ವಿಜಯಪುರ: ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ವಿರೋಧಿಸಿ ಎಸ್‍ಯುಸಿಐ ಕಾರ್ಯಕರ್ತರು ಜಿಲ್ಲಾಧಿಕಾರಿಗಳ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಿದರು.
ಎಸ್‍ಯುಸಿಐ ಕಮ್ಯುನಿಸ್ಟ್ ಪಕ್ಷದ ಜಿಲ್ಲಾ ಕಾರ್ಯದರ್ಶಿ ಭಗವಾನ್‍ರೆಡ್ಡಿ ಮಾತನಾಡಿ, ಈಗಾಗಲೇ ಜನರು ಕೋವಿಡ್ ಲಾಕ್‍ಡೌನ್ ಹಿನ್ನೆಲೆಯಲ್ಲಿ ಕೆಲಸವಿಲ್ಲದೇ ಕಂಗೆಟ್ಟಿರುವಾಗ ತೈಲ ಬೆಲೆ ದಿನದಿಂದ ದಿನಕ್ಕೆ ಏರುತ್ತಿರುವುದು ಖಂಡನೀಯ ಎಂದರು.
ಲಾಕ್‌ಡೌನ್ ಅವಧಿಯಲ್ಲಿ ಜಾಗತಿಕವಾಗಿ ತೈಲ ಬೇಡಿಕೆ ಕುಸಿತ ಕಂಡಿದ್ದರಿಂದಾಗಿ ಕಚ್ಚಾ ತೈಲ ಬೆಲೆಯೂ ಶೂನ್ಯಕ್ಕೆ ತಲುಪಿತ್ತು. ಆದರೆ, ಇದರ ಲಾಭವನ್ನು ಜನರಿಗೆ ತಲುಪಿಸದ ಕೇಂದ್ರ ಬಿಜೆಪಿ ಸರ್ಕಾರವು ಪೆಟ್ರೋಲ್-ಡೀಸೆಲ್ ಮೇಲೆ ಪ್ರತಿ ಲೀಟರಿಗೆ ₹ 3 ಹೆಚ್ಚುವರಿ ಅಬಕಾರಿ ಸುಂಕವನ್ನು ವಿಧಿಸುವ ಮೂಲಕ ತನ್ನ ಜನ ವಿರೋಧಿ ಧೋರಣೆ ಪ್ರದರ್ಶಿಸಿತ್ತು ಎಂದು ಆರೋಪಿಸಿದರು.
ಕಾರ್ಪೋರೇಟ್ ಸಂಸ್ಥೆಗಳಿಗೆ ರಿಯಾಯಿತಿ ಕೊಡುವ ಕೇಂದ್ರ ಸರ್ಕಾರ ಸಾಮಾನ್ಯ ಜನರ ಗಾಯದ ಮೇಲೆ ಬರೆ ಎಳೆಯುವ ಕೆಲಸ ಮಾಡುತ್ತಿದೆ ಎಂದು ದೂರಿದರು.
ಕಾರ್ಮಿಕ ನಾಯಕರಾದ ಪ್ರಭುಗೌಡ ಪಾಟೀಲ, ಜಿಲ್ಲಾ ಸಮಿತಿ ಸದಸ್ಯರಾದ ಬಾಳು ಜೇವೂರ, ಸಿದ್ದಲಿಂಗ ಬಾಗೇವಾಡಿ, ಭರತಕುಮಾರ ಎಚ್ ಟಿ, ಮಲ್ಲಿಕಾರ್ಜುನ ಎಚ್ ಟಿ, ಕಾರ್ಯಕರ್ತರಾದ ಸುನೀಲ ಸಿದ್ರಾಮಶೆಟ್ಟಿ, ಶೋಭಾ, ಸುಮಿತ್ರಾ, ವಿದ್ಯಾ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.