ADVERTISEMENT

ವಿಜಯಪುರ: ಕಾರ್ಮಿಕ ಕಾಯ್ದೆ ಅಮಾನತಿಗೆ ವಿರೋಧ

ಎಐಯುಟಿಯುಸಿ ಕಾರ್ಮಿಕ ಸಂಘಟನೆಯಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 13 ಮೇ 2020, 14:55 IST
Last Updated 13 ಮೇ 2020, 14:55 IST
ಎಐಯುಟಿಯುಸಿ ಕಾರ್ಮಿಕ ಸಂಘಟನೆಯಿಂದ ಬುಧವಾರ ವಿಜಯಪುರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು
ಎಐಯುಟಿಯುಸಿ ಕಾರ್ಮಿಕ ಸಂಘಟನೆಯಿಂದ ಬುಧವಾರ ವಿಜಯಪುರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು   

ವಿಜಯಪುರ: ಕೇಂದ್ರ ಸರ್ಕಾರವು ಕಾರ್ಮಿಕ ಕಾಯ್ದೆಗಳನ್ನು ಅಮಾನತ್ತಿನಲ್ಲಿಡುವ ಮತ್ತು ದುರ್ಬಲಗೊಳಿಸುವ ಕ್ರಮಗಳನ್ನು ಕೈ ಬಿಡಬೇಕು ಹಾಗೂ ವಲಸೆ ಕಾರ್ಮಿಕರ ಪ್ರಯಾಣಕ್ಕಾಗಿ ಉಚಿತ ಸಾರಿಗೆ ಕಲ್ಪಿಸಬೇಕು ಎಂದು ಆಗ್ರಹಿಸಿ ಎಐಯುಟಿಯುಸಿ ಕಾರ್ಮಿಕ ಸಂಘಟನೆಯಿಂದ ಬುಧವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.

ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಜಿಲ್ಲಾ ಅಧ್ಯಕ್ಷ ಮಲ್ಲಿಕಾರ್ಜುನ ಎಚ್.ಟಿ., ಕೋವಿಡ್ ಲಾಕ್‌ಡೌನ್‌ ಮರೆಯಲ್ಲಿ ಕೇಂದ್ರ ಹಾಗೂ ವಿವಿಧ ರಾಜ್ಯ ಸರ್ಕಾರಗಳು ಮುಂದಿನ ಮೂರು ವರ್ಷಗಳ ಕಾಲ ಕಾರ್ಮಿಕರ ಕಾಯ್ದೆಗಳ ಅಮಾನತ್ತುಗೊಳಿ, ದುಡಿಮೆಯ ಅವಧಿ ಹೆಚ್ಚಳ ಮಾಡಲು ಹೊರಟಿರುವುದು ಖಂಡನೀಯ ಎಂದರು.

ದುಡಿಯುವ ಮತ್ತು ವಲಸೆ ಕಾರ್ಮಿಕರ ಬಗ್ಗೆ ಅನಾದರ, ನಿರ್ಲಕ್ಷ್ಯ ತೋರುವ, ಮನಬಂದಂತೆ ವಜಾ ಗೊಳಿಸುವ, ವೇತನ ಕಡಿತಗೊಳಿಸುವ ಕ್ರಮಗಳ ಮೂಲಕ ಕಾರ್ಮಿಕರಿಗೆ ಜೀವನ ಭದ್ರತೆ-ಸೇವಾ ಭದ್ರತೆಗಳೆರಡನ್ನೂ ಸರ್ವನಾಶ ಮಾಡಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹೊರಟಿರುವುದು ಸರಿಯಲ್ಲ ಎಂದು ಹೇಳಿದರು.

ADVERTISEMENT

ಕಾರ್ಪೊರೇಟ್‌ ಕಂಪನಿಗಳ ಪರವಾಗಿ ನಿಂತಿರುವ ಸರ್ಕಾರ ಕಾರ್ಮಿಕರ ಮೇಲೆ ದಾಳಿ ಮಾಡಲು ಮುಂದಾಗಿರುವುದನ್ನು ಎಐಯುಟಿಯುಸಿ ತೀವ್ರವಾಗಿ ಖಂಡಿಸುತ್ತದೆ ಎಂದರು.

ದುಡಿಯಲು ನಮ್ಮ ರಾಜ್ಯದಿಂದ ಇತರ ರಾಜ್ಯಗಳಿಗೆ ಹೋಗಿರುವ ಕೋಟ್ಯಂತರ ಕಾರ್ಮಿಕರ ಬದುಕು ಮೂರಾಬಟ್ಟೆಯಾಗಿದೆ. ಸರಿಯಾದ ಮುಂಜಾಗೃತೆ ವಹಿಸದೆ ಲಾಕ್‌ಡೌನ್ ಘೋಷಿಸಿರುವ ಪರಿಣಾಮದಿಂದ ಕಾರ್ಮಿಕರು ಬೀದಿಗೆ ಬಿದ್ದಿದ್ದಾರೆ ಎಂದರು.

ಕೆಲಸವಿಲ್ಲ, ಗಳಿಕೆ ಇಲ್ಲ, ಊಟಕ್ಕೂ ತತ್ವಾರ, ಈಗಿರುವಲ್ಲಿ ಇರಲು ಆಗುತ್ತಿಲ್ಲ. ತಮ್ಮ ಸ್ವಂತ ಊರು ಗಳಿಗೆ ಹಿಂತಿರುಗಿ ಹೋಗಲು ಕೈಯಲ್ಲಿ ಹಣವಿಲ್ಲ. ಸಾರಿಗೆ ವ್ಯವಸ್ಥೆ ಇಲ್ಲ. ಇದರಿಂದ ಕಂಗಾಲಾದ ಕಾರ್ಮಿಕರು ಹಸಿದ ಹೊಟ್ಟೆಯಲ್ಲಿ ತಮ್ಮೂರಿನತ್ತ ಕಾಲ್ನಡಿಗೆಯಲ್ಲಿ ಹೊರಟವರಲ್ಲಿ ನೂರಾರು ಜನ ಈಗಾಗಲೇ ದಾರುಣವಾಗಿ ಅಸುನೀಗಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗ಼ಳು ರೈಲು ಮತ್ತು ಬಸ್ ವ್ಯವಸ್ಥೆ ಕಲ್ಪಿಸಬೇಕು ಎಂದು ಒತ್ತಾಯಿಸಿದರು.

ಜಿಲ್ಲಾ ಕಾರ್ಯದರ್ಶಿ ಸುನೀಲ ಸಿದ್ರಾಮಶೆಟ್ಟಿ, ಲಕ್ಷಣ ಹಂದ್ರಾಳ, ಆಕಾಶ ರಾಮತೀರ್ಥ, ಶೋಭಾ ಯರಗುದ್ರಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.