ADVERTISEMENT

15 ದಿನಕ್ಕೊಮ್ಮೆ ಓವರ್ ಹೆಡ್ ಟ್ಯಾಂಕ್‍ ಸ್ವಚ್ಛತೆಗೆ ಸೂಚನೆ

ಜೆಜೆಎಂ ಕಾಮಗಾರಿ ಪರಿಶೀಲಿಸಿದ ಸಿಇಒ ರಿಷಿ ಆನಂದ್‌

​ಪ್ರಜಾವಾಣಿ ವಾರ್ತೆ
Published 29 ಜುಲೈ 2025, 4:06 IST
Last Updated 29 ಜುಲೈ 2025, 4:06 IST
ವಿಜಯಪುರ ಜಿಲ್ಲೆಯ ವಿವಿಧ ಗ್ರಾಮಗಳಿಗೆ ಭೇಟಿ ನೀಡಿದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಿಷಿ ಆನಂದ್‌, ಜಲ ಜೀವನ್ ಮಿಷನ್ ಯೋಜನೆಯಡಿ ಮನೆ ಮನೆಗೆ  ನಳ ಸಂಪರ್ಕ ಕಾಮಗಾರಿ ಪರಿಶೀಲಿಸಿದರು 
ವಿಜಯಪುರ ಜಿಲ್ಲೆಯ ವಿವಿಧ ಗ್ರಾಮಗಳಿಗೆ ಭೇಟಿ ನೀಡಿದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಿಷಿ ಆನಂದ್‌, ಜಲ ಜೀವನ್ ಮಿಷನ್ ಯೋಜನೆಯಡಿ ಮನೆ ಮನೆಗೆ  ನಳ ಸಂಪರ್ಕ ಕಾಮಗಾರಿ ಪರಿಶೀಲಿಸಿದರು    

ವಿಜಯಪುರ: ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರು ಪೂರೈಸುವ ಓವರ್ ಹೆಡ್ ಟ್ಯಾಂಕ್‍ಗಳನ್ನು ಪ್ರತಿ 15 ದಿನಕ್ಕೊಮ್ಮೆ ಸ್ವಚ್ಛತೆ ಮಾಡುವಂತೆ ಪಿಡಿಓ ಹಾಗೂ ನೀರುಗಂಟಿ ಸಿಬ್ಬಂದಿಗೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಿಷಿ ಆನಂದ್‌ ಸೂಚಿಸಿದರು.

ಸಿಂದಗಿ, ಆಲಮೇಲ ಮತ್ತು ಇಂಡಿ  ತಾಲ್ಲೂಕುಗಳಿಗೆ ಭೇಟಿ ನೀಡಿ, ಜಲ ಜೀವನ್ ಮಿಷನ್ ಯೋಜನೆಯಡಿ ಮನೆ ಮನೆಗೆ  ನಳ ಸಂಪರ್ಕ ಕಾಮಗಾರಿಯನ್ನು ಪರಿಶೀಲನೆ ಮಾತನಾಡಿದರು.

ಪ್ರಸ್ತುತ ಮಳೆಗಾಲ ಸಂದರ್ಭವಾಗಿರವುದರಿಂದ ಶುದ್ಧ ಕುಡಿಯುವ ನೀರನ್ನು ಸರಬರಾಜು ಮಾಡುವ ಮೂಲಕ ಗ್ರಾಮೀಣ ಜನರ ಆರೋಗ್ಯ ಕಾಪಾಡಬೇಕು. ಸಾರ್ವಜನಿಕರಿಗೆ ಯಾವುದೇ ರೀತಿಯ ಆರೋಗ್ಯ ಸಮಸ್ಯೆಗಳು ಉಂಟಾಗದಂತೆ ನಿರ್ವಹಣೆ ಮಾಡುವಂತೆ ಸಂಬಂಧಿಸಿದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚಿಸಿದರು.

ADVERTISEMENT

ನಳದ ಮೂಲಕ ನೀರು ಪ್ರತಿದಿನ ಪೂರೈಕೆ ಆಗುತ್ತಿರುವ ಕುರಿತು ವಿಚಾರಿಸಿ, ಖುದ್ದಾಗಿ ಪರಿಶೀಲಿಸಿದರು. ಗ್ರಾಮಗಳಲ್ಲಿ ಅನುಷ್ಠಾನಗೊಂಡ ಜಲ ಜೀವನ ಮಿಷನ್ ಯೋಜನೆ ಕುರಿತು ಸ್ಥಳೀಯ ಫಲಾನುಭವಿಗಳ ಜೊತೆ ಚರ್ಚಿಸಿ, ನೀರನ್ನು ಪೋಲು ಮಾಡದೆ ವ್ಯವಸ್ಥಿತವಾಗಿ ಬಳಕೆ ಮಾಡಬೇಕು ಎಂದು ತಿಳಿಸಿದರು.

ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ನೀರನ್ನು ಪೂರೈಕೆ ಮಾಡುವ ಪೂರ್ವದಲ್ಲಿ ನಿಯಮಿತವಾಗಿ ನೀರು  ಪರೀಕ್ಷಿಸಲು ಹಾಗೂ ಒಎಚ್‍ಟಿ ಟ್ಯಾಂಕ್‌ ಅನ್ನು ನಿಯಮಿತವಾಗಿ ಸ್ವಚ್ಛಗೊಳಿಸಲು ಹಾಗೂ ಕ್ಲೋರಿನೇಷನ್ ಮಾಡಲು ಕಟ್ಟುನಿಟ್ಟಿನ ಸೂಚನೆ ನೀಡಿದರು.

ಕಾರ್ಯನಿರ್ವಾಹಕ ಎಂಜಿನಿಯರ್‌, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಈಗಾಗಲೇ 220 ಶುದ್ದ ಕುಡಿಯುವ ನೀರಿನ ಘಟಕಗಳನ್ನು ಗ್ರಾಮ ಪಂಚಾಯಿತಿಗಳಿಗೆ ಹಸ್ತಾಂತರಿಸಲಾಗಿದ್ದು, ದುರಸ್ತಿಯಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕಗಳ ಅಂದಾಜು ಪತ್ರಿಕೆ ತಯಾರಿಸಲಾಗಿದ್ದು, ಮುಂಬರುವ ದಿನಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ದುರಸ್ತಿಗೊಳಿಸಿ ಗ್ರಾಮ ಪಂಚಾಯಿತಿಗೆ ಹಸ್ತಾಂತರಿಸಲಾಗುವುದು ಎಂದು ತಿಳಿಸಿದರು.

ಸಿಂದಗಿ ತಾಲ್ಲೂಕಿನ ರಾಂಪುರ ಪಿ.ಎ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಾಂಪುರ ಪಿ.ಎ ಮತ್ತು ಗಣಿಹಾರ ಗ್ರಾಮ ಹಾಗೂ ಆಲಮೇಲ ತಾಲ್ಲೂಕಿನ ಕೋರಹಳ್ಳಿ, ಹೂವಿನಹಳ್ಳಿ ಹಾಗೂ ವಿಬೂತಿಹಳ್ಳಿ ಗ್ರಾಮ ಮತ್ತು ಇಂಡಿ ತಾಲ್ಲೂಕಿನ ಮರಸನಹಳ್ಳಿ, ಸಾಲೋಟಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಇಂದಿರಾ ನಗರ, ಬಬಲಾದ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಬಲಾದ ಮತ್ತು  ಹಲಗುಣಕಿ ಮತ್ತು ಹೊರ್ತಿ ಗ್ರಾಮಗಳಲ್ಲಿ ಸಂಚರಿಸಿ, ಪ್ರತಿ ಮನೆ ಮನೆಗೆ ಗಂಗೆ ಕಾರ್ಯಕ್ರಮದಡಿ ಅನುಷ್ಠಾನಗೊಂಡ ಜಲ ಜೀವನ ಮಿಷನ್ ಯೋಜನೆಯ ಕಾಮಗಾರಿಗಳನ್ನು ಪರಿಶೀಲನೆ ನಡೆಸಿದರು.

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್‌ ಬಸವರಾಜ ಕುಂಬಾರ, ಇಂಡಿ ತಾಲ್ಲೂಕಿನ ಕಾರ್ಯನಿರ್ವಾಹಕ ಅಧಿಕಾರಿ  ಭೀಮಾಶಂಕರ ಕನ್ನೂರ, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ತಾರನಾಥ ರಾಠೋಡ,  ತಾಲ್ಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ಸಿದ್ದರಾಮ ಅಂಕಲಗಿ, ನಿತ್ಯಾನಂದ ಯಲಗೋಡ, ಆರ್. ಎಸ್ ಬಂಡಿ , ಸಹಾಯಕ ಕಾರ್ಯಪಾಲಕ  ಎಂಜಿನಿಯರ್‌ ಶಶಿಧರ್ ಮೆಡೆದಾರ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ಕಲ್ಮೇಶ ಜಾನಮಟ್ಟಿ, ಅಮಸಿದ್ದ ಹರಿಜನ ಮತ್ತು ಪ್ರಭಾವತಿ ಕುಂಬಾರ, ಮುತ್ತಪ್ಪ ಜಾಡರ, ಶ್ರೀಶೈಲ ಬಿರಾದಾರ, ಸಿದರಾಯ ಬಿರಾದಾರ ಇದ್ದರು. 

ಜೆಜೆಎಂ ಯೋಜನೆಯಡಿ ಪ್ರತಿ ಮನೆಗೆ ನೀರು ಸರಿಯಾದ ಪ್ರಮಾಣದಲ್ಲಿ ಬರುವುದನ್ನು ಖಾತ್ರಿ ಪಡಿಸಿಕೊಂಡು ನಂತರ ಗ್ರಾಮ ಪಂಚಾಯಿತಿಗೆ ಹಸ್ತಾಂತರಿಸಬೇಕು ಯೋಜನೆ ಸರಿಯಾಗಿ ನಿರ್ವಹಣೆ ಮಾಡುವುದು
ಗ್ರಾ.ಪಂ.ಜವಾಬ್ದಾರಿ  ರಿಷಿ ಆನಂದ್‌ ಸಿಇಒ ಜಿ.ಪಂ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.