ದೇವರಹಿಪ್ಪರಗಿ ತಾಲ್ಲೂಕಿನ ಪಡಗಾನೂರ ಗ್ರಾಮದ ಐತಿಹಾಸಿಕ ಚಾಲಕ್ಯರ ಕಾಲದ ಸೋಮೇಶ್ವರ ದೇಗುಲ
ದೇವರಹಿಪ್ಪರಗಿ: ಉತ್ತಮ ರಸ್ತೆ, ಚರಂಡಿ, ಶುದ್ಧ ಕುಡಿಯುವ ನೀರಿನ ಘಟಕ, ಬ್ಯಾಂಕ್, ಸರ್ಕಾರಿ ಪ್ರೌಢಶಾಲೆ, ಕಾಲೇಜು ಸಹಿತ ಹಲವು ವ್ಯವಸ್ಥೆಗಳಿಗಾಗಿ ಕಾದಿದೆ ಇಲ್ಲಿಯ ಪಡಗಾನೂರ ಗ್ರಾಮ.
ಪಡಗಾನೂರ ಎಂದರೆ ತಟ್ಟನೆ ನೆನಪಾಗುವುದೇ ಶಂಕರಗೌಡರ ಹೆಸರು. ಇಂದಿಗೂ ಈ ಗ್ರಾಮ ರಾಜಕೀಯವಾಗಿ ಪರಿಚಯವಾಗಿರುವುದು ಸಿಂದಗಿ ಮತಕ್ಷೇತ್ರವನ್ನು 2 ಬಾರಿ ಪ್ರತಿನಿಧಿಸಿ ಶಾಸಕರಾದ ದಿಟ್ಟಮಾತಿನ ದಿವಂಗತ ಪಡಗಾನೂರ ಶಂಕರಗೌಡರಿಂದ. ಮೈಸೂರು ರಾಜ್ಯದ ಸಿಂದಗಿ ವಿಧಾನಸಭಾ ಕ್ಷೇತ್ರವನ್ನು 1957 ಹಾಗೂ 1972ರಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಮೂಲಕ ಪ್ರತಿನಿಧಿಸಿದ್ದ ಶಂಕರಗೌಡರ ಈ ಗ್ರಾಮ ಇಂದು ಹಲವು ಸಮಸ್ಯೆಗಳಿಗೆ ಬಳಲುತ್ತಿದೆ.
2011 ರ ಜನಗಣತಿಯ ಪ್ರಕಾರ 491 ಕುಟುಂಬಗಳಿಂದ 2,746 ಜನಸಂಖ್ಯೆ ಹೊಂದಿರುವ ಗ್ರಾಮದಲ್ಲಿ ಯಾವುದೇ ಸರ್ಕಾರಿ ಕಚೇರಿ, ಶಿಕ್ಷಣ ಸಂಸ್ಥೆಗಳಿಲ್ಲ. ಈ ಕುರಿತು ದಿ. ಶಂಕರಗೌಡರ ಪುತ್ರ ಡಾ.ಎಸ್.ಎಸ್. ಪಾಟೀಲ ಮಾತನಾಡಿ, ‘ಪಡಗಾನೂರ ಗ್ರಾಮ ಹಲವು ವಿಶೇಷಗಳನ್ನು ಹೊಂದಿದ್ದು ಅಭಿವೃದ್ಧಿಯಲ್ಲಿ ಮಾತ್ರ ಶೂನ್ಯವಾಗಿದೆ. ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ 2 ಕಿ.ಮೀ ರಸ್ತೆ ತಗ್ಗು ದಿನ್ನೆಗಳಿಂದ ಕೂಡಿದೆ. ಉಳಿದ 1 ಕಿ.ಮೀ ರಸ್ತೆ 15 ವರ್ಷಗಳಿಂದ ಡಾಂಬರ್ ಕಾಣದಾಗಿದೆ. ಇನ್ನೂ ಗ್ರಾಮದ ಬಹುತೇಕ ರಸ್ತೆಗಳಲ್ಲಿ ಚರಂಡಿಗಳಿಲ್ಲದೇ ಕೊಳಚೆ ನೀರು ಹರಿಯುತ್ತಿರುತ್ತದೆ. ಇಲ್ಲಿ ಯಾವುದೇ ಬ್ಯಾಂಕ್, ಸರ್ಕಾರಿ ಪ್ರೌಢಶಾಲೆ, ಕಾಲೇಜು ಇಲ್ಲ.
ಚಾಲಕ್ಯರ ಕಾಲದ ಐತಿಹಾಸಿಕ ಸೋಮೇಶ್ವರ ದೇಗುಲದ ಸ್ಮಾರಕಕ್ಕೆ ರಕ್ಷಣೆಯೂ ಇಲ್ಲ. ದಿಟ್ಟಮಾತಿನ ಸ್ವಾತಂತ್ರ್ಯ ಹೋರಾಟಗಾರ ಶಾಸಕ ದಿ.ಶಂಕರಗೌಡರ ಕುರಿತು ಗ್ರಾಮದಲ್ಲಿ ಯಾವುದೇ ಪ್ರತಿಮೆ, ರಸ್ತೆ, ಸ್ಮಾರಕಗಳಿಲ್ಲ ಎಂದು ಬೇಸರ ವ್ಯಕ್ತಪಡಿಸುತ್ತಾರೆ ಸ್ಥಳೀಯರು.
ಪಡಗಾನೂರ ಗ್ರಾಮದಲ್ಲಿ ಈಗಷ್ಟೇ 2 ಸಿ.ಸಿ ರಸ್ತೆ ನಿರ್ಮಿಸಲಾಗಿದೆ. ಉಳಿದಂತೆ ಇತರ ರಸ್ತೆಗಳ ಸ್ಥಿತಿ ಹೇಳತೀರದು. ಗ್ರಾಮ ಹಾಗೂ ಗ್ರಾಮದ ತಾಂಡಾ ಸೇರಿ 9 ಗ್ರಾಮ ಪಂಚಾಯಿತಿ ಸದಸ್ಯರು ಪ್ರತಿನಿಧಿಸುತ್ತಿದ್ದು, ಪಂಚಾಯಿತಿ ಕೇಂದ್ರ ಸ್ಥಾನಕ್ಕಾಗಿ ಹೋರಾಟ ಮಾಡಿದ್ದರೂ, ನ್ಯಾಯ ದೊರೆಯದೇ 25 ಕಿ.ಮೀ ದೂರದ ಮುಳಸಾವಳಗಿ ಗ್ರಾಮದ ಪಂಚಾಯಿತಿಗೆ ಸೇರ್ಪಡೆ ಮಾಡಲಾಗಿದೆ. ನಮ್ಮ ಎಲ್ಲ ಕಾರ್ಯಗಳಿಗೆ ಅಲ್ಲಿಗೆ ಅಲೆಯುವಂತಾಗಿದೆ. ನಮ್ಮ ಗ್ರಾಮದವರೇ ಈಗ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷರಾದರೂ ಕಳೆದ ಹಲವು ದಿನಗಳಿಂದ ಸರಿಯಾದ ಅನುದಾನ ದೊರೆಯದ ಕಾರಣ ಅಭಿವೃದ್ಧಿ ಮರೀಚಿಕೆಯಾಗಿದೆ. ಗ್ರಾಮದ ಐತಿಹಾಸಿಕ ಸೋಮೇಶ್ವರ ದೇವಾಲಯ ವಕ್ಫ್ ವ್ಯಾಪ್ತಿಯಲ್ಲಿದೆ ಎಂದು ನೋಟಿಸ್ ನೀಡಲಾಗಿದೆ. ಹೀಗೆ ನಮ್ಮ ಗ್ರಾಮ ಹಲವು ಸಮಸ್ಯೆಗಳಿಂದ ಬಳಲುತ್ತ ಪ್ರಗತಿ ವಂಚಿತವಾಗಿದೆ ಎನ್ನುತ್ತಾರೆ ದಲಿತ ಸಂಘರ್ಷ ಸಮಿತಿಯ ತಾಲ್ಲೂಕು ಸಂಚಾಲಕ ರಾಜು ಸಿಂದಗೇರಿ ಹಾಗೂ ಕಾಶೀನಾಥ ಹಿರೇಮಠ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.