗೂ ಕ್ವಿಂಟಲ್‌ಗೆ ಧಾರಣೆಯಿದೆ. ₨ 500 ಧಾರಣೆಯ ಈರುಳ್ಳಿ ನಮ್ಮ ಸ್ಥಳೀಯದ್ದು. ₹ 600–₹ 700ರ ಧಾರಣೆಯಲ್ಲಿ ಮಾರಾಟವಾಗುವುದು ನೆರೆಯ ಮಹಾರಾಷ್ಟ್ರದ ಪೂನಾ ಭಾಗದ ಉಳ್ಳಾಗಡ್ಡಿ ಎಂದು ರಮೇಶ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.