ADVERTISEMENT

ಅಂಗನವಾಡಿ ನೌಕರರಿಂದ ಆನ್‌ಲೈನ್‌ ಪ್ರತಿಭಟನೆ

ಕೋವಿಡ್ ಕೆಲಸಕ್ಕೆ ನಿಯೋಜಿಸುವ ಮುನ್ನ ಸೌಕರ್ಯ, ಸುರಕ್ಷತೆ ಒದಗಿಸಲು ಒತ್ತಾಯ

​ಪ್ರಜಾವಾಣಿ ವಾರ್ತೆ
Published 20 ಮೇ 2021, 10:51 IST
Last Updated 20 ಮೇ 2021, 10:51 IST
ವಿಜಯಪುರ ಜಿಲ್ಲೆಯಾದ್ಯಂತ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಗುರುವಾರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಆನ್‌ಲೈನ್‌ ಪ್ರತಿಭಟನೆ ನಡೆಸಿದರು
ವಿಜಯಪುರ ಜಿಲ್ಲೆಯಾದ್ಯಂತ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಗುರುವಾರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಆನ್‌ಲೈನ್‌ ಪ್ರತಿಭಟನೆ ನಡೆಸಿದರು   

ವಿಜಯಪುರ: ಕೋವಿಡ್ ಕೆಲಸಕ್ಕೆ ನಿಯೋಜಿಸುವ ಮುನ್ನ ಅಗತ್ಯ ಸೌಕರ್ಯ, ಸುರಕ್ಷತೆ ಒದಗಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ವಿಜಯಪುರ, ಇಂಡಿ, ಸಿಂದಗಿ, ಮುದ್ದೇಬಿಹಾಳ, ಬಸವನ ಬಾಗೇವಾಡಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಗುರುವಾರ ಆನ್‌ಲೈನ್‌ ಪ್ರತಿಭಟನೆ ನಡೆಸಿದರು.

ಕರ್ನಾಟಕ ರಾಜ್ಯ ಸಂಯುಕ್ತ ಅಂಗನವಾಡಿ ನೌಕರರ ಸಂಘದ ನೇತೃತ್ವದಲ್ಲಿ ಅಂಗನವಾಡಿ ನೌಕರರು ಪ್ರತಿಭಟನೆ ನಡೆಸಿದರು.

ಜಿಲ್ಲಾ ಅಧ್ಯಕ್ಷ ಮಲ್ಲಿಕಾರ್ಜುನ ಎಚ್. ಟಿ ಮಾತನಾಡಿ, ಸರ್ಕಾರ ಅಂಗನವಾಡಿ ನೌಕರನ್ನು ಕೋವಿಡ್ ಸೇವೆಗೆ ಬಳಸಿಕೊಳ್ಳಲು ನಿರ್ಧರಿಸಿ 15 ದಿನಗಳ ಬೇಸಿಗೆ ರಜೆಯಲ್ಲಿದ್ದ ಅವರನ್ನು, ರಜೆ ರದ್ದು ಪಡಿಸಿ ಆದೇಶ ಹೊರಡಿಸಲಾಗಿದೆ. ಇದು ಹಲವಾರು ಅನಾಹುತಗಳಿಗೆ ಕಾರಣವಾಗಬಹುದು ಎಂದು ಆತಂಕ ವ್ಯಕ್ತಪಡಿಸಿದರು.

ADVERTISEMENT

ಕಳೆದ ವರ್ಷ ಕೊರೊನಾದಿಂದ ಸಾವಿಗೀಡಾದ ಬಹಳಷ್ಟು ಕಾರ್ಯಕರ್ತೆಯರಿಗೆ ಸೂಕ್ತವಾದ ಚಿಕಿತ್ಸೆ ಸಿಗಲಿಲ್ಲ ಮತ್ತು ಮಡಿದವರ ಕುಟುಂಬಗಳಿಗೆ ಘೋಷಿತ ₹30 ಲಕ್ಷ ವಿಮೆ ಇನ್ನೂ ತಲುಪಿಲ್ಲ. ಅಂತಹ ಹಲವಾರು ಸಮಸ್ಯೆಗಳು ಇನ್ನೂ ನಿವಾರಣೆ ಆಗಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಅಂಗನವಾಡಿ ನೌಕರರನ್ನು ಕೋವಿಡ್‌ ಕೆಲಸಗಳಿಗೆ ನಿಯೋಜಿಸುತ್ತಿರುವ ಮೊದಲು ನಮ್ಮ ಬೇಡಿಕೆಗಳಿಗೆ ಸರ್ಕಾರದಿಂದ ಲಿಖಿತ ಆದೇಶ ಹೊರಡಿಸಬೇಕು ಎಂದು ಆಗ್ರಹಿಸಿದರು.

ಪ್ರಮುಖ ಹಕ್ಕೊತ್ತಾಯಗಳು

ಸಿಡಿಪಿಒ ಅವರಿಂದ ಲಿಖಿತ ಆದೇಶ ಪತ್ರ ನೀಡಿದ ಕಾರ್ಯಕರ್ತೆ,ಸಹಾಯಕಿಯರನ್ನು ಮಾತ್ರ ಕೋವಿಡ್ ಕೆಲಸಕ್ಕೆ ನಿಯೋಜನೆ ಮಾಡಬೇಕು. 50 ವರ್ಷ ಮೇಲ್ಪಟ್ಟವರು, ಗಂಭೀರ ಕಾಯಿಲೆ ಇದ್ದವರು, ಗರ್ಭಿಣಿ ಮತ್ತು ಚಿಕ್ಕ ಮಕ್ಕಳ ತಾಯಂದಿರನ್ನು ಕೆಲಸಕ್ಕೆ ನಿಯೋಜನೆ ಮಾಡಬಾರದು.

ರದ್ದು ಮಾಡಿರುವ 15 ದಿನ ಬೇಸಿಗೆ ರಜೆಗಳನ್ನು ಮುಂದಿನ ದಿನಗಳಲ್ಲಿ ನೀಡಬೇಕು, ಪಾಸಿಟಿವ್ ಬಂದ ಕಾರ್ಯಕರ್ತೆ, ಸಹಾಯಕಿ ಮತ್ತು ಅವರ ಅವಲಂಬಿತರಿಗೆ ಆಸ್ಪತ್ರೆ ಬೆಡ್ ಮೀಸಲಿಡಬೇಕು ಮತ್ತು ಉಚಿತ ಚಿಕಿತ್ಸೆ ನೀಡಬೇಕು.

₹ 30 ಲಕ್ಷ ವಿಮೆ ಎರಡನೇ ಅಲೆಯಲ್ಲಿಯೂ ಮುಂದುವರಿಸಿರುವ ಬಗ್ಗೆ ಸರ್ಕಾರದಿಂದ ಲಿಖಿತವಾಗಿ ಸ್ಪಷ್ಟನೆಯ ಪತ್ರ ಹೊರಡಿಸಬೇಕು, ಕೊರೊನಾ ವಾರಿಯರ್ಸ್‌ಗೆ ನೀಡುವ ಮಾಸಿಕ ವಿಶೇಷ ಗೌರವ ಧನ ಇವರಿಗೂ ನೀಡಬೇಕು.

ಮಾಸ್ಕ್, ಸ್ಯಾನಿಟೈಜರ್ ಸಹಿತ ಸುರಕ್ಷತೆ ಕಿಟ್ ನೀಡಬೇಕು, ಬಾಕಿ ಇರುವ ಗೌರವ ಧನ ಈ ಕೂಡಲೇ ಪಾವತಿಸಬೇಕು ಎಂದು ಆಗ್ರಹಿಸಿದರು.

ಜಿಲ್ಲಾ ಅಧ್ಯಕ್ಷ ಮಲ್ಲಿಕಾರ್ಜುನ ಎಚ್. ಟಿ, ಲಕ್ಷ್ಮೀ ಲಕ್ಷೆಟ್ಟಿ, ನಿಂಗಮ್ಮ ಮಠ, ಸಾವಿತ್ರಿ ನಾಗರತಿ, ರೇಣುಕಾ ಹಡಪದ, ವಿಜಯಲಕ್ಷ್ಮಿ ಹುಣಶ್ಯಾಳ, ಬೇಬಿ ಲಮಾಣಿ, ಸವಿತಾ ತೇರದಾಳ, ತಾಯವ್ವ ಬುದಿಹಾಳ, ಸತ್ತೆಮ್ಮ ಹಡಪದ, ಉಶಾ ಕುಲಕರ್ಣಿ, ರಷ್ಮೀ ಗುತ್ತೆದಾರ ಆನ್‌ಲೈನ್‌ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.