ವಿಜಯಪುರ: ಕ್ರೀಡೆ ಎನ್ನುವುದು ಕೇವಲ ಒಂದು ದಿನದ ಚಟುವಟಿಕೆಯಾಗದೆ, ಅದು ನಮ್ಮ ನಿತ್ಯ ಜೀವನದ ಅವಿಭಾಜ್ಯ ಅಂಗವಾಗಬೇಕು ಎಂದು ಬೆಂಗಳೂರಿನ ಅಂತರರಾಷ್ಟ್ರೀಯ ಕ್ರೀಡಾಪಟು ಬಿಂದು ರಾಣಿ ಜಿ. ಹೇಳಿದರು.
ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಕ್ರೀಡಾ ನಿರ್ದೇಶನಾಲಯ ಹಾಗೂ ದೈಹಿಕ ಶಿಕ್ಷಣ ಅಧ್ಯಯನ ಮತ್ತು ಕ್ರೀಡಾ ವಿಜ್ಞಾನ ವಿಭಾಗದ ಸಹಯೋಗದಲ್ಲಿ ಬುಧವಾರ ಹಮ್ಮಿಕೊಂಡಿದ್ದ 18ನೇ ಅಂತರ ಮಹಿಳಾ ಮಹಾವಿದ್ಯಾಲಯಗಳ ಅಥ್ಲೇಟಿಕ್ ಕ್ರೀಡಾಕೂಟ ಉದ್ಘಾಟಿಸಿ ಅವರು ಮಾತನಾಡಿದರು.
ಕ್ರೀಡೆ ದೇಹಕ್ಕೆ ಶಕ್ತಿ ನೀಡುವುದರ ಜೊತೆಗೆ ಮನಸ್ಸಿಗೆ ಶಾಂತಿ ಮತ್ತು ಶಿಸ್ತನ್ನು ಒದಗಿಸುತ್ತದೆ. ಇತ್ತೀಚಿನ ದಿನಗಳಲ್ಲಿ ಕ್ರೀಡೆಯು ಕ್ರೀಡಾ ವಿಜ್ಞಾನವಾಗಿ ವಿಸ್ತಾರಗೊಂಡಿದ್ದು, ಆರೋಗ್ಯ ಮತ್ತು ಜೀವನಶೈಲಿಯಲ್ಲಿ ಅದರ ಪ್ರಾಮುಖ್ಯತೆಯನ್ನು ತೋರಿಸುತ್ತದೆ ಎಂದರು.
ನಗರದ ಕೆನರಾ ಬ್ಯಾಂಕಿನ ಡಿವಿಜನಲ್ ಮ್ಯಾನೇಜರ್ ರೇಣುಕಾ ಜಿ. ಮಾತನಾಡಿ, ಶಿಕ್ಷಣ ಎನ್ನುವುದು ಜೀವನದ ದಿಶೆಯನ್ನು ತೋರಿಸುವ ದೀಪದಂತೆ, ನಮ್ಮ ಜ್ಞಾನ ಮತ್ತು ಕೌಶಲಗಳನ್ನು ಅಭಿವೃದ್ಧಿಪಡಿಸಲು ಮಾರ್ಗದರ್ಶಕವಾಗುತ್ತದೆ. ಆದರೆ, ವಿದ್ಯೆಯ ಜೊತೆಗೆ ಕ್ರೀಡೆಯೂ ಜೀವನದ ಮಹತ್ವದ ಭಾಗವಾಗಿದೆ ಎಂದರು.
ಕ್ರೀಡಾಪಟುಗಳು ತಮ್ಮ ಗುರಿ ತಲುಪಲು ತೋರಿಸುವ ಶ್ರದ್ಧೆ, ಶಿಸ್ತು, ಮತ್ತು ತ್ಯಾಗಗಳು ಜೀವನದಲ್ಲಿ ಯಶಸ್ಸಿನ ದಾರಿ ತೋರಿಸುತ್ತವೆ. ಅದನ್ನು ನಾವು ಶ್ರೇಷ್ಠ ಗುರುವಿನ ಗುಣಗಳೊಂದಿಗೆ ಹೋಲಿಸಬಹುದು. ಶಿಕ್ಷಣ ಮತ್ತು ಕ್ರೀಡೆಗಳ ಸಮನ್ವಯವು ದೈಹಿಕ, ಮಾನಸಿಕ, ಮತ್ತು ಸಾಮಾಜಿಕ ಅಭಿವೃದ್ಧಿಗೆ ಸಹಾಯ ಮಾಡುತ್ತದೆ ಎಂದರು.
ಮಹಿಳಾ ವಿವಿಯ ಕುಲಸಚಿವ ಶಂಕರಗೌಡ ಸೋಮನಾಳ ಮಾತನಾಡಿ, ಕ್ರೀಡೆ ಕೇವಲ ದೈಹಿಕ ಚಟುವಟಿಕೆಯಲ್ಲ, ಅದು ಶಿಸ್ತು, ಪರಿಶ್ರಮ, ಮತ್ತು ತಂಡದ ಶಕ್ತಿಯನ್ನು ಬೆಳಸುವ ಒಂದು ಪ್ರಕ್ರಿಯೆ ಎಂದು ಹೇಳಿದರು.
ಮಹಿಳಾ ವಿವಿಯ ಮೌಲ್ಯಮಾಪನ ಕುಲಸಚಿವ ಪ್ರೊ.ಎಚ್.ಎಂ.ಚಂದ್ರಶೇಖರ ಮಾತನಾಡಿ, ಉತ್ತಮ ಕ್ರೀಡಾಪಟುಯಾಗಬೇಕಾದರೆ ನಿರಂತರ ಪರಿಶ್ರಮ, ಶಿಸ್ತು, ಮತ್ತು ಎಲ್ಲಾ ಕ್ರೀಡೆಗಳ ತಂತ್ರಗಳನ್ನು ಕರಗತ ಮಾಡಿಕೊಳ್ಳುವ ಮನೋಭಾವನೆಯು ಅವಶ್ಯಕವಾಗಿದೆ ಎಂದರು.
ಮಹಿಳಾ ವಿವಿಯ ಕುಲಪತಿ ಪ್ರೊ.ಬಿ.ಕೆ.ತುಳಸಿಮಾಲ ಮಾತನಾಡಿ, 400ಕ್ಕೂ ಹೆಚ್ಚು ಕ್ರೀಡಾಪಟುಗಳು ಈ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದು, ಕ್ರೀಡೆಯ ಮಹತ್ವ ಮತ್ತು ಪ್ರಭಾವವನ್ನು ಸಾರುತ್ತದೆ. ಕ್ರೀಡೆ ಕೇವಲ ಮನರಂಜನೆಗೆ ಮಾತ್ರ ಸೀಮಿತವಿಲ್ಲ, ಅದು ಸಮಾನತೆ, ತಂಡದ ಒಗ್ಗಟ್ಟು ಮತ್ತು ಸಮಸ್ಯೆ ಬಗೆಹರಿಸುವ ಕೌಶಲವನ್ನು ಕಲಿಸುವ ಶ್ರೇಷ್ಠ ಮಾಧ್ಯಮವಾಗಿದೆ ಎಂದರು.
ರಾಜ್ಯದ ವಿವಿಧ ಜಿಲ್ಲೆಗಳಿಂದ 45 ಮಹಿಳಾ ಕಾಲೇಜುಗಳ ಮಹಿಳಾ ಕ್ರೀಡಾ ತಂಡಗಳು, 227 ಕ್ರೀಡಾಪಟುಗಳು ಆಗಮಿಸಿದ್ದಾರೆ. ಕ್ರೀಡಾಕೂಟಕ್ಕೆ ಆಗಮಿಸಿದ ಎಲ್ಲ ಕ್ರೀಡಾತಂಡಗಳು ಪಥಸಂಚಲನ ನಡೆಸಿದರು.
ಕ್ರೀಡಾ ನಿರ್ದೇಶಕ ಪ್ರೊ.ಸಕ್ಪಾಲ ಹೂವಣ್ಣ, ದೈಹಿಕ ಶಿಕ್ಷಣ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ. ಅಶ್ವಿನಿ ಕೆ.ಎನ್ ಹಾಗೂ ಸಂಶೋಧನಾ ವಿದ್ಯಾರ್ಥಿನಿ ಕರುಣಾ, ದೈಹಿಕ ಶಿಕ್ಷಣ ವಿಭಾಗದ ಪ್ರಾಧ್ಯಾಪಕ ಡಾ.ಹನುಮಂತಯ್ಯ ಪೂಜಾರಿ, ದೈಹಿಕ ಶಿಕ್ಷಣ ವಿಭಾಗದ ಪ್ರಾಧ್ಯಾಪಕ ಡಾ.ರಾಜಕುಮಾರ ಮಾಲಿಪಾಟೀಲ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.