ADVERTISEMENT

2 ಪಿಸ್ತೂಲ್, 7 ಜೀವಂತ ಗುಂಡು, ಚಿನ್ನಾಭರಣ ವಶ

ಝಳಕಿ ಪೊಲೀಸರ ಬಲೆಗೆ ಬಿದ್ದ ಅಂತರ ರಾಜ್ಯ ಕಳ್ಳರು

​ಪ್ರಜಾವಾಣಿ ವಾರ್ತೆ
Published 9 ಮೇ 2019, 15:56 IST
Last Updated 9 ಮೇ 2019, 15:56 IST
ಚಡಚಣ ಸಮೀಪದ ಝಳಕಿ ಗ್ರಾಮದಲ್ಲಿ ಪೊಲೀಸ್‌ ಬಲೆಗೆ ಬಿದ್ದ ಅಂತರ ರಾಜ್ಯ ಕಳ್ಳರಿಂದ ವಶಪಡಿಸಿಕೊಂಡ ಚಿನ್ನಾಭರಣ, ಎರಡು ಪಿಸ್ತೂಲ್ ಹಾಗೂ ಒಂದು ಬೈಕ್‌ನೊಂದಿಗೆ ಪೊಲೀಸರು
ಚಡಚಣ ಸಮೀಪದ ಝಳಕಿ ಗ್ರಾಮದಲ್ಲಿ ಪೊಲೀಸ್‌ ಬಲೆಗೆ ಬಿದ್ದ ಅಂತರ ರಾಜ್ಯ ಕಳ್ಳರಿಂದ ವಶಪಡಿಸಿಕೊಂಡ ಚಿನ್ನಾಭರಣ, ಎರಡು ಪಿಸ್ತೂಲ್ ಹಾಗೂ ಒಂದು ಬೈಕ್‌ನೊಂದಿಗೆ ಪೊಲೀಸರು   

ಚಡಚಣ: ಝಳಕಿ ಗ್ರಾಮದ ರಾಷ್ಟ್ರೀಯ ಹೆದ್ದಾರಿ–13 ರ ಪಕ್ಕದಲ್ಲಿರುವ ಬೀರೇಶ್ವರ ದೇವಾಲಯದ ಬಳಿ ಅನುಮಾನಾಸ್ಪದವಾಗಿ ಬೈಕ್‌ನಲ್ಲಿ ತೆರಳುತ್ತಿದ್ದ ಇಬ್ಬರು ಅಂತರ ರಾಜ್ಯ ಕಳ್ಳರನ್ನು ಝಳಕಿ ಪೊಲೀಸರು ಗುರುವಾರ ಬೆಳಗಿನ ಜಾವ ಬಂಧಿಸಿದ್ದಾರೆ.

ಮಹಾರಾಷ್ಟ್ರದ ಸೊಡ್ಡಿ ಗ್ರಾಮದ ರಮೇಶ ಜಕ್ಕಪ್ಪ ಮಾಳಿ (25) ಹಾಗೂ ಹಾವಿನಾಳ ಗ್ರಾಮದ ಮೋದಿನಸಾಬ ವಾಲಿಕಾರ(19) ಬಂಧಿತರು. ಬಂಧಿತರಿಂದ ಒಂದು ರಿವಾಲ್ವರ್‌, ನಾಡ ಪಿಸ್ತೂಲ್, 7 ಜೀವಂತ ಗುಂಡುಗಳು, ಅಂದಾಜು ₹6 ಲಕ್ಷ ಮೌಲ್ಯದ 184 ಗ್ರಾಂ ಚಿನ್ನಾಭರಣ, ₹17 ಸಾವಿರ ಬೆಲೆಬಾಳುವ 235 ಗ್ರಾಂ ಬೆಳ್ಳಿ ಆಭರಣ, ಬೈಕ್ ವಶಪಡಿಸಿಕೊಳ್ಳಲಾಗಿದೆ.

ಸಿಪಿಐ ಎಚ್.ಆರ್.ಪಾಟೀಲ ನೇತೃತ್ವದಲ್ಲಿ ಝಳಕಿ ಪೊಲೀಸ್ ಠಾಣೆ ಪಿಎಸ್‌ಐ ಕುಮಾರ ಹಿತ್ತಲಮನಿ ಹಾಗೂ ಸಿಬ್ಬಂದಿಗಳಾದ ಹವಾಲ್ದಾರ ಗೋವಿಂದ ರಾಠೋಡ, ಭೀಮರಾಯ ಕ್ಷತ್ರಿ, ಪೊಲೀಸ್ ಕಾನ್‌ಸ್ಟೆಬಲ್‌ಗಳಾದ ಪ್ರಕಾಶ ಮೈದರಗಿ, ರಾಜು ಹುಂಡೇಕಾರ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ಕೈಗೊಂಡಿದ್ದರು. ಪ್ರಕರಣ ದಾಖಲಾಗಿದೆ.

ADVERTISEMENT

ಈ ವೇಳೆ ಮಾತನಾಡಿದ ಸಿಪಿಐಎಚ್.ಆರ್.ಪಾಟೀಲ, ಮಹಾರಾಷ್ಟ್ರದ ಸೊಡ್ಡಿ ಗ್ರಾಮದ ರಮೇಶ ಮಾಳಿ ಕುಖ್ಯಾತ ಅಂತರ ರಾಜ್ಯ ಕಳ್ಳ. ಈತನ ಮೇಲೆ ವಿಜಯಪುರ, ಅಫಜಲಪುರ, ರಾಮದುರ್ಗ ಹಾಗೂ ಮಹಾರಾಷ್ಟ್ರದ ವಿವಿಧ ಠಾಣೆಗಳಲ್ಲಿ 14 ಪ್ರಕರಣಗಳು ದಾಖಲಾಗಿವೆ. ಕಳೆದ ಜನವರಿ 11 ರಂದು ಅಫಜಲಪುರ ನ್ಯಾಯಾಲಯದಿಂದ ಗೋಕಾಕ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗುವಾಗ ವಿಜಯಪುರ ಬಸ್ ನಿಲ್ದಾಣದಲ್ಲಿ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿ ಪರಾರಿಯಾಗಿದ್ದ. ಈಗ ಪೊಲೀಸರ ಸಮಯ ಪ್ರಜ್ಞೆಯಿಂದ ಇಬ್ಬರೂ ಕುಖ್ಯಾತ ಕಳ್ಳರನ್ನು ಬಂಧಿಸಲಾಯಿತು ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.