ಮುದ್ದೇಬಿಹಾಳ: ಹೆಚ್ಚುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ ಕಾನೂನು ಸುವ್ಯವಸ್ಥೆ ಪರಿಪಾಲನೆಗೆ ಮುದ್ದೇಬಿಹಾಳದಲ್ಲಿ ನಗರ ಪೊಲೀಸ್ ಠಾಣೆಯನ್ನು ಮಂಜೂರು ಮಾಡಬೇಕು ಎಂಬ ಬೇಡಿಕೆ ಕೇಳಿಬಂದಿದೆ.
ಮುಂಬರುವ ಬಜೆಟ್‌ನಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಹೊಸ ಪೊಲೀಸ್ ಠಾಣೆಗಳ ಪ್ರಸ್ತಾಪದ ಸಮಯದಲ್ಲಿ ನಮ್ಮೂರಿಗೂ ನಗರ ಠಾಣೆಯನ್ನು ಘೋಷಣೆ ಮಾಡುವರೇ ಎಂಬ ನಿರೀಕ್ಷೆ ಇಲ್ಲಿನ ನಾಗರಿಕರಲ್ಲಿದೆ.
ಮುದ್ದೇಬಿಹಾಳ ತಾಲ್ಲೂಕಿನಲ್ಲಿ ಅಂದಾಜು 70ಕ್ಕೂ ಹೆಚ್ಚು ಹಳ್ಳಿಗಳಿಗೆ ಒಂದು ಪೊಲೀಸ್ ಠಾಣೆ ಇದ್ದು, ನಾಲತವಾಡದಲ್ಲಿ ಒಂದು ಹೊರ ಠಾಣೆ ಇದೆ. ಆದರೆ, ಸಿಬ್ಬಂದಿ ಕೊರತೆ ಹೆಚ್ಚಾಗಿದ್ದರಿಂದ ಕಾನೂನು ಸುವ್ಯವಸ್ಥೆ ನಿರ್ವಹಣೆ ಕಷ್ಟಸಾಧ್ಯವಾಗಿದೆ.
ಮುದ್ದೇಬಿಹಾಳ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಸದ್ಯಕ್ಕೆ 58 ಅಧಿಕಾರಿ ಸೇರಿ ಸಿಬ್ಬಂದಿ ಇದ್ದಾರೆ. ಅದರಲ್ಲಿ ನಾಲ್ಕು ಹುದ್ದೆಗಳು ಖಾಲಿ ಇವೆ. 58 ಜನ ಸೇವೆ ಸಲ್ಲಿಸುತ್ತಿದ್ದು, ಒಬ್ಬರು ಪಿಎಸ್‌ಐ, ಅಪರಾಧ ವಿಭಾಗದ ಪಿಎಸ್‌ಐ, ಮೂವರು ಎಎಸ್‌ಐ, 51 ಪಿಸಿ, ನಾಲ್ವರು ಡಬ್ಲ್ಯುಪಿಸಿ ಸೇವೆಯಲ್ಲಿದ್ದಾರೆ.
ಅದರಲ್ಲಿ ಒಬ್ಬರು ಎಎಸ್‌ಐ, ಮೂವರು ಪಿಸಿಗಳ ಹುದ್ದೆ ಖಾಲಿ ಉಳಿದಿದೆ. ಈ ಸಿಬ್ಬಂದಿ ಸಂಖ್ಯೆಯಲ್ಲಿಯೇ ಇಬ್ಬರು ಮಹಿಳಾ ಪೇದೆಗಳು ಆರೋಗ್ಯ ಸಮಸ್ಯೆಯಿಂದ ರಜೆಯಲ್ಲಿದ್ದಾರೆ.
ಅಪರಾಧ, ಕಳ್ಳತನ, ಬೀಟ್ ಸಂಚಾರ, ಜಾತ್ರೆ ಉತ್ಸವ, ಭದ್ರತೆ, ಚುನಾವಣೆ ಮೊದಲಾದ ಕಾರ್ಯಗಳಿಗೆ ಇಷ್ಟೇ ಸಂಖ್ಯೆಯಲ್ಲಿರುವ ಪೊಲೀಸರು ಸೇವೆ ಸಲ್ಲಿಸಬೇಕಾಗಿದೆ. ನಾಲತವಾಡ ಹೊರಠಾಣೆಗೆ ಒಬ್ಬ ಎಎಸ್‌ಐ, ಒಬ್ಬ ಎಚ್.ಸಿ., ಮೂವರು ಪಿಸಿ ಇರಬೇಕಿದ್ದು, ಮೂವರು ಪಿಸಿಗಳು ಮಾತ್ರ ಇದ್ದಾರೆ.
ಪಕ್ಕದ ಬಸವನ ಬಾಗೇವಾಡಿ ಮತಕ್ಷೇತ್ರದಲ್ಲಿ ಏಳು ಪೊಲೀಸ್ ಠಾಣೆಗಳಿವೆ. ಆದರೆ, ಮುದ್ದೇಬಿಹಾಳ ಕ್ಷೇತ್ರದಲ್ಲಿ ಎರಡೇ ಪೊಲೀಸ್ ಠಾಣೆಗಳಿವೆ. ಹೀಗಾಗಿ ಮುದ್ದೇಬಿಹಾಳ ಪಟ್ಟಣದ ಸುತ್ತಮುತ್ತಲಿನ ಹಳ್ಳಿಗಳು, ಗ್ರಾಮ ಪಂಚಾಯಿತಿಗಳನ್ನು ಒಳಗೊಂಡ ಒಂದು ನಗರ ಪೊಲೀಸ್ ಠಾಣೆಯನ್ನು ರಚಿಸಿ ಅದನ್ನು ಮಂಜೂರಿ ಮಾಡುವಂತೆ ಈಗಿನ ಮುಖ್ಯಮಂತ್ರಿ ಸಿದ್ಧರಾಮಯ್ಯ, ಹಿಂದಿನ ಸಿಎಂಗಳಾದ ಬಿ.ಎಸ್.ಯೂಡಿಯೂರಪ್ಪ, ಬಸವರಾಜ ಬೊಮ್ಮಾಯಿ, ನಾಲ್ವರು ಐಜಿಪಿಗಳಿಗೆ ಮನವಿ ಪತ್ರ ಸಲ್ಲಿಸಿದ್ದೇವೆ. ಹೆಚ್ಚುತ್ತಿರುವ ಅಪರಾಧ, ಕಳ್ಳತನ ಪ್ರಕರಣಗಳ ತಡೆಗೆ, ಟ್ರಾಫಿಕ್ ನಿಯಂತ್ರಣಕ್ಕೆ ಪೊಲೀಸ್ ಠಾಣೆ ಆರಂಭಿಸಬೇಕು ಎಂಬುದು ನಮ್ಮ ಹಕ್ಕೊತ್ತಾಯವಾಗಿದೆ ಎಂದು ನಗರಾಭಿವೃದ್ಧಿ ಹೋರಾಟ ವೇದಿಕೆ ಸಂಚಾಲಕ ಸವರಾಜ ನಂದಿಕೇಶ್ವರಮಠ ಹೇಳಿದರು.
ಮುದ್ದೇಬಿಹಾಳ ತಾಲ್ಲೂಕಿನ ಗಡಿಭಾಗದಲ್ಲಿರುವ ನಾರಾಯಣಪೂರ ಜಲಾಶಯದ 33 ಗೇಟ್‌ಗಳಲ್ಲಿ 25 ಗೇಟುಗಳು ವಿಜಯಪುರ ಜಿಲ್ಲೆಯ ವ್ಯಾಪ್ತಿಗೆ ಬರುವ ಕಾರಣ ಇಲ್ಲಿ ಭದ್ರತೆಗೆ ಪ್ರತ್ಯೇಕ ಪೊಲೀಸ್ ಠಾಣೆ ತೆರೆಯಬೇಕಾಗಿದೆ. ಆಲಮಟ್ಟಿಯ ಡ್ಯಾಂನ ಭದ್ರತೆಗೆ ಸ್ಟೇಷನ್ ಮಂಜೂರು ಮಾಡಿರುವ ಸರ್ಕಾರ ನಾರಾಯಣಪೂರ ಬಸವಸಾಗರ ಜಲಾಶಯದ ಭಾಗಶಃ ಗೇಟುಗಳ ಜವಾಬ್ದಾರಿ ಇರುವ ಮುದ್ದೇಬಿಹಾಳ ತಾಲ್ಲೂಕಿನಲ್ಲಿ ನಗರ ಪೊಲೀಸ್ ಠಾಣೆಯನ್ನು ಆರಂಭಿಸಬೇಕಾಗಿರುವುದು ಇಂದಿನ ತುರ್ತು ಬೇಡಿಕೆಗಳಲ್ಲಿ ಒಂದಾಗಿದೆ.
ಮುದ್ದೇಬಿಹಾಳ ನಗರ ಹಾಗೂ ಗ್ರಾಮೀಣ ಪೊಲೀಸ್ ಠಾಣೆ ತಾಳಿಕೋಟೆಗೆ ಪಿ.ಐ ಠಾಣೆ ಆರಂಭಿಸಲು ಗೃಹಸಚಿವರು ಐಜಿ ಎಡಿಜಿಪಿಗೆ ಪತ್ರ ಬರೆದಿದ್ದೇನೆ. ಎಸ್ಪಿ ಅವರಿಂದ ವಿವರಣೆಯನ್ನು ಕೇಳಿದ್ದು ಇದು ಬಜೆಟ್‌ನಲ್ಲಿ ಪ್ರಸ್ತಾಪಿಸುವಂತಹ ವಿಷಯವಲ್ಲ. ಬೇಡಿಕೆಗೆ ತಕ್ಕಂತೆ ಸರ್ಕಾರ ಮಂಜೂರಾತಿ ಕೊಡುತ್ತದೆ. ಬೆಳೆದಿರುವ ನಗರಕ್ಕೆ ಹೊಸದಾಗಿ ಗ್ರಾಮೀಣ ನಗರ ಪೊಲೀಸ್ ಠಾಣೆ ಆರಂಭಕ್ಕೆ ಸರ್ಕಾರ ಕ್ರಮ ಕೈಗೊಳ್ಳುವ ನಿರೀಕ್ಷೆ ಇದೆ. -ಸಿ.ಎಸ್.ನಾಡಗೌಡ ಶಾಸಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.