ADVERTISEMENT

ಗಿಡ ನೆಡುವುದೊಂದೇ ಬ್ರಹ್ಮಾಸ್ತ್ರ: ಚಂದ್ರಶೇಖರ

ಭೂತನಾಳ ಕೆರೆಯಂಗಳದಲ್ಲಿ ಕ್ಯಾಂಪಿಂಗ್ ಕಲ್ಚರ್

​ಪ್ರಜಾವಾಣಿ ವಾರ್ತೆ
Published 26 ಜುಲೈ 2021, 15:54 IST
Last Updated 26 ಜುಲೈ 2021, 15:54 IST
ವಿಜಯಪುರ ನಗರದ ಸಮೀಪದಲ್ಲಿರುವ ಭೂತನಾಳ ಕೆರೆಯಂಗಳದಲ್ಲಿ ಕೃಷಿ ಅರಣ್ಯ ವಿಜ್ಞಾನಿ ಚಂದ್ರಶೇಖರ ಬಿರಾದಾರ ನೇತೃತ್ವದಲ್ಲಿ ಆಯೋಜಿಸಲಾಗಿದ್ದ ‘ಕ್ಯಾಂಪಿಂಗ್ ಕಲ್ಚರ್’ಗೆ  ಜ್ಞಾನಯೋಗಾಶ್ರಮದ ಸಿದ್ದೇಶ್ವರ ಶ್ರೀ ಭೇಟಿ ನೀಡಿ ವೀಕ್ಷಿಸಿದರು. ಶಾಸಕ ಎಂ.ಬಿ.ಪಾಟೀಲ ಇದ್ದಾರೆ
ವಿಜಯಪುರ ನಗರದ ಸಮೀಪದಲ್ಲಿರುವ ಭೂತನಾಳ ಕೆರೆಯಂಗಳದಲ್ಲಿ ಕೃಷಿ ಅರಣ್ಯ ವಿಜ್ಞಾನಿ ಚಂದ್ರಶೇಖರ ಬಿರಾದಾರ ನೇತೃತ್ವದಲ್ಲಿ ಆಯೋಜಿಸಲಾಗಿದ್ದ ‘ಕ್ಯಾಂಪಿಂಗ್ ಕಲ್ಚರ್’ಗೆ  ಜ್ಞಾನಯೋಗಾಶ್ರಮದ ಸಿದ್ದೇಶ್ವರ ಶ್ರೀ ಭೇಟಿ ನೀಡಿ ವೀಕ್ಷಿಸಿದರು. ಶಾಸಕ ಎಂ.ಬಿ.ಪಾಟೀಲ ಇದ್ದಾರೆ   

ವಿಜಯಪುರ: ನಾವೆಲ್ಲರೂ ನಿರಂತರವಾಗಿ ಗಿಡಗಳನ್ನು ಕಡಿಯುತ್ತಿದ್ದು, ಭೂಮಿಯನ್ನು ಬೆತ್ತಲು ಮಾಡಿದ್ದೇವೆ. ಭೂಮಿಯಲ್ಲಿ ರಾಸಾಯನಿಕ ಬೆರೆಸಿ ವಿಷಯುಕ್ತ ಮಾಡುತ್ತಿದ್ದೇವೆ. ಇದಕ್ಕೆ ಇನ್ನು ಮುಂದಾದರೂ ನಿರಂತರವಾಗಿ ಗಿಡಗಳನ್ನು ನೆಡುತ್ತ ಹೋಗುವುದೇ ಪರಿಹಾರ ಎಂದು ಕೃಷಿ ಅರಣ್ಯ ವಿಜ್ಞಾನಿ ಚಂದ್ರಶೇಖರ ಬಿರಾದಾರ ಹೇಳಿದರು.

ನಗರದ ಹೊರವಲಯದ ಭೂತನಾಳ ಕೆರೆಯಂಗಳದಲ್ಲಿ ವೃಕ್ಷೊತ್ಥಾನ ಸಂಸ್ಥೆ, ಅರಣ್ಯ ಇಲಾಖೆಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಕ್ಯಾಂಪಿಂಗ್ ಕಲ್ಚರ್ ಶಿಬಿರದ ನೇತೃತ್ವ ವಹಿಸಿ ಮಾತನಾಡಿದರು.

ನಿರಂತರ ಮಳೆಯಾಗುವ ಪ್ರದೇಶದಲ್ಲಿ ಗಿಡಗಳನ್ನು ನೆಟ್ಟು ಅರಣ್ಯೀಕರಣ ಮಾಡುವುದು ಸುಲಭದ ಕೆಲಸ. ಸಂಪೂರ್ಣ ಕಲ್ಲಿನಿಂದ ಕೂಡಿದ್ದ 540 ಎಕರೆ ಕರಾಡದೊಡ್ಡಿಯಲ್ಲಿ ಗಿಡಗಳನ್ನು ನೆಟ್ಟು, ನೀರುಣಿಸಿ ಕೃತಕವಾಗಿ ಅರಣ್ಯ ಸೃಷ್ಟಿಸುವ ಕೆಲಸವನ್ನು ಯಶಸ್ವಿಯಾಗಿ ಮಾಡಿಕೊಂಡು ಬಂದಿರುವುದು ಸಾಹಸದ ಹಾಗೂ ಸವಾಲಿನ ಕೆಲಸ ಎಂದರು.

ADVERTISEMENT

ವಿಜಯಪುರ ಜಿಲ್ಲೆಯಾದ್ಯಂತ ಶಾಲೆ, ಕಾಲೇಜು, ಉದ್ಯಾನವನ, ಸ್ಮಶಾನ ಭೂಮಿ, ಖಾಸಗಿ ಜಮೀನು ಹೀಗೆ ಎಲ್ಲೆಂದರಲ್ಲಿ ಗಿಡಗಳನ್ನು ನೆಡುವ ಅವಕಾಶ ಇರುವಲ್ಲಿ ಗಿಡಗಳನ್ನು ನೆಟ್ಟು ಹಸಿರು ಹೊದಿಕೆ ಹೆಚ್ಚಿಸುವ ಕೆಲಸ ನಿರಂತರ ನಡೆಯಬೇಕು ಎಂದು ಹೇಳಿದರು.

ಶಿಬಿರಕ್ಕೆ ಭೇಟಿ ನೀಡಿದ್ದ ವಿಜಯಪುರ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಶ್ರೀ, ಶಿಬಿರಾರ್ಥಿಗಳೊಂದಿಗೆ ಸಂವಾದ ನಡೆಸಿದರು.

ಈಗಾಗಲೇ ಬರದ ನಾಡು ವಿಜಯಪುರಕ್ಕೆ ನೀರು ತರುವ ಮೂಲಕ ‘ಭಗೀರಥ’ ಎನಿಸಿಕೊಂಡಿರುವ ಮಾಜಿ ಸಚಿವ, ಶಾಸಕ ಎಂ.ಬಿ.ಪಾಟೀಲರು ಅರಣ್ಯ ಬೆಳೆಸುವ ಕೆಲಸದಲ್ಲಿ ತೊಡಗಿಸಿಕೊಂಡಿರುವುದು ಸಂತಸದ ಹಾಗೂ ಶ್ಲಾಘನೀಯ ಕೆಲಸ, ‘ಹೀಂಗ್ ಗಿಡಗಳನ್ನು ಹಚಗೋಂತ ಹೋಗ್ರೀ’ ಎಂದು ಆಶೀರ್ವದಿಸಿದರು.

ಶಾಸಕ ಎಂ.ಬಿ. ಪಾಟೀಲ ಮಾತನಾಡಿ, ಬಬಲೇಶ್ವರ ಮತಕ್ಷೇತ್ರದಲ್ಲಿ 169 ಹಳ್ಳಗಳಿಗೆ ಕಾಲುವೆ ಮುಖಾಂತರ ನೀರು ಹರಿಸಲಾಗುವುದು. ತೇವಾಂಶ ಹೆಚ್ಚಿ ಹಳ್ಳಗಳ ದಂಡೆಗಳ ಎರಡೂ ಬದಿಗಳಲ್ಲಿ ಐದು ಕೋಟಿ ಗಿಡಗಳನ್ನು ಬೆಳೆಸುವ ಯೋಜನೆ ಹಾಕಲಾಗಿದೆ ಎಂದರು.

ಕೆಬಿಜೆಎನ್‌ಎಲ್‌ ಉಪಸಂರಕ್ಷಣಾಧಿಕಾರಿ ಪಿ.ಕೆ.ಪೈ ಮಾತನಾಡಿ, ಕರಾಡದೊಡ್ಡಿಯಲ್ಲಿ ಈಗಾಗಲೇ 66000 ಗಿಡಗಳನ್ನು ನೆಡಲಾಗಿದೆ. ಇದೇ ಪ್ರದೇಶದಲ್ಲಿ 270 ಕ್ಕೂ ಹೆಚ್ಚು ಪ್ರಬೇಧದ ಗಿಡಗಳನ್ನು ಬೆಳೆಸುವ ಮೂಲಕ ಬೆಂಗಳೂರಿನ ಕಬ್ಬನ್ ಪಾರ್ಕಿಗಿಂತಲೂ ದೊಡ್ಡದಾದ ಟ್ರೀ ಪಾರ್ಕ್ ನಿರ್ಮಿಸಲು ಉದ್ದೇಶಿಸಲಾಗಿದೆ ಎಂದರು.

ಕ್ಯಾಂಪಿಂಗ್ ಕಲ್ಚರ್ ಶಿಬಿರದಲ್ಲಿ 30 ಹೆಚ್ಚು ಟೆಂಟ್‌ಗಳಲ್ಲಿ ವಿಜಯಪುರ ನಗರವಲ್ಲದೇ ಜಿಲ್ಲೆಯ ವಿವಿಧೆಡೆಯಿಂದ ಬಂದಿದ್ದ ಪರಿಸರ ಸಂರಕ್ಷಣೆಯ ಸ್ವಯಂ ಸೇವಾ ಸಂಸ್ಥೆಗಳ 60ಕ್ಕೂ ಹೆಚ್ಚು ಸದಸ್ಯರು ಪಾಲ್ಗೊಂಡಿದ್ದರು. ಡಾ.ಮಹಾಂತೇಶ ಬಿರಾದಾರ, ಡಾ.ಮುರುಗೇಶ ಪಟ್ಟಣಶೆಟ್ಟಿ ಮತ್ತಿತರರು ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.