ADVERTISEMENT

ಸಮನ್ವಯತೆಯಿಂದ ಅಭಿವೃದ್ಧಿ ಸಾಧ್ಯ: ಬಸವಂತರಾಯಗೌಡ

ತೆರೆದ ಬಾವಿಗೆ ಬಾಗಿನ ಅರ್ಪಣೆ - ಗಂಗಾ ಪೂಜೆ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 24 ಜುಲೈ 2025, 4:38 IST
Last Updated 24 ಜುಲೈ 2025, 4:38 IST
ತಿಕೋಟಾ ತಾಲ್ಲೂಕಿನ ಸಿದ್ಧಾಪುರ (ಕೆ) ಗ್ರಾಮ ಪಂಚಾಯಿತಿಯ ಧನ್ನರ್ಗಿ ಗ್ರಾಮದಲ್ಲಿ ನರೇಗಾ ಯೋಜನೆಯಡಿ ನಿರ್ಮಿಸಿದ ತೆರೆದ ಬಾವಿಯಲ್ಲಿ ಸಂಪೂರ್ಣ ನೀರು ತುಂಬಿರುವುದರಿಂದ ಬಾಗಿನ ಅರ್ಪಣೆ ಮತ್ತು ಗಂಗಾ ಪೂಜೆ ಕಾರ್ಯಕ್ರಮದಲ್ಲಿ ನೆರವೇರಿಸಲಾಯಿತು
ತಿಕೋಟಾ ತಾಲ್ಲೂಕಿನ ಸಿದ್ಧಾಪುರ (ಕೆ) ಗ್ರಾಮ ಪಂಚಾಯಿತಿಯ ಧನ್ನರ್ಗಿ ಗ್ರಾಮದಲ್ಲಿ ನರೇಗಾ ಯೋಜನೆಯಡಿ ನಿರ್ಮಿಸಿದ ತೆರೆದ ಬಾವಿಯಲ್ಲಿ ಸಂಪೂರ್ಣ ನೀರು ತುಂಬಿರುವುದರಿಂದ ಬಾಗಿನ ಅರ್ಪಣೆ ಮತ್ತು ಗಂಗಾ ಪೂಜೆ ಕಾರ್ಯಕ್ರಮದಲ್ಲಿ ನೆರವೇರಿಸಲಾಯಿತು   

ತಿಕೋಟಾ: ಗ್ರಾಮ ಪಂಚಾಯಿತಿ ಸದಸ್ಯರು ಮತ್ತು ಅಧಿಕಾರಿಗಳು ಸಮನ್ವಯತೆಯಿಂದ ಕೆಲಸ ಮಾಡಿದ್ದಲ್ಲಿ ಅಭಿವೃದ್ಧಿ ಕೆಲಸಗಳು ಅಷ್ಟೇ ಸರಳವಾಗಿ ಮುಗಿಯುತ್ತವೆ. ಸಹಕಾರದಿಂದ ಕೆಲಸ ಮಾಡಿದ ಫಲವಾಗಿ ಸಾರ್ವಜನಿಕರ ದಾಹ ನೀಗಿಸುವ ಉತ್ತಮ ಕಾಮಗಾರಿಯಾಗಿದೆ ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಬಸವಂತರಾಯಗೌಡ ಬಿರಾದಾರ ಹೇಳಿದರು.

ತಾಲ್ಲೂಕಿನ ಸಿದ್ಧಾಪುರ–ಕೆ ಗ್ರಾಮ ಪಂಚಾಯಿತಿಯ ಧನ್ನರ್ಗಿ ಗ್ರಾಮದಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಕೈಗೊಂಡ ಅಮೃತ ಸರೋವರ ಮತ್ತು ತೆರೆದ ಬಾವಿಯಲ್ಲಿ ಸಂಪೂರ್ಣ ನೀರು ತುಂಬಿರುವುದರಿಂದ ಮಂಗಳವಾರ ಆಯೋಜನೆ ಮಾಡಿದ್ದ ಬಾಗಿನ ಅರ್ಪಣೆ ಮತ್ತು ಗಂಗಾ ಪೂಜೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಈ ಕಾಮಗಾರಿಗಳು ಮುಂದಿನ ದಿನಮಾನದಲ್ಲಿ ನಿಮ್ಮೆಲ್ಲರ ಹೆಸರನ್ನು ಅಜರಾಮರವಾಗಿ ಉಳಿಸುತ್ತವೆ. ಇದೇ ರೀತಿ ಹೆಚ್ಚೇಚ್ಚು ಕಾಮಗಾರಿಗಳನ್ನು ಕೈಗೊಳ್ಳಿ ಎಂದು ತಿಳಿಸಿದರು.

ADVERTISEMENT

ಧನ್ನರ್ಗಿ ಗ್ರಾಮದ ಮಲ್ಲಯ್ಯ ಸ್ವಾಮಿಗಳು ಪೂಜಾ ಕಾರ್ಯ ಕೈಗೊಂಡರು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಿಲ್ಪಾ ಮಚೇಂದ್ರ ಹೊಸಮನಿ, ಉಪಾಧ್ಯಕ್ಷ ಮಾರುತಿ ಸಮಗಾರ (ಸಪ್ತಾಳಕರ), ತಾಲ್ಲೂಕು ಐಇಸಿ ಸಂಯೋಜಕ ಕಲ್ಲಪ್ಪ ನಂದರಗಿ, ಶ್ರೀಧರ ಸಾವಳಗಿ, ಸುರೇಶ ಅವಟಿ, ಬಾಲಕೃಷ್ಣ ಕದಂ, ಮಾರುತಿ ಬಂಡಿವಡ್ಡರ, ಬಸಪ್ಪ ತೇಲಿ, ಶ್ರೀಶೈಲ ವಳಸಂಗ, ಲಾಲಸಿಂಗ ಲಮಾಣಿ, ಎಂ.ಎಂ.ಕೋಳಿ, ಕಾಶಿನಾಥ ಸಾವಂತ, ಅಮಗೊಂಡ ಗೋಳಸಂಗಿ, ದುಂಡಪ್ಪ ವಠಾರ, ಬಂದೆನವಾಜ ಮುಲ್ಲಾ, ಲಾಯಪ್ಪ ವಠಾರ, ಉಮೇಶ ತೇಲಿ, ರವಿ ಪವಾರ, ಶ್ರೀಶೈಲ ಶೆಡಬಾಳ, ಸುರೇಶ ಸಪ್ತಾಳಕರ, ಸಂಗೀತಾ ಸಪ್ತಾಳಕರ ಇದ್ದರು.

‘ಕಾಮಗಾರಿಯ ಲಾಭ ಪಡೆಯಿರಿ’

ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪದ್ಮಿನಿ ಬಿರಾದಾರ ಮಾತನಾಡಿ ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿಯ ಅಧಿಕಾರಿಗಳ ಹಾಗೂ ಮನರೇಗಾ ಸಿಬ್ಬಂದಿ ಸಹಕಾರದಿಂದ ನಮ್ಮ ಗ್ರಾಮ ಪಂಚಾಯತಿಯಲ್ಲಿ ಈ ರೀತಿಯ ಉತ್ತಮ ಕಾಮಗಾರಿಗಳಾಗಿವೆ. ಇದರಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರ ಮತ್ತು ಸದಸ್ಯರ ಶ್ರಮವು ಬಹಳಷ್ಟಿದೆ ಎಂದರು. ಈ ಎರಡು ಕಾಮಗಾರಿಗಳನ್ನು ಮನರೇಗಾ ಯೋಜನೆಯಡಿ ಕೈಗೊಂಡಿದ್ದು ಪ್ರಸ್ತುತ ಸಂಪೂರ್ಣ ತುಂಬಿರುವುದರಿಂದ ನಮ್ಮ ಕೆಲಸದ ಸಾರ್ಥಕತೆಯಿಂದ ತುಂಬಾ ತೃಪ್ತಿಯಾಗಿದೆ. ಸಾರ್ವಜನಿಕರು  ಕಾಮಗಾರಿಗಳ ಲಾಭ ಪಡೆದುಕೊಳ್ಳಬೇಕು ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.