ADVERTISEMENT

ಇಂಡಿ ಕೆರೆಗಳಿಗೆ ನೀರು ತುಂಬುವ ಯೋಜನೆಗೆ ಅಸ್ತು

ಶಾಸಕ ಎಂ.ಬಿ.ಪಾಟೀಲ್‌ ಬೇಡಿಕೆಗೆ ಮುಖ್ಯಮಂತ್ರಿ ಸ್ಪಂದನೆ

​ಪ್ರಜಾವಾಣಿ ವಾರ್ತೆ
Published 9 ಜುಲೈ 2021, 12:41 IST
Last Updated 9 ಜುಲೈ 2021, 12:41 IST
ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಶುಕ್ರವಾರ ಭೇಟಿ ಮಾಡಿದ ಮಾಜಿ ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್‌ ಅವರು ಪುಷ್ಪಗುಚ್ಛ ನೀಡಿ ಅಭಿನಂದಿಸಿ, ಇಂಡಿ ಭಾಗದ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಅನುಮೋದನೆ ನೀಡುವಂತೆ ಮನವಿ ಸಲ್ಲಿಸಿದರು
ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಶುಕ್ರವಾರ ಭೇಟಿ ಮಾಡಿದ ಮಾಜಿ ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್‌ ಅವರು ಪುಷ್ಪಗುಚ್ಛ ನೀಡಿ ಅಭಿನಂದಿಸಿ, ಇಂಡಿ ಭಾಗದ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಅನುಮೋದನೆ ನೀಡುವಂತೆ ಮನವಿ ಸಲ್ಲಿಸಿದರು   

ವಿಜಯಪುರ: ಜಿಲ್ಲೆಯ ಇಂಡಿ ಭಾಗದ 16 ಕೆರೆಗಳಿಗೆ ತಿಡಗುಂದಿ ಅಕ್ವಾಡಕ್ಟ್‌ ಕಾಲುವೆ ಮೂಲಕ ನೀರು ತುಂಬಿಸುವ ಯೋಜನೆಗೆ ಅಗತ್ಯ ಅನುದಾನ ಬಿಡುಗಡೆ ಮಾಡುವಂತೆ ಮಾಜಿ ಜಲಸಂಪನ್ಮೂಲ ಸಚಿವ, ಶಾಸಕ ಎಂ.ಬಿ.ಪಾಟೀಲ್ ಅವರ ಬೇಡಿಕೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸ್ಪಂದಿಸಿದ್ದಾರೆ.

₹ 140 ಕೋಟಿ ಮೊತ್ತದ ಕಾಮಗಾರಿಯನ್ನು ಕೃಷ್ಣಾ ಭಾಗ್ಯ ಜಲನಿಗಮದಿಂದ ಕೈಗೆತ್ತಿಕೊಳ್ಳಲುಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆದೇಶ ಹೊರಡಿಸಿದ್ದಾರೆ.

ಮುಖ್ಯಮಂತ್ರಿ ಅವರನ್ನು ಶುಕ್ರವಾರ ಬೆಳಿಗ್ಗೆ ಭೇಟಿ ಮಾಡಿದ್ದ ಎಂ.ಬಿ.ಪಾಟೀಲ್‌,ಭೀಮಾನದಿ ಪಾತ್ರದಲ್ಲಿ ನೀರಿನ ಕೊರತೆಯ ಕಾರಣ ಇಂಡಿ ಭಾಗದ ಕೆಲವು ಪ್ರದೇಶಕ್ಕೆ ನೀರಾವರಿ ಸೌಕರ್ಯ ಕಲ್ಪಿಸಲಾಗಿಲ್ಲ. ನಾನು ಜಲಸಂಪನ್ಮೂಲ ಸಚಿವನಾಗಿದ್ದಾಗ ಕೃಷ್ಣಾ ನದಿ ನೀರನ್ನು ಎತ್ತಿ, ಭೀಮಾ ಭಾಗದ ಈ ಹಳ್ಳಿಗಳಿಗೆ ನೀರೊದಗಿಸಲು ಏಷ್ಯಾದಲ್ಲಿಯೇ ಅತೀ ದೊಡ್ಡ 16 ಕಿ.ಮೀ ಉದ್ದದ ತಿಡಗುಂದಿ ಅಕ್ವಾಡಕ್ಟ್ ನಿರ್ಮಿಸಿ, ಅಲ್ಲಿಂದ ಕಾಲುವೆ ಮೂಲಕ ಇಂಡಿ ಭಾಗದ 65 ಸಾವಿರ ಎಕರೆ ಪ್ರದೇಶ ನೀರಾವರಿ ಸೌಕರ್ಯ ಹಾಗೂ 23 ಕೆರೆಗಳನ್ನು ತುಂಬಿಸಲು ಯೋಜನೆ ರೂಪಿಸಲಾಗಿದೆ ಎಂದರು.

ADVERTISEMENT

ಅಕ್ವಾಡಕ್ಟ್ ಹಾಗೂ ಕಾಲುವೆ ಕಾರ್ಯ ಮುಗಿದಿದ್ದು, ನೀರು ಹರಿಸಲಾಗಿದೆ. ತಿಡಗುಂದಿ ಕಾಲುವೆಯಿಂದ ಲಿಫ್ಟ್ ಮಾಡಿ, 23 ಕೆರೆಗಳನ್ನು ತುಂಬಿಸುವ ಯೋಜನೆಗೆ ಈಗಾಗಲೇ ಆಡಳಿತಾತ್ಮಕ ಅನುಮೋದನೆ ದೊರೆತಿದ್ದರೂ ಹಣಕಾಸಿನ ಲಭ್ಯತೆ ಇಲ್ಲದ ಕಾರಣ ಕಾಮಗಾರಿ ಆರಂಭಗೊಂಡಿಲ್ಲ ಎಂದು ಹೇಳಿದರು.

ಇಂಡಿ ತಾಲ್ಲೂಕಿನ ಅತೀ ಬರಗಾಲ ಪೀಡಿತ ಈ ಹಳ್ಳಿಗಳು ಕುಡಿಯುವ ನೀರು ಹಾಗೂ ನೀರಾವರಿಯಿಂದ ವಂಚಿತರಾಗಿದ್ದಾರೆ. ಆದರೂ ಇಲ್ಲಿನ ಜನ ಅಲ್ಪನೀರಿನಲ್ಲಿಯೇ ನಿಂಬೆ, ದಾಳಿಂಬೆ ಹಾಗೂ ದ್ರಾಕ್ಷಿ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಇವರಿಗೆ ನೆರವಾಗಲು ತಾವುಗಳು ಈ ಕುರಿತು ವಿಶೇಷ ಗಮನ ಹರಿಸಿ, ಹಣಕಾಸಿನ ನೆರವು ಒದಗಿಸಿದರೆ ಇಂಡಿ ಭಾಗ ನೀರಾವರಿಗೆ ಒಳಪಡುತ್ತದೆ ಹಾಗೂ ತಿಡಗುಂದಿ ಅಕ್ವಾಡೆಕ್ಟ್ ನಿರ್ಮಿಸಿದ ಉದ್ದೇಶವು ಸಫಲವಾಗುತ್ತದೆ ಎಂದು ವಿನಂತಿಸಿದರು.

ಎಂ.ಬಿ.ಪಾಟೀಲ್ ಅವರ ಬೇಡಿಕೆಗೆಸಕಾರಾತ್ಮಕವಾಗಿ ಸ್ಪಂದಿಸಿದ ಮುಖ್ಯಮಂತ್ರಿ, ಸಂಜೆ ವೇಳೆಗೆ ಅನುದಾನ ಬಿಡುಗಡೆ ಆದೇಶ ಹೊರಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದು, ಅದರಂತೆ ಸರ್ಕಾರ ಅಧೀನ ಕಾರ್ಯದರ್ಶಿ ರವೀಂದ್ರ ಕೊಂಡ ₹ 140ಕೋಟಿ ಅಂದಾಜು ಮೊತ್ತದ ಕಾಮಗಾರಿಯನ್ನು ಯುಕೆಪಿ ಹಂತ-3ರ ಅಡಿ ಕೃಷ್ಣಾ ಭಾಗ್ಯ ಜಲನಿಗಮದವ್ಯವಸ್ಥಾಪಕ ನಿರ್ದೇಶಕರಿಗೆ ಮುಂದಿನ ಕ್ರಮ ವಹಿಸುವಂತೆ ತಿಳಿಸಿ, ಕಾಮಗಾರಿ ಕೈಗೆತ್ತಿಕೊಳ್ಳಲು ನಿರ್ದೇಶಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಎಂ.ಬಿ.ಪಾಟೀಲ್, ಜಿಲ್ಲೆಯ 16 ಕೆರೆಗಳನ್ನು ತುಂಬಿಸಲು ಆರ್ಥಿಕ ಅನುದಾನ ಬಿಡುಗಡೆಗೊಳಿಸಿ, ಕಾಮಗಾರಿ ಕೈಗೆತ್ತಿಕೊಳ್ಳಲು ಸೂಚಿಸಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಜಿಲ್ಲೆಯ ಜನತೆಯ ಪರವಾಗಿ ಅಭಿನಂದಿಸುತ್ತೇನೆ ಎಂದು ತಿಳಿಸಿದ್ದಾರೆ.

****

‘ಶಿವಾನುಭ’ ಮರುಮುದ್ರಣಕ್ಕೆ ನೆರವು

ವಚನಪಿತಾಮಹ ಡಾ.ಫ.ಗು.ಹಳಕಟ್ಟಿ ಸಂಪಾದಿಸಿದ ಶಿವಾನುಭ ಪತ್ರಿಕೆಗಳನ್ನು ಮರುಮುದ್ರಿಸಿ, ಸಂಪುಟಗಳ ರೂಪದಲ್ಲಿ ಹೊರತರಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಆರ್ಥಿಕ ನೆರವು ಒದಗಿಸಲು ಮುಖ್ಯಮಂತ್ರಿಗಳಿಗೆ ಬಿ.ಎಲ್.ಡಿ.ಇ ಸಂಸ್ಥೆಯ ಪರವಾಗಿ ಎಂ.ಬಿ.ಪಾಟೀಲ್ ಅವರು ಸಿಎಂಗೆ ಮನವಿ ಮಾಡಿದರು.

ಶಿವಾನುಭವ ಪತ್ರಿಕೆಗಳ ಸಮಗ್ರ ಸಂಪುಟಗಳನ್ನು ಹೊರತರಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ನೆರವು ಒದಗಿಸುವುದಾಗಿಮುಖ್ಯಮಂತ್ರಿ ಯಡಿಯೂರಪ್ಪ ಭರವಸೆ ನೀಡಿರುವುದಾಗಿ ಪಾಟೀಲ ತಿಳಿಸಿದರು.

****

ಇಂಡಿ ಭಾಗದ 16 ಕೆರೆಗಳಿಗೆ ನೀರು ತುಂಬುವ ಯೋಜನೆ ಜಾರಿಯಾಗುವ ಮೂಲಕ ಜಿಲ್ಲೆಯ ಎಲ್ಲ ಭಾಗಗಳ, ಎಲ್ಲ ಯೋಜನೆಗಳನ್ನು ಅನುಷ್ಠಾನಗೊಳಿಸಿದ ತೃಪ್ತಿ ಇದೆ

–ಎಂ.ಬಿ.ಪಾಟೀಲ, ಮಾಜಿ ಜಲ ಸಂಪನ್ಮೂಲ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.