
ತಿಕೋಟಾ: ‘ಶಾಲೆಯ ಆವರಣದಲ್ಲಿನ ಹಸಿ ಕಸ ಬಳಸಿಕೊಂಡು ಪೈಪ್ ಕಾಂಪೋಸ್ಟಿಂಗ್ ವಿಧಾನದ ಮೂಲಕ ಸಾವಯುವ ರಸಗೊಬ್ಬರ ತಯಾರಿಸಬಹುದು’ ಎಂದು ಬಬಲೇಶ್ವರ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಪ್ರೀತಿ ಗಡೆದ ಹೇಳಿದರು.
ಬಬಲೇಶ್ವರ ಪಟ್ಟಣದ ಸರ್ಕಾರಿ ಕನ್ನಡ ಹೆಣ್ಣು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ನಡೆದ ಹಸಿ ಕಸ ಮತ್ತು ಒಣ ಕಸ ವಿಂಗಡಣೆ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ಕಸದಿಂದ ರಸ ಎನ್ನುವ ಮಾತಿನಂತೆ, ಕಸವನ್ನು ಸಂಪನ್ಮೂಲವನ್ನಾಗಿ ಪರಿವರ್ತಿಸಿಕೊಳ್ಳಬೇಕು. ಇದರಿಂದ ಉತ್ತಮ ಆದಾಯ ಸಿಗುವುದಲ್ಲದೆ, ಪಟ್ಟಣ ಸುಂದರವಾಗಿ ಕಾಣುತ್ತದೆ. ನಮಗೆ ಹಲವಾರು ಕೊಡುಗೆ ನೀಡಿರುವ ಪ್ರಕೃತಿಗೆ ನಾವು ಏನಾದರೂ ಒಳ್ಳೆಯದನ್ನು ಮಾಡಬೇಕು. ಸ್ವಚ್ಛತೆಯ ಆದ್ಯತೆ ನೀಡಬೇಕು. ಎಲ್ಲೆಂದರಲ್ಲಿ ಕಸ ಬಿಸಾಡದೆ, ಸೂಕ್ತ ವಿಲೇವಾರಿ ಮಾಡಬೇಕು. ಮೂಲದಲ್ಲೆ ಹಸಿ ಕಸ ಹಾಗೂ ಒಣ ಕಸ ವಿಂಗಡಿಸಬೇಕು’ ಎಂದರು.
ಪಟ್ಟಣ ಪಂಚಾಯಿತಿ ಕಿರಿಯ ಆರೋಗ್ಯ ನಿರೀಕ್ಷಕ ಬಸವರಾಜ ಕಾಜಿಬೀಳಗಿ ಅವರು ಪೈಪ್ ಕಾಂಪೋಸ್ಟಿಂಗ್ ಮೂಲಕ ಸಾವಯುವ ಗೊಬ್ಬರ ತಯಾರಿಸುವ ವಿಧಾನದ ಕುರಿತು ಪ್ರಾಯೋಗಿಕವಾಗಿ ವಿವರಿಸಿದರು.
ಪ್ರಭಾರ ಮುಖ್ಯಶಿಕ್ಷಕ ಅಶೋಕ ಬೂದಿಹಾಳ ಪ್ರತಿಜ್ಞಾವಿಧಿ ಬೋಧಿಸಿದರು. ಎಸ್.ಎ. ಗಂಗನಗೌಡ, ಹರೀಶ್ ಬಬಲೇಶ್ವರ, ಎಂ.ಎನ್. ಪಟೇಗಾರ, ಉಮಾ ಜಾದವ, ಗಂಗಾ ಕೊಲಕಾರ, ಡಿ.ಆರ್. ಬಿರಾದಾರ, ಸೌಭಾಗ್ಯ ಮಿರ್ಜಿ, ಅಕ್ಷತಾ ಮುತ್ತೂರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.